
ಚೆನ್ನೈ: ತಮಿಳುನಾಡಿನ ಹಲವೆಡೆ ಭಾನುವಾರ ಜಲ್ಲಿಕಟ್ಟು ಸ್ಪರ್ಧೆ ಆರಂಭವಾಗಿದೆ. ಆದರೆ, ‘ಸುಗ್ರೀವಾಜ್ಞೆ ಸಾಕಾಗದು ಶಾಶ್ವತ ಪರಿಹಾರ ಬೇಕು’ ಎಂದು ಒತ್ತಾಯಿಸಿ ಜಲ್ಲಿಕಟ್ಟು ಪರ ನಿಂತಿರುವವರು ಪಟ್ಟುಹಿಡಿದಿದ್ದು, ಮರೀನಾ ಬೀಚ್ನಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಜಲ್ಲಿಕಟ್ಟು ಸ್ಪರ್ಧೆ ಆಯೋಜಿಸಲು ಅವಕಾಶ ನೀಡುವ ಸುಗ್ರೀವಾಜ್ಞೆಗೆ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ ರಾವ್ ಶನಿವಾರ ಸಹಿ ಮಾಡಿದ ಬೆನ್ನಲ್ಲೇ, ಭಾನುವಾರ ಎಲ್ಲೆಡೆ ಸ್ಪರ್ಧೆ ಆಯೋಜಿಸಲಾಗುತ್ತಿದೆ.
ಅಲಂಗನಲ್ಲೂರಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಒ. ಪನ್ನೀರ್ಸೆಲ್ವಂ ಅವರು ಜಲ್ಲಿಕಟ್ಟು ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ ಹೇಳಲಾಗಿತ್ತು. ಬದಲಿಗೆ, ಪಕ್ಕದ ದಿಂಡಿಗಲ್ ಜಿಲ್ಲೆಯಲ್ಲಿ ಚಾಲನೆ ನೀಡಲಿದ್ದಾರೆ ಎಂದು ವರದಿಯಾಗಿದೆ.
ವಿವಿಧ ಜಿಲ್ಲೆಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಯುವಕರು ಹೋರಿಯನ್ನು ಪಳಗಿಸಲು ಹೋರಿಯ ಬೆನ್ನಟ್ಟಿ ಸಾಹಸಕ್ಕೆ ಮುಂದಾದರು. ಸ್ಪರ್ಧೆಯನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಗೆಲುವು ಪಡೆದವರಿಗೆ ನಗದು ಬಹುಮಾನ ನೀಡಲಾಯಿತು ಎಂದು ವರದಿಯಾಗಿದೆ. ತಿರುಚನಾಪಳ್ಳಿ ಹಾಗೂ ಧರ್ಮಾಪುರಿ ಜಿಲ್ಲೆಗಳಲ್ಲಿ ಸ್ಪರ್ಧೆ ಆಯೋಜಿಸಿದ್ದಾಗಿ ವರದಿಯಾಗಿದೆ.
Comments are closed.