*ಹರೀಶ್ ಬಸವರಾಜ್

ಐದು ನಿಮಿಷಕ್ಕೊಂದು ಟ್ವಿಸ್ಟ್, ಯಾರೂ ಊಹಿಸಲಾರದ ಮರ್ಡರ್ ಮಿಸ್ಟ್ರಿ, ಸಿಕ್ಸ್ತ್ ಸೆನ್ಸ್ನಿಂದ ಕೊಲೆ ರಹಸ್ಯ ಬೇಧಿಸುವ ಬಗೆ… ಹೀಗೆ ಸ್ವಾರಸ್ಯಗಳೇ ಸಿನಿಮಾದಲ್ಲಿವೆ ಎಂದು ಹೇಳಿದ್ದ ಚಿತ್ರತಂಡ ಅದನ್ನು ತೆರೆ ಮೇಲೆ ತರುವಲ್ಲಿ ವಿಫಲವಾಗಿದೆ.
ಬಿಡುಗಡೆಗೆ ಮುನ್ನವೇ ಜಾಗತಿಕವಾಗಿ ಈ ಚಿತ್ರ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತ್ತು. ಬಹುತೇಕ ಹೊಸಬರೇ ಸೇರಿ ಮಾಡಿರುವ ಮತ್ತೊಂದು ಪ್ರಯೋಗಾತ್ಮಕ ಚಿತ್ರ ಎಂಬ ಹಣೆಪಟ್ಟಿಯೂ ಈ ಚಿತ್ರಕ್ಕಿತ್ತು. ಆದರೆ ಪರಿಣಾಮಕಾರಿ ಕತೆ ಮಾಡಿಕೊಳ್ಳುವಲ್ಲಿ ನಿರ್ದೇಶಕರು ಎಡವಿದ್ದಾರೆ.
ಸಿಕ್ತ್ ಸೆನ್ಸ್ನ್ನು ಆಧಾರವಾಗಿಟ್ಟುಕೊಂಡಿರುವ ಸಿನಿಮಾದಲ್ಲಿ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳೇ ಸಿನಿಮಾದ ಕಥಾವಸ್ತು. ಮಾಯೆ ಮತ್ತು ವಾಸ್ತವದ ನಡುವಿನ ಹೋರಾಟ ಎಂಬ ಟ್ಯಾಗ್ಲೈನ್ ಬಹುಶಃ ಮೋಜೊ ನೋಡುವ ಪ್ರೇಕ್ಷಕನನ್ನು ನೋಡಿಯೇ ಇಟ್ಟಂತಿದೆ ಈ ಸಿನಿಮಾ.
ಆಫ್ರಿಕಾದ ಕ್ರಿಯೋಲ್ ಭಾಷೆಯ ಪದವಾಗಿದೆ ಮೋಜೊ. ಹೀಗೆಂದರೆ ಮ್ಯಾಜಿಕ್ ಎಂದರ್ಥ. ಈ ಚಿತ್ರದಲ್ಲಿ ನಾಯಕ ಮೋಹನ್ಗೆ ಸಿಕ್ಸ್ತ್ ಸೆನ್ಸ್ ಇರುತ್ತದೆ. ಇದು ಆಗಾಗ ಜಾಗೃತವಾಗಿ ಮುಂದೆ ಆಗುವ ದುಷ್ಕೃತ್ಯಗಳನ್ನು ತಿಳಿಸುತ್ತಿರುತ್ತದೆ. ಇದು ನಾಯಕನಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಮೋಹನ ತನ್ನ ಗೆಳತಿಯ ಸಹಾಯ ಕೇಳುತ್ತಾನೆ. ವಿಚಿತ್ರ ಎಂದರೆ ತಾನು ಸಮಸ್ಯೆಯಿಂದ ಹೊರಬರಬೇಕು ಎಂದು ಹೋರಾಡುತ್ತಲೇ ಆ ಜಾಲದೊಳಗೆ ಸಂಪೂರ್ಣವಾಗಿ ಸಿಲುಕಿಕೊಳ್ಳುತ್ತಾನೆ. ಇದರಿಂದ ಆತ ಹೊರ ಬರುತ್ತಾನಾ? ಇಲ್ಲವಾ? ಎನ್ನುವುದೇ ಚಿತ್ರಕಥೆ.
ನಿರ್ದೇಶಕರು ಚಿತ್ರಕ್ಕೆ ಆಯ್ದುಕೊಂಡಿರುವ ಒನ್ಲೈನ್ ಚೆನ್ನಾಗಿದೆ. ಆದರೆ, ಅದಕ್ಕೆ ಒಂದೊಳ್ಳೆ ಚಿತ್ರಕಥೆ ಮಾಡಿದ್ದರೆ ಸಿನಿಮಾ ರೋಚಕವಾಗಿ ಇರುತ್ತಿತ್ತು. ನಾಯಕ ಮೋಹನ್ ಯಾವಾಗಲೂ ಗೊಂದಲದಲ್ಲಿ ಇರುತ್ತಾನೆ. ಸಿನಿಮಾ ನೋಡುವ ಪ್ರೇಕ್ಷಕರೂ ಸಹ ಅದೇ ರೀತಿಯ ಗೊಂದಲದಲ್ಲಿರುವಂತೆ ಮಾಡಿದ್ದಾರೆ ನಿರ್ದೇಶಕರು. ಇದೆಲ್ಲದರ ನಡುವೆಯೂ ಇಂಥ ಕತೆಯನ್ನು ತೆರೆಯ ಮೇಲೆ ತರುವ ಅವರ ಆಲೋಚನೆ ಚೆನ್ನಾಗಿದ್ದು, ಅದನ್ನು ಇನ್ನಷ್ಟು ತಯಾರಿ ಮಾಡಿಕೊಂಡು ತೆರೆಗೆ ತಂದಿದ್ದರೆ ಮೋಜೊ ಉತ್ತಮ ಸಿನಿಮಾ ಆಗುತ್ತಿತ್ತು. ಚಿತ್ರದ ಛಾಯಾಗ್ರಹಣ ಚೆನ್ನಾಗಿದ್ದು, ಎಸ್.ಡಿ. ಅರವಿಂದ್ ಸಂಯೋಜನೆಯಲ್ಲಿ ಎರಡು ಹಾಡುಗಳು ಇಂಪಾಗಿವೆ.
ನಾಯಕನಾಗಿ ನಟಿಸಿರುವ ಮನು ಚೆನ್ನಾಗಿ ನಟಿಸಿದ್ದಾರೆ. ಮನಃಶಾಸ್ತ್ರಜ್ಞೆಯಾಗಿ ಕಾಣಿಸಿಕೊಂಡಿರುವ ಅನುಷಾ ಓಕೆ. ಉಳಿದಂತೆ ಕೆಲ ಕಲಾವಿದರು ಯಾಕೆ ಬರುತ್ತಾರೆ ಎಂಬುದಕ್ಕೆ ಕ್ಲಾರಿಟಿ ಸಿಗುವುದಿಲ್ಲ. ಒಟ್ಟಾರೆಯಾಗಿ ಒಂದೊಳ್ಳೆ ಚಿತ್ರವಾಗುವ ಲಕ್ಷಣವಿದ್ದ ಕಥೆ ನಾನಾ ಕಾರಣಗಳಿಂದಾಗಿ ಸೊರಗಿ ಹೋಗಿದೆ.
Comments are closed.