ಕುಂದಾಪುರ: ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಸಮಾಜಕಲ್ಯಾಣ ಇಲಾಖೆಯ ಸಚಿವ ಎಚ್ ಆಂಜನೇಯ ಶನಿವಾರ ಬೈಂದೂರು ವಿಧಾನಸಭಾ ಕ್ಷೇತ್ರದ ಕಾಲ್ತೋಡು ಗ್ರಾಮದ ಮೂರೂರು ಕೊರಗ ಕಾಲನಿಗೆ ಆಗಮಿಸಿದ್ರು. ಮಧ್ಯಾಹ್ನದ ಸುಮಾರಿಗೆ ಮೂರೂರಿಗೆ ಆಗಮಿಸಿದ ಸಚಿವರನ್ನು ಆದರದಿಂದಬರಮಾಡಿಕೊಳ್ಳಲಾಯಿತು. ಕೊರಗ ಸಂಪ್ರದಾಯದ ಡೋಲು ಹಾಗೂ ಕೊಳಲು ಬಾರಿಸುವ ಮೂಲಕ ಮೆರವಣಿಗೆಯಲ್ಲಿ ಕರೆತಂದು ಸಚಿವರನ್ನು ಆಮಂತ್ರಿಸಲಾಯಿತು.

ಮೂರೂರಿನಲ್ಲಿ ನಡೆದ ಸಾರ್ವಜನಿಕ ಸಮಾವೇಶವನ್ನು ಸಚಿವ ಎಚ್. ಆಂಜನೇಯ ಅವರು ಡೋಲು ಬಾರಿಸುವ ಮೂಲಕ ಉದ್ಘಾಟಿಸಿದ ಬಳಿಕ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು, ತೀರಾ ಗ್ರಾಮೀಣಭಾಗದ ಆದಿವಾಸಿ ಬುಡಕಟ್ಟು ಜನರೊಂದಿಗೆ ಹೊಸವರುಷ ಆಚರಿಸುವ ನಿಟ್ಟಿನಲ್ಲಿ ಇಲ್ಲಿಗೆ ಆಗಮಿಸಿದ್ದು ಈಗಾಗಲೇ ಆರು ಜಿಲ್ಲೆಗಳ ಕೊರಗ ಕಾಲನಿ ಹಾಗೂ ಬುಡಕಟ್ಟು ಸಮಾಜದ ಕಾಲನಿಯಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಕಷ್ಟಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಕೊರಗರ ಜೊತೆಗೆ ವಾಸ್ತವ್ಯ ಮಾಡುವ ಮೂಲಕ ಅವರ ಕಷ್ಟನಷ್ಟಗಳ ಅಧ್ಯಯನದ ಜೊತೆಗೆ ಅವರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿಯನ್ನು ನೀಡುವ ಕೆಲಸ ಇಂದು ಮಾಡಲಾಗುತ್ತದೆ.ಉಡುಪಿ ಜಿಲ್ಲೆಗೆ ಈಗಾಗಲೇ ಕೊರಗರ ಶ್ರೇಯೋಭಿವ್ರದ್ಧಿಗೆ ಹಾಗೂ ಸೌಕರ್ಯಕ್ಕಾಗಿ ೮೩ ಕೋಟಿ ಬಿಡುಗಡೆಯಾಗಿದ್ದು ಅದರಲ್ಲಿ ಭಾಗಶಃ ಕಾಮಗಾರಿಗಳು ಮುಗಿದಿದೆ. ಕೊರಗರ ಮುಗ್ದ ಜೀವಿಗಳು ಹಾಗೂ ನಂಬಿಕಸ್ಥರು. ಆದರೇ ಅವರು ದೇವರನ್ನು ಹಾಗೂ ಮೌಢ್ಯವನ್ನು ಹೆಚ್ಚಾಗಿ ನಂಬುವ ಕಾರಣ ಅವರ ಅಲ್ಪಾಯುಷಿಗಳಾಗುತ್ತಿದ್ದಾರೆ. ಅನಾರೋಗ್ಯ ಬಂದಾಗ ಆಸ್ಪತ್ರೆಗೆ ತೆರಳೇಬೇಕೆ ಹೊರತು ದೇವರ ಬಳಿಗಲ್ಲ ಎಂದು ಸಚಿವರು ಕೊರಗ ಸಮುದಾಯಕ್ಕೆ ಕಿವಿಮಾತು ಹೇಳಿದರು.
ಇನ್ನು ಮೂರೂರು ಕೊರಗ ಕಾಲನಿಗೆ ಆಗಮಿಸಿದ್ದು ಇಲ್ಲಿಗೆ ವಿಶೇಶ ಪ್ಯಾಕೇಜ್ ನೀಡುವ ಉದ್ದೇಶದಿಂದಲ್ಲ. ಬದಲಾಗಿ ಈಗಾಗಲೇ ನೀಡಿರುವ ವಿಶೇಶ ಪ್ಯಾಕೇಜುಗಳ ಆಡಳಿತಾತ್ಮಕ ನ್ಯೂನ್ಯತೆಗಳನ್ನು ಸರಿಪಡಿಸುವ ಗುರಿ ಹೊಂದಲಾಗಿದೆ. ಕೊರಗರು ನಡೆದಾಡುವ ಕಾಡುದಾರಿಗಳನ್ನು ನಾಡುದಾರಿಗಳನ್ನಾಗಿ ಪರಿವರ್ತಿಸಿ ಕೊರಗರನ್ನು ನಾಗರಿಕ ಸಮಾಜದ ಜೊತೆಗೆ ಬೆಸೆಯುವ ಕಾರ್ಯಕ್ಕೆ ಈ ಬಾರಿಯ ಕೊರಗ ಮನೆ ವಾಸ್ತವ್ಯ ನಾಂದಿಯಾಗಲಿದೆ. ರಸ್ತೆಗಳು ಅಭಿವ್ರದ್ಧಿಯಾದರೇ ಮಾತ್ರ ಆ ಗ್ರಾಮ ಹಾಗೂ ಗ್ರಾಮದಜನರು ಅಭಿವ್ರದ್ಧಿಯಾಗಲು ಸಾದ್ಯವಿದೆ ಎನ್ನುವ ಪರಿಕಲ್ಪನೆಯಡಿಯಲ್ಲಿ ಕಾಲುದಾರಿಯಿರುವ ರಸ್ತೆಗಳನ್ನು ಡಾಂಬರು ರಸ್ತೆಯನ್ನಾಗಿಸುವ ಕಾರ್ಯ ಶೀಘ್ರದಲ್ಲೇ ಮಾಡುತ್ತೇವೆ. ಇನ್ನು ಕೊರಗ ಮನೆಗಳ ನಿರ್ಮಾಣಕ್ಕೆ ನೀಡುವ ಆರ್ಥಿಕ ಸಹಕಾರವನ್ನು ಹೆಚ್ಚು ಮಾಡುವ ಬಗ್ಗೆಯೂ ಚಿಂತನೆಗಳಿದ್ದು ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಪೂರಕ ಕ್ರಮ ಕೈಗೊಳಲಾಗುವುದು ಎಂದರು. ಕೊರಗರ ಅಭಿವ್ರದ್ಧಿಗೆ ಅರಣ್ಯ ಇಲಾಖೆ ಮಾರಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಚಿವರು, ಅಲ್ಲಿಗೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕರೆದು ಮೂರೂರು ಭಾಗದ ಸಮಸ್ಯೆಗಳ ಬಗ್ಗೆ ವಿಚಾರಿಸಿದರು.
ಐಷಾರಾಮಿ ಶೌಚಾಲಯ ಅಗತ್ಯವಿರಲಿಲ್ಲ. ನನಗೆ ಇರುವ ವ್ಯವಸ್ಥೆಯಲ್ಲಿಯೇ ಸಾಕಿತ್ತು. ಆದರೇ ಅಧಿಕಾರಿಗಳು ಶೌಚಾಲಯ ನಿರ್ಮಿಸಿ ಮುಜುಗರ ಮಾಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ ಸಚಿವ ಆಂಜನೇಯ ಅವರು, ನಾನು ಇಲ್ಲಿಗೆ ಬಂದು ಹೋದ ಬಳಿಕ ಅಭಿವ್ರದ್ಧಿ ಆಗಲೇಬೇಕು ಎನ್ನುವ ಆಶಯವಿದೆ ನಾಳೆ ಈ ಬಗ್ಗೆ ಟೀಕೆಗಳು ಬರಬಾರದು ಎಂದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ತಮ ಮಾತುಗಳಲ್ಲಿ ಕೊರಗ ಸಮುದಾಯಕ್ಕೆ ಅಗತ್ಯವಾಗಿ ಬೇಕಿರುವ ಮೂಲಭೂತ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು. ಈ ಸಂದರ್ಭ ಕಾಲ್ತೋಡು ಗ್ರಾಮಪಂಚಾಯತ್ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ, ಕೊರಗ ಸಮುದಾಯದ ಮುಖಂಡ ಗಣೇಶ್ ಹಾಗೂ ಮೊದಲಾದವರು. ಜಿಲ್ಲಾ ಹಾಗೂ ರಾಜ್ಯ ಮಟ್ಟದ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ಮಧ್ಯಾಹ್ನದ ಸುಮಾರಿಗೆ ಸಮಾರಂಭದ ಸನಿಹದಲ್ಲೇ ಮಾಮೂಲಿ ತರಕಾರಿ ಊಟವನ್ನು ಮಾಡಿದ ಸಚಿವರು ಬಳಿಕ ಕೊರಗರ ಜೊತೆ ಸಮಾಲೋಚನೆ ನಡೆಸಿದರು. ರಾತ್ರಿ ಮರ್ಲಿ ಕೊರಗರ ಮನೆಯಲ್ಲಿ ಸಚಿವರ ವಾಸ್ತವ್ಯ ನಡೆಯಲಿದೆ.
——————————
ಚಿತ್ರ, ವರದಿ- ಯೋಗೀಶ್ ಕುಂಭಾಸಿ
Comments are closed.