ಕರಾವಳಿ

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತತ್ವಾರ: ನೀರು ನೀಡಲು ಸಜ್ಜಾಗಲು ಅಧಿಕಾರಿಗಳಿಗೆ ಸಚಿವ ಪ್ರಮೋದ್ ಸೂಚನೆ

Pinterest LinkedIn Tumblr

ಉಡುಪಿ: ಬರಪೀಡಿತ ಜಿಲ್ಲೆ ಎಂದು ಅಧಿಕೃತವಾಗಿ ನಮ್ಮ ಜಿಲ್ಲೆ ಘೋಷಿಸಲ್ಪಡದಿದ್ದರೂ ಬೇಸಿಗೆಯ ದಿನಗಳಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಈ ಬಾರಿ ಬಾಧಿಸಲಿದೆ. ಹಾಗಾಗಿ ಜನರಿಗೆ ಕುಡಿಯುವ ನೀರಿನ ಅಭಾವ ಬಾರದಂತೆ ಮುನ್ನಚ್ಚರಿಕೆ ವಹಿಸಿ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೇಸಿಗೆಯಲ್ಲಿ ಉಂಟಾಗಬಹುದಾದ ಬರ ಪರಿಸ್ಥಿತಿ ಹಾಗೂ ತುರ್ತು ಕುಡಿಯುವ ನೀರಿನ ಪೂರೈಕೆ ಸಮಸ್ಯೆಗಳ ಬಗ್ಗೆ ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗ ಮತ್ತು ತಹಸೀಲ್ದಾರ್, ನಗರಸಭೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಹಾಗೂ ಇಂಜಿನಿಯರ್‌ಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಈಗಿನಿಂದಲೇ ರೇಷನ್ ವ್ಯವಸ್ಥೆಯ ಮೂಲಕ ಪ್ರತಿಯೊಬ್ಬರಿಗೂ ನೀರು ನೀಡಲು ಯೋಜನೆ ರೂಪಿಸಿ ಎಂದರು. ಇತ್ತೀಚಿಗೆ ಕೊಡಂಕೂರು ಭೇಟಿಯ ಅನುಭವವನ್ನು ಪ್ರಸ್ತಾಪಿಸಿದ ಸಚಿವರು ತನ್ನ ಕ್ಷೇತ್ರದ ಜನರಿಗೆ 2 ಗಂಟೆ ನೀರು ಅಲಭ್ಯ ಎಂಬುದು ನಂಬಲು ಅಸಾಧ್ಯ ಎಂದರು. ಎಲ್ಲರಿಗೂ ನೀರು ಪೂರೈಕೆ ಅಗತ್ಯ ಕರ್ತವ್ಯವಾಗಿದೆ ಎಂದರು.

ಜಿಲ್ಲೆಯಲ್ಲಿ ಲಭ್ಯವಿರುವ ಜಲಮೂಲಗಳ ಹಿನ್ನಲೆಯಲ್ಲಿ 24 ಗಂಟೆ ನೀರು ಪೂರೈಕೆಯಾಗಬೇಕಿತ್ತು; ಆದರೆ ಆಗುತ್ತಿಲ್ಲ ಎಂಬುದರ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು ಸಮಗ್ರ ನೀರಿನ ಯೋಜನೆಯ ಬಗ್ಗೆ ಅಧಿಕಾರಿಗಳು ಯೋಚಿಸಬೇಕು, ಇದಕ್ಕೆಂದೇ ನೋಡಲ್ ಇಲಾಖೆ ಹಾಗೂ ಕನ್ಸಲ್ಟಂಟ್ ಒಬ್ಬರನ್ನು ನೇಮಿಸಬೇಕೆಂದ ಸಚಿವರು, ಶಾಶ್ವತ ಕುಡಿಯುವ ನೀರಿನ ಸಂಬಂದ ರಾಜ್ಯ ಮಟ್ಟದಲ್ಲಿ ಫೆಬ್ರವರಿ ಎರಡು ಅಥವಾ ಮೂರನೇ ವಾರದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸುವುದಾಗಿ ತಿಳಿಸಿದರು.

ಜಿಲ್ಲೆಯಿಂದ ಅಗತ್ಯ ಪ್ರಸ್ತಾವನೆಗಳು ಈ ಸಭೆಯ ಮೊದಲು ತಯಾರಾಗಿ ಸಭೆಯಲ್ಲಿ ಮಂಡಿಸಲು ಸಜ್ಜಾಗಿರಬೇಕು ಎಂದು ಸಚಿವರು ಹೇಳಿದರು.ಕೃಷಿಕರು ನೇರವಾಗಿ ಹೊಳೆಯಿಂದ ನೀರೆತ್ತದಂತೆ ಸೂಚನೆ ನೀಡಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಮೆಸ್ಕಾಂ ಇಲಾಖೆಯಿಂದ ನೀಡಿರುವ ಸಂಪರ್ಕವನ್ನು ಮರು ಪರಿಶೀಲಿಸುವಂತೆ ಸೂಚಿಸಿದರು. ಬಹುಗ್ರಾಮ ಕುಡಿಯುವ ನೀರಿನ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಜಿಲ್ಲೆಯ ಯಾವೆಲ್ಲ ಭಾಗಗಳು ಈ ಯೋಜನೆಯಡಿ ಬರುತ್ತಿವೆ ಎಂಬ ಮಾಹಿತಿಯನ್ನು ಸಭೆಯಲ್ಲಿ ಪಡೆದುಕೊಂಡರು.

ಟಾಸ್ಕ್‌ಫೋರ್ಸ್‌ನಡಿ ಉಡುಪಿ ತಾಲೂಕಿನಗೆ 8, ಕುಂದಾಪುರಕ್ಕೆ 4, ಕಾರ್ಕಳಕ್ಕೆ 3 ಬೋರ್‌ವೆಲ್ ತುರ್ತಾಗಿ ಕೊರೆಸಲು ಹಾಗೂ ಇವುಗಳಲ್ಲಿ ನೀರಿನ ಲಭ್ಯತೆ ಗೆ ಕೊರತೆ ಇರಬಾರದು ಎಂಬ ಎಚ್ಚರಿಕೆಯನ್ನು ನೀಡಿದರು. ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ವಿವಿಧ ಯೋಜನೆಗಳಡಿ ವಿವಿಧ ಇಲಾಖೆಗಳಿಗೆ ಕುಡಿಯುವ ನೀರಿಗಾಗಿ ನೀಡಿದ ಅನುದಾನದ ಸಮಗ್ರ ಮಾಹಿತಿಯನ್ನು ಸಲ್ಲಿಸುವಂತೆಯೂ ಸಚಿವರು ಈ ಸಂದರ್ಭದಲ್ಲಿ ಹೇಳಿದರು.

ಇದೇ ಸಂದರ್ಭ ಕಾರ್ಕಳಕ್ಕೆ ನೀರು ಪೂರೈಕೆಗೆ 14.15 ಲಕ್ಷ, ಕುಂದಾಪುರಕ್ಕೆ 90 ಲಕ್ಷ ಅನುದಾನ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸಲು ಅಗತ್ಯವಿದೆ ಎಂದು ಕಾರ್ಯನಿರ್ವಹಣಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಟಿ ವೆಂಕಟೇಶ್, ಸಿ‌ಇ‌ಒ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು.

Comments are closed.