ಕರ್ನಾಟಕ

ನವಜಾತ ಶಿಶುವಿನ ಆರೋಗ್ಯಕ್ಕಾಗಿ ಆಯುರ್ವೇದ ಔಷಧಗಳ ವಿವರ.

Pinterest LinkedIn Tumblr

ಮಂಗಳೂರು: ಹುಟ್ಟಿದ ದಿನದಿಂದ ದೊಡ್ಡವರಾಗುವವರೆಗೂ ಮಕ್ಕಳಿಗೆ ಅನೇಕ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಕೆಮ್ಮು, ಶೀತ, ಚರ್ಮ, ಕೂದಲು ಸಮಸ್ಯೆ ಕಾಡುತ್ತಿರುತ್ತವೆ. ಮಕ್ಕಳಿಂದ ಇಂಥ ಕಾಯಿಲೆಗಳನ್ನು ದೂರ ಮಾಡಲು ಆಯುರ್ವೇದ ಗ್ರಂಥಗಳಲ್ಲಿ ಹೇಳಿರುವ ಔಷಧಗಳ ಬಗ್ಗೆ ಮಾಹಿತಿ ಇಲ್ಲಿದೆ.

ಮಗುವಿಗೆ ಒಳ್ಳೆಯ ನಿದ್ದೆ ಮತ್ತು ಮೂಳೆಗಳು ಗಟ್ಟಿಯಾಗಿರಲು ನಿತ್ಯ ಎಣ್ಣೆಯ ಅಭ್ಯಂಗ ಮಾಡಿಸಬೇಕಾಗುತ್ತದೆ. ಮಕ್ಕಳ ಮೆದುಳು ಬೆಳವಣಿಗೆಗೆ ಎರಡು ವರ್ಷದವರೆಗೂ ದಿನಕ್ಕೆ 10ರಿಂದ 12 ಗಂಟೆ ನಿದ್ದೆಯ ಅವಶ್ಯಕತೆ ಇದೆ. ಆರು ತಿಂಗಳವರೆಗೆ ಮಗುವಿಗೆ ಸ್ತನ್ಯಪಾನ, ತಾಯಿ ಇಲ್ಲದಿದ್ದರೆ ಹಸುವಿನ ಹಾಲು ಒಳ್ಳೆಯದು.

ಅರಿಶಿಣ: ಚರ್ಮದ ಅಲರ್ಜಿ ತಡೆಗಟ್ಟಲು ಎಣ್ಣೆಗೆ ಅರಿಶಿಣ ಹಾಕಿಕೊಂಡು ಸ್ನಾನಕ್ಕೆ ಮುಂಚೆ ಮೈಗೆ ಹಚ್ಚಬೇಕು. ಇದು ತ್ವಚೆಯ ಆರೋಗ್ಯಕ್ಕೆ ಉತ್ತಮ. ಒಂದು ಲೋಟ ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿದರೆ ಉಸಿರಾಟದ ತೊಂದರೆಗೂ ಒಳ್ಳೆಯದು. ಒಂದು ಲೋಟ ಹಾಲಿಗೆ ಅರ್ಧ ಚಮಚ ಆರಿಶಿಣ, ಹಸುವಿನ ತುಪ್ಪ, ಸ್ವಲ್ಪ ಕಾಳುಮೆಣಸು ಪುಡಿ, ಕೆಂಪು ಕಲ್ಲು ಸಕ್ಕರೆ ಹಾಕಿ ದಿನಕ್ಕೆ ಎರಡು ಬಾರಿ ಕುಡಿಯಬೇಕು. (ಸ್ತನ್ಯಪಾನ ಮಾಡಿಸುತ್ತಿದ್ದರೆ ತಾಯಿ ಕುಡಿಯಬೇಕು, ಹಾಲು ಬಿಡಿಸಿದ್ದರೆ ಮಗುವಿಗೆ ಕುಡಿಸಬೇಕು). ಅಶ್ವಗಂಧ, ಬಲ,ಲಾಕ್ಷದಿಂದ ಮಾಡಿದ ತೈಲ ಮೂಳೆಗಳನ್ನು ಗಟ್ಟಿಯಾಗಲು ಸಹಾಯ ಮಾಡುತ್ತದೆ. ದಿನವೂ ಸ್ನಾನಕ್ಕೆ ಮುಂಚೆ ಮಸಾಜ್‌ ಮಾಡಬೇಕು.

ಲಾವಂಚ: ಇದು ಮಕ್ಕಳಿಗೆ ಬೆವರುಸಾಲೆ, ತುರಿಕೆ ಇನ್ನಿತರೆ ಚರ್ಮದ ತೊಂದರೆಗೆ ಸಹಕಾರಿ. ಸಂಸ್ಕೃತದಲ್ಲಿ ಇದನ್ನು ‘ಉಶಿರ’ ಎಂದು ಕರೆಯುತ್ತಾರೆ. ನೀರಿನಲ್ಲಿ ಲಾವಂಚ ಬೇರನ್ನು ಕುದಿಸಿ, ಸೋಸಿ ಆ ನೀರನ್ನು ಎರಡು ವರ್ಷದೊಳಗಿನ ಮಕ್ಕಳಿಗೆ ಕುಡಿಸುವುದರಿಂದ ಅಥವಾ ಮಣ್ಣಿನ ಮಡಕೆಯಲ್ಲಿ ಲಾವಂಚ ಬೇರನ್ನು ಹಾಕಿ, ಆ ನೀರನ್ನು ಮಕ್ಕಳಿಗೆ ಕುಡಿಸುವುದರಿಂದ ಬೆವರುಸಾಲೆ, ತುರಿಕೆ ನಿವಾರಣೆಯಾಗುತ್ತದೆ. ಕೇರಳದಲ್ಲಿ ರಕ್ತಚಂದನವನ್ನು ಸೇರಿಸಿ ಕುದಿಸಿ ಕೊಡುತ್ತಾರೆ. ಇದು ಮೂತ್ರ ಸೋಂಕಿಗೂ ಒಳ್ಳೆಯದು. ಲಾವಂಚದ ಕ್ರೀಂ, ಲೋಷನ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

ಲಕ್ಕಿ ಸೊಪ್ಪು: ಸಂಸ್ಕೃತದಲ್ಲಿ ನೀರ್ಗುಂಡಿ ಎಂದು ಕರೆಯುತ್ತಾರೆ. ಇದನ್ನು ಎಲ್ಲ ಥರದ ಎಣ್ಣೆಗಳನ್ನು ತಯಾರಿಸಲು ಬಳಸುತ್ತಾರೆ. ನೋವಿನ ಎಣ್ಣೆಯಾಗಿ ಹೆಚ್ಚು ಬಳಕೆಯಾಗುತ್ತದೆ. ಚರ್ಮ ಸೋಂಕು ಆಗದಂತೆ ಬೇವಿನ ಸೊಪ್ಪು ರಸದಿಂದ ಮಾಡಿದ ಎಣ್ಣೆ ಬಳಸಬಹುದು. ಬಾದಾಮಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಸ್ನಾನಕ್ಕೆ ಮುಂಚೆ ಬಳಸುವುದರಿಂದ ಮಕ್ಕಳ ಮೂಳೆ ಗಟ್ಟಿಯಾಗುತ್ತದೆ. ನಿದ್ದೆ, ಮೆದುಳು ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.

ಕೂದಲು ಬೆಳವಣಿಗೆ ಆಗದಿದ್ದರೆ ಅಥವಾ ತಲೆಹೊಟ್ಟಿಗೆ ಕಡ್ಲೆಕಾಳು, ಮೆಂತ್ಯೆ, ಹೆಸರುಕಾಳು ನೆನೆಸಿ (4ರಿಂದ 5ಗಂಟೆ) ರುಬ್ಬಿಕೊಳ್ಳಬೇಕು. ರುಬ್ಬಿದ ಪೇಸ್ಟ್‌ ಅನ್ನು ತಲೆಗೆ ಹಚ್ಚಿ ಅರ್ಧಗಂಟೆ ನಂತರ ಸ್ನಾನ ಮಾಡಿಸಿ. ಇದಕ್ಕೆ ಲಾವಂಚದ ಬೇರನ್ನು ಬಳಸಬಹುದು.

‘ಚರ್ಮ ಒರಟು ಅಥವಾ ಬಿರುಕು ಬಿಟ್ಟಿದ್ದರೆ ಹಾಲಿನ ಕೆನೆ, ಬಾದಾಮಿ ಎಣ್ಣೆ ಹಚ್ಚಿ ಪ್ರತಿ ದಿನ ಅಭ್ಯಂಗ ಮಾಡಿಸಬೇಕು. ಎರಡು ವರ್ಷದ ವರೆಗಿನ ಮಕ್ಕಳಿಗೆ ಇದು ಸಹಕಾರಿ. ಕೆಲವು ಕಡೆ, ತೆಂಗಿನ ಎಣ್ಣೆ, ಸಾಸಿವೆ ಎಣ್ಣೆಯನ್ನೂ ಬಳಸುವುದನ್ನು ನಾವು ಕಾಣಬಹುದು.

Comments are closed.