ಮಂಗಳೂರು: ಮೂಢನಂಬಿಕೆಗಳ ಬಗೆಗೆ ಮನೋವೈಜ್ಞಾನಿಕವಾಗಿ ನೋಡಿದರೆ ಅಪಾಯದ ಬಗೆಗಿನ ಭಯ, ಒಳಿತಾಗುವ ಬಗೆಗಿನ ಆಶಯ ಇವೆರಡೂ ಇಂಥ ನಂಬಿಕೆಗಳು ಮುಂದುವರೆಯುವಲ್ಲಿ ಪ್ರಮುಖ ಎನಿಸುತ್ತವೆ.
‘ನ ‘ನನ್ನ ಮಗನಿಗೆ ಆರಾಮಾದ್ರೆ ಸಾಕು, ನಾನು ತಿರುಪತಿಗೆ ನಡೆದೇ ಹೋಗ್ತೀನಿ ಅಂಥ ಹರಕೆ ಹೇಳ್ಕೊಂಡಿದೀನಿ ಮೇಡಂ’.‘ಈ ಥರ ನನ್ನ ಹೆಂಡತಿಗೆ ಹುಷಾರಿಲ್ಲದಿದ್ದಾಗ ಮೊದಲು ನಾವು ಹೋಗಿದ್ದು ಜ್ಯೋತಿಷ್ಯದವರ ಹತ್ತಿರ. ಅವರು ಹೇಳಿದ್ದು ದೋಷಪರಿಹಾರಕ್ಕೆ ಪೂಜೆ ಮಾಡಬೇಕು ಅಂತ. ಅದೆಲ್ಲಾ ಮಾಡಿ ಈಗ ಇಲ್ಲಿಗೆ ಬಂದ್ವಿ ಡಾಕ್ಟ್ರೇ’.ಇವೆಲ್ಲಾ ಏನು ಹೇಳುತ್ತವೆ? ಆಚರಣೆಗಳು-ನಂಬಿಕೆಗಳು ನಮ್ಮ ಜೀವನವನ್ನು ಬಲವಾಗಿ ಹೊಕ್ಕು ಬೆಳೆದು ಬಂದಿರುವ ಬಗ್ಗೆ. ಎಂಥ ವಿದ್ಯಾವಂತರೆನಿಸಿಕೊಂಡವರೂ, ಆಧುನಿಕರಾದವರೂ ಬೆಕ್ಕು ಅಡ್ಡ ಬಂದರೆ ಒಂದು ಕ್ಷಣ ಮುಂದೆ ಹೋಗಲು ಹಿಂದೆಮುಂದೆ ನೋಡುತ್ತಾರೆ.
ಹೊಸ ಕಾರ್ಯವನ್ನು ಆರಂಭಿಸುವುದಿದ್ದರೆ ಮಂಗಳವಾರ ಆರಂಭಿಸಲು ಹಿಂಜರಿಯುತ್ತಾರೆ. ಎಡಗೈಯಿಂದ ಯಾವುದೇ ವಸ್ತುವನ್ನು ಬೇರೆಯವರಿಗೆ ಕೊಡುವುದಿಲ್ಲ, ತೆಗೆದುಕೊಳ್ಳುವುದಿಲ್ಲ.
ಬಲಗಿವಿ ಮುಟ್ಟಿ ಎಡ ಕಿವಿ ಮುಟ್ಟದಿದ್ದರೆ ಒಂದು ಕಿವಿಯ ಓಲೆ ಕಳೆದುಹೋಗುತ್ತದೆ ಎಂದು ಎರಡೂ ಕಿವಿಗಳನ್ನು ಮುಟ್ಟಿಸಿಕೊಳ್ಳುತ್ತಾರೆ. ಒಂದು ಮೈನಾ ಹಕ್ಕಿ ಕಂಡಾಗ ನಮಗೇ ಅರಿವಿಲ್ಲದಂತೆ ಕಣ್ಣು ಇನ್ನೊಂದು ಹಕ್ಕಿಯನ್ನು ಹುಡುಕತೊಡಗುತ್ತದೆ. ಇಂಥ ನಂಬಿಕೆಗಳು ಒಂದೇ ಎರಡೇ? ಸಾವಿರಾರು ಇಂಥ ನಂಬಿಕೆಗಳನ್ನು ಬಲವಾಗಿ ನಂಬಿ ಬದುಕುವವರಲ್ಲಿ ಮಹಿಳೆಯರದೇ ಸಿಂಹಪಾಲು.
ಚಿಕ್ಕ ಮಕ್ಕಳಿರುವಾಗಲೇ ಇಂಥ ರೂಢಿಗಳ ಆರಂಭ. ಮಕ್ಕಳು ‘ಹೋಗಿಬರ್ತೀನಿ’ ಎನ್ನದೆ ‘ಹೋಗ್ತೀನಿ’ ಎಂದಾಗ ತಾಯಿಯ ಮನಸ್ಸು ಸಮಾಧಾನವಾಗಿರುವುದಿಲ್ಲ.
ಕ್ರಮೇಣ ಅಮ್ಮಂದಿರನ್ನು ಇಂಥ ವಿಷಯಗಳಲ್ಲಿ ಹಾಸ್ಯ ಮಾಡುವ, ಏಕೆ ಹೀಗೆಂದು ಪ್ರಶ್ನಿಸುವ ಮಕ್ಕಳೂ ತಾವು ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಭಾವನಾತ್ಮಕ ಸುರಕ್ಷಿತತೆಗೆ ಅದನ್ನು ಒಪ್ಪತೊಡಗುತ್ತಾರೆ, ತಾವೂ ಪಾಲಿಸತೊಡಗುತ್ತಾರೆ.
ಇಂಥ ನಂಬಿಕೆಗಳಿಗೂ, ಧರ್ಮಕ್ಕೂ, ದೇವರಿಗೂ ಸಂಬಂಧವಿದ್ದರೂ ಅದು ಮೇಲ್ನೋಟಕ್ಕೆ ಮಾತ್ರ. ಉದಾಹರಣೆಗೆ ಮಹಿಳೆಯರು ಮುಟ್ಟಾದಾಗ ದೇವಸ್ಥಾನವನ್ನು ಪ್ರವೇಶಿಸುವ ‘ಕ್ರಾಂತಿಕಾರಕ’ ಎಂದೇ ಬಣ್ಣಿಸಲ್ಪಡುವ ಪ್ರಕ್ರಿಯೆಯನ್ನೇ ತೆಗೆದುಕೊಳ್ಳಿ.
ಅವರವರ ವೈಯಕ್ತಿಕ ನಂಬಿಕೆಯ, ರೂಢಿಗತ ಮನೋಭಾವದ ಮೇಲೆ ಇದು ಅವಲಂಬಿತ. ಹಾಗೊಮ್ಮೆ ಎಲ್ಲರಿಗೂ ಮುಕ್ತ ಅವಕಾಶ’ ಎಂಬ ಫಲಕವೇ ಇದ್ದಾಗ್ಯೂ ಮುಟ್ಟಾದಾಗ ದೇವರನ್ನು ಮುಟ್ಟುವ ‘ಧೈರ್ಯ’ ಒಳಗಿನಿಂದ ಬರಬೇಕಷ್ಟೇ.
ಅಥವಾ ಕಾಯಿಲೆ ಬಂದಿದೆ ಎನ್ನಿ. ಕಾಯಿಲೆ ಹೋದರೆ ‘ಕಾಯಿ ಒಡೆಸುತ್ತೇನೆಂದೋ’ ಅಥವಾ ದುಡ್ಡಿದ್ದಲ್ಲಿ ‘ದೇವಸ್ಥಾನ ಕಟ್ಟಿಸುತ್ತೇನೆಂದೋ’ ಹರಕೆ ಹೊತ್ತು, ಯಾವುದೇ ಕಾರಣದಿಂದ ರೋಗ ಗುಣವಾದರೂ, ‘ಕಾಯಿ ಒಡೆಸುವ’, ‘ದೇವಸ್ಥಾನ ಕಟ್ಟಿಸುವ’ ಸಂಕಲ್ಪಗಳು ಚಿಕಿತ್ಸೆಯ ಕಾಲದಲ್ಲಿ, ಕಾಯಿಲೆಯ ತೀವ್ರತೆಯ ಸಮಯದಲ್ಲಿ ಒತ್ತಡವನ್ನು ಸಹಿಸುವ ಸಾಮರ್ಥ್ಯವನ್ನು ನೀಡುತ್ತವೆ ಎಂಬುದು ಗಮನಾರ್ಹ.
ಮನೋವೈಜ್ಞಾನಿಕವಾಗಿ ನೋಡಿದರೆ ಇಂಥ ನಂಬಿಕೆಗಳು ಒಂದು ಸಮಾಜದ ಭಾಗವಾಗಿರುತ್ತವೆ. ಇಡೀ ಸಮಾಜದಲ್ಲಿ ಇದಕ್ಕೆ ಆಗಾಗ್ಗೆ ವಿರೋಧಗಳು ಎದುರಾದರೂ ಮನುಷ್ಯನ ಮನೋಭಾವದಲ್ಲಿ ಇವು ಬಲವಾಗಿ ಬೇರು ಬಿಟ್ಟಿರುತ್ತವೆ.
ಹಾಗೆ ನೋಡಿದರೆ ಇಂಥ ನಂಬಿಕೆಗಳನ್ನು ಮೂಢನಂಬಿಕೆ- Superstition ಎಂದು ಕರೆಯುವ ಬದಲು magical thinking-ಪವಾಡದ ಯೋಚನೆಗಳು ಎಂದು ಕರೆಯಲಾಗುತ್ತದೆ. ಅವು ಕೇವಲ ಮನುಷ್ಯನಲ್ಲಿ ಮಾತ್ರ ಕಾಣುವಂಥಹವೂ ಅಲ್ಲ.
ಸ್ಕಿನ್ನರ್ ಎಂಬ ಪ್ರಸಿದ್ಧ ಮನೋವೈದ್ಯ ತನ್ನ ಪ್ರಯೋಗವೊಂದರಲ್ಲಿ ಪಾರಿವಾಳಗಳು ಈ ರೀತಿಯ ನಂಬಿಕೆಗಳನ್ನು ಬೆಳೆಸಿಕೊಳ್ಳುವುದನ್ನು ತೋರಿಸಿದ್ದ. ಆಹಾರ ಸಿಗುವುದರ ಬಗೆಗೆ ಪಂಜರದಲ್ಲಿ ಎರಡು ಸುತ್ತುಗಳನ್ನು ಹೊಡೆದರೆ ತನಗೆ ಆಹಾರ ಸಿಗುತ್ತದೆ ಎಂಬ ನಂಬಿಕೆಯ ಮೇಲೆ ಈ ಪ್ರಯೋಗ ನಡೆದಿತ್ತು.
ಅಂದರೆ ಬೆಕ್ಕು ಅಡ್ಡ ಬಂದರೆ ನಮಗೇನಾದರೂ ತೊಂದರೆಯಾದೀತೆಂಬ ಭಯ ನಮಗಾದ ಹಾಗೆಯೇ, ಬೆಕ್ಕಿಗೂ ಮನುಷ್ಯರು ಅಡ್ಡ ಬಂದರೆ ತನಗೆ ಅಂದಿನ ಆಹಾರ ಸಿಗದಾದರೆ ಎಂಬ ಭಯ ಬರುವ ಸಾಧ್ಯತೆಯ ಬಗ್ಗೆ!
ಮೂಢನಂಬಿಕೆಗಳ ಬಗೆಗೆ ಮನೋವೈಜ್ಞಾನಿಕವಾಗಿ ನೋಡಿದರೆ ಅಪಾಯದ ಬಗೆಗಿನ ಭಯ, ಒಳಿತಾಗುವ ಬಗೆಗಿನ ಆಶಯ ಇವೆರಡೂ ಇಂಥ ನಂಬಿಕೆಗಳು ಮುಂದುವರೆಯುವಲ್ಲಿ ಪ್ರಮುಖ ಎನಿಸುತ್ತವೆ. ಸಂಬಂಧಗಳಲ್ಲಿ ಭಾವನಾತ್ಮಕವಾಗಿ ತೊಡಗಿಸಿಕೊಳ್ಳುವ ಮಹಿಳೆಯರಲ್ಲಿ ಸಹಜವಾಗಿ ಇವು ಹೆಚ್ಚು. ವಿದ್ಯಾರ್ಥಿ ದೆಸೆಯಲ್ಲಿಯೂ ಇದು ಬಹಳಷ್ಟು ಕಂಡುಬರುವಂಥದ್ದೇ.
ಒಂದು ತರಹದ ಉಡುಗೆ ಧರಿಸಿ ಸೆಮಿನಾರ್ ಮಾಡಿದರೆ/ಪರೀಕ್ಷೆ ಬರೆದರೆ, ಅಂದು ಚೆನ್ನಾಗಿ ಆದದ್ದಕ್ಕೆ ಆ ಉಡುಗೆ ಧರಿಸಿದ್ದೇ ಕಾರಣವೆಂದು ನಂಬುತ್ತಾರೆ. ಅಥವಾ ಯಾವುದೋ ಒಂದು ಬಣ್ಣ ಧರಿಸಿದ್ದಕ್ಕೆ ಆ ದಿನ ಚೆನ್ನಾಗಿರಲಿಲ್ಲವೆಂದು ಭಾವಿಸುತ್ತಾರೆ.
ಇಂಥ ಕಾರಣ- ಕಾರ್ಯ ಸಂಬಂಧದಿಂದ, ಮುಂದೆ ಒಳ್ಳೆಯ ಸಂದರ್ಭಗಳಿಗೆ ಅದೇ ಉಡುಗೆ ಅಥವಾ ಇಂಥದೇ ಬಣ್ಣ ಎಂಬ ನಂಬುಗೆ ಮುಂದುವರೆಯುತ್ತದೆ. ಅಂದರೆ ಯಾವುದೋ ಪ್ರಮುಖ ಸಂದರ್ಭವೊಂದರ ಫಲಿತಾಂಶ ‘ಅನಿಶ್ಚಿತ’ ಎನಿಸಿದಾಗ ಅದನ್ನು ನಮ್ಮ ನಿಯಂತ್ರಣಕ್ಕೆ ತಂದುಕೊಳ್ಳುವ ಹಂಬಲದಿಂದ ಈ ನಂಬಿಕೆಗಳು ಬೆಳೆಯುತ್ತವೆ.
ಕಾಯಿಲೆ ವಾಸಿಯಾಗುವುದೋ ಇಲ್ಲವೇ ಎಂಬುದು ಅನಿಶ್ಚಿತವಷ್ಟೆ. ಹರಕೆ ಆ ಅನಿಶ್ಚಿತತೆಯನ್ನು ನಮಗೆ ಬೇಕಾಗುವ ‘ಗುಣವಾಗುತ್ತದೆ’ ಎಂಬ ನಿಶ್ಚಿತತೆಯತ್ತ ನಮ್ಮನ್ನು ನಡೆಸುವ ಸಾಧನ ಎಂಬ ನಂಬಿಕೆ ಇದರ ಮೂಲ.
‘ಅನಿಶ್ಚಿತತೆ’ ಸಹಜವಾಗಿ ಚಡಪಡಿಕೆಯನ್ನು ‘ಏನಾಗುವುದೋ’ ‘ಕೆಟ್ಟದಾದರೆ’ ಎಂಬ ಆತಂಕವನ್ನು ತರುತ್ತದೆ. ಈ ಆತಂಕವನ್ನು ಇಲ್ಲವಾಗಿಸಲು ಮನಸ್ಸು ಕಂಡುಕೊಳ್ಳುವ ರಕ್ಷಣಾ ತಂತ್ರವೇ ‘ಮೂಢನಂಬಿಕೆ’.
ಮೂಢನಂಬಿಕೆಗಳು ವ್ಯಾಪಕವಾಗಿದ್ದರೂ, ಹೆಚ್ಚಿನ ಸಮಯ ಅವುಗಳನ್ನು ಉಪಯೋಗಿಸುವುದು ಆ ತಕ್ಷಣದ ಆತಂಕ ನಿವಾರಣೆಗಷ್ಟೇ. ಅಂದರೆ ನಾವು ಹೋಗುವಾಗ ಬೆಕ್ಕು ಅಡ್ಡ ಬಂತೆಂದುಕೊಳ್ಳಿ.
ಒಂದು ಕ್ಷಣ ಯೋಚಿಸಿದರೂ ಮುಂದೆ ಸಾಗುತ್ತೇವೆ. ಕೆಲವೊಮ್ಮೆ ಮರೆಯುತ್ತೇವೆ ಅಥವಾ ಬರಬಹುದಾದ ಅಪಾಯವನ್ನು ನಿರೀಕ್ಷಿಸಿ ಮನಸ್ಸು ಸಜ್ಜಾಗುತ್ತದೆ (ಅಪಾಯ ಎಂದರೂ ಇಲ್ಲಿ ಆಫೀಸಿಗೆ ಲೇಟಾಯಿತೆಂದು ಬಾಸ್ ಕೈಲಿ ಬೈಸಿಕೊಳ್ಳುವಂಥದ್ದು / ಹೋದ ಕೆಲಸ ಆಗದಿರುವುದು… ಅಷ್ಟೆ!).
ಪರೀಕ್ಷೆಗೆ ಚೆನ್ನಾಗಿಯೇ ತಯಾರಾಗಿ, ಪಡಬೇಕಾದ ಪ್ರಯತ್ನವನ್ನೆಲ್ಲಾ ಪಟ್ಟು ಆ ಮೇಲೆ ಪರೀಕ್ಷೆಯಲ್ಲಿ ಪಾಸ್ ಆದರೆ ದೇವರಿಗೊಂದು ಕಾಯಿ ಒಡೆಸುತ್ತೇವೆ ಎಂಬ ಹರಕೆ ಮಾನಸಿಕವಾಗಿ ಸುರಕ್ಷಿತತೆಯನ್ನು, ಆತ್ಮವಿಶ್ವಾಸವನ್ನೂ ನೀಡುತ್ತದೆ.
ಆದರೆ ಮೂಢನಂಬಿಕೆಗಳು ನಿಜವಾಗಿ ತಲೆನೋವಾಗುವುದು ನಮ್ಮ ಪ್ರಯತ್ನವೇ ಇಲ್ಲದೆ ಕೇವಲ ನಂಬಿಕೆಯನ್ನೇ ಗಟ್ಟಿಯಾಗಿ ನಂಬಿ ಒಂದು ಕೆಲಸವನ್ನು ಸಾಧಿಸಲು ಹೊರಟಾಗ. ಜೂಜಾಡುವ ವ್ಯಕ್ತಿ ತನ್ನ ಅದೃಷ್ಟವನ್ನಷ್ಟೇ ನಂಬಿ ಮತ್ತೆ ದುಡ್ಡು ಕಳೆಯುವುದು,
ವರ್ಷಪೂರ್ತಿ ಓದದೆ ದೇವರ ಮೇಲಿನ ಹರಕೆಯಿಂದ ಪರೀಕ್ಷೆ ಪಾಸಾಗಲು ಹೊರಡುವುದು, ಕಾಯಿಲೆಗೆ ಚಿಕಿತ್ಸೆ ನೀಡದೆ ದೇವರ ಪೂಜೆ ಮಾಡುವುದು ಇವು ನಂಬಿಕೆಗಳು ‘ಮೂಢ’ ನಂಬಿಕೆಗಳಾಗುವ, ನಕಾರಾತ್ಮಕವಾಗಿ ಜೀವನದಲ್ಲಿ ಕೆಲಸ ಮಾಡುವ ಕೆಲ ಸಂದರ್ಭಗಳು.
ಇನ್ನು ಮೂಢನಂಬಿಕೆಗಳನ್ನೇ ಬಂಡವಾಳವಾಗಿಸಿಕೊಂಡು ಜನರನ್ನು ಶೋಷಣೆ ಮಾಡುವವರು ಹೆಚ್ಚಿನ ಸಮಯ ತಮ್ಮ ಗುರಿಯಾಗಿಸುವುದು ಮಹಿಳೆಯರನ್ನೇ. ಹೆಚ್ಚಿನ ಪತ್ರಿಕೆಗಳಲ್ಲಿ ಬರುವ ಜ್ಯೋತಿಷ್ಯದ ಕಾಲಂಗಳ ಓದುಗರು ಮಹಿಳೆಯರೇ.
ಸಾಮಾಜಿಕವಾಗಿ ಬೆಳೆದು ಬಂದಿರುವ ರೂಢಿಗತ ಧೋರಣೆಗಳು ಮಹಿಳೆಯರಲ್ಲಿ ‘ನಾನು ನನ್ನ ಸುತ್ತಮುತ್ತಲಿನ ಸಂಗತಿಗಳನ್ನು ನಿಯಂತ್ರಿಸಬಲ್ಲೆ’ ಎಂಬ ವಿಶ್ವಾಸ ಮೂಡಿಸಿಲ್ಲ. ಹಾಗಾಗಿ ಮೂಢನಂಬಿಕೆಗಳಿಗೆ ಅವರು ಶರಣಾಗುವ ಸಾಧ್ಯತೆ ಹೆಚ್ಚು.
ದೈನಂದಿನ ಮೂಢನಂಬಿಕೆಗಳು ನಿಮಗಿದ್ದರೆ ನೀವೇನೂ ಅದನ್ನು ಬಿಡಲೇಬೇಕಾಗಿಲ್ಲ. ಆದರೆ ಬಿಟ್ಟರೆ ನೀವು ಮತ್ತಷ್ಟು ಆರಾಮವಾಗಿರುತ್ತೀರಿ! ಮಕ್ಕಳ ಸುಖಕ್ಕಾಗಿ ಒಂದು ಉಪವಾಸ/ವ್ರತದ ಹೆಸರಿನಲ್ಲಿ ಒಂದಿಷ್ಟು ನಿಯಮ/ದೇವರಿಗೆ ಸುಲಭದ ಹರಕೆ ಹೊರುವುದು ಇವೆಲ್ಲವೂ ಒಂದು ಮಿತಿಯಲ್ಲಿ ನಿಮ್ಮ ಆತಂಕ ಕಡಿಮೆ ಮಾಡಿದರೆ, ಆತ್ಮವಿಶ್ವಾಸ ಹೆಚ್ಚಿಸುತ್ತಿದ್ದರೆ ನೀವು ಮಾಡುವುದು ನಿಮ್ಮ ಇಷ್ಟ.
ಆದರೆ ಅಪಶಕುನಗಳಿಂದ ಗಾಭರಿ -ಆತಂಕಕ್ಕೆ ಒಳಗಾಗಬೇಡಿ. ಅವುಗಳನ್ನು ಬಿಡುವುದು ನಿರಂತರ ಪ್ರಯತ್ನದಿಂದ ಮಾತ್ರ ಸಾಧ್ಯ. ಕಾಕತಾಳೀಯವಾಗಿ ನಡೆಯಬಹುದಾದ ಘಟನೆಗಳು ಮೂಢನಂಬಿಕೆಗಳನ್ನು ಬಲಪಡಿಸುತ್ತವೆ.
ಹಾಗೆಯೇ ಸಂದರ್ಭವನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸುವುದೂ ಅಗತ್ಯ. ಹಾಗಾದಾಗ ಬೆಕ್ಕು ಅಡ್ಡ ಹೋದ ದಿನವೂ ನಮಗೆ ಲಾಭದಾಯಕ/ ಸಂತಸದಾಯಕವಾಗಿಯೂ ಕಾಣಬಹುದು.
ಮೂಢನಂಬಿಕೆಗಳನ್ನು ಆರೋಗ್ಯಕರವಾಗಿ ನಿಭಾಯಿಸುತ್ತಿರುವ ಮಹಿಳೆಯೊಬ್ಬರ ಮಾತುಗಳಿವು. “ನಾನು ಮೊದಲೆಲ್ಲಾ ಶಕುನಗಳನ್ನು ನಂಬುತ್ತಿದ್ದೆ. ಕ್ರಮೇಣ ಬರುಬರುತ್ತಾ ಅವುಗಳನ್ನು ಬಿಟ್ಟೆ. ಬಿಡುವುದು ಸುಲಭವಲ್ಲ. ಕೆಟ್ಟದಾದರೆ? ಮತ್ತೆ ಮತ್ತೆ ‘ಅಪಶಕುನ’ ಗಳನ್ನು ಎದುರಿಸಿದ ಮೇಲೆ ಧೈರ್ಯ ತನ್ನಿಂತಾನೇ ಬರುತ್ತದೆ. ಆತಂಕ ಇಲ್ಲವಾಗುತ್ತದೆ.
ಬದುಕು ಸುಲಭ ಎನಿಸುತ್ತದೆ. ಹಾಗೆಂದು ಈಗಲೂ ನನಗೆ ಮಕ್ಕಳ ಆರೋಗ್ಯದ ಬಗ್ಗೆ ಆತಂಕವಾದಾಗ ಸುಲಭದ ಹರಕೆ ಹೊರುತ್ತೇನೆ. ನನ್ನ ‘ದೇವರು’ ನನ್ನಂತೆ ‘flexible’. ಅರ್ಥ ಮಾಡಿಕೊಳ್ಳುತ್ತಾನೆ! ‘ಆತ ಕೆಲಸ ಮಾಡಿಕೊಡಬಹುದು’ ಎಂಬ ನಂಬಿಕೆ ನನಗೆ ಆ ಕ್ಷಣದಲ್ಲಿ ಸಹಾಯ ಮಾಡುತ್ತದೆ.
ಇನ್ನು ಕೆಲವೊಮ್ಮೆ ಹರಕೆಯ ಬದಲು ನಾನೇ ನನಗಿಷ್ಟವಾದ ಯಾವುದೋ ‘ತಿಂಡಿ’ಯನ್ನು ಇಂಥ ಕೆಲಸವಾದರೆ ಒಂದು ತಿಂಗಳು ಬಿಟ್ಟು ಬಿಡುತ್ತೇನೆ ಎಂಬ ನಿಯಮ ಹಾಕಿಕೊಳ್ಳುತ್ತೇನೆ. ಅದು ನನ್ನ ಆರೋಗ್ಯವನ್ನೂ ಕಾಪಾಡುತ್ತದೆ! ನನ್ನ ಮನಸ್ಸಿನ ಮೇಲಿನ ನಿಯಂತ್ರಣವನ್ನೂ ಸಾಧಿಸುತ್ತದೆ!”.

Comments are closed.