
ಕೊಚ್ಚಿ: ಚಿನ್ನ ಅಡವಿಟ್ಟುಕೊಂಡು ಸಾಲ ನೀಡುವ ಕೇರಳದ 3 ಅತಿ ದೊಡ್ಡ ಕಂಪನಿಗಳಲ್ಲಿ 263 ಟನ್ ಚಿನ್ನದ ಸಂಗ್ರಹವಿದೆ. ಇದು 2016ರ ಸೆಪ್ಟೆಂಬರ್ವರೆಗಿನ ಸಂಗ್ರಹ. ಈ ಸಂಸ್ಥೆಗಳ ಭದ್ರ ಕೊಠಡಿಯಲ್ಲಿರುವ ಚಿನ್ನ ಜಗತ್ತಿನ ಕೆಲವು ಅತ್ಯಂತ ಶ್ರೀಮಂತ ರಾಷ್ಟ್ರಗಳನ್ನು ಮೀರಿದೆ.
ಮುತ್ತೂಟ್ ಫೈನಾನ್ಸ್, ಮಣಪ್ಪುರಂ ಫೈನಾನ್ಸ್ ಮತ್ತು ಮುತ್ತೂಟ್ ಫಿನ್ಕಾರ್ಪ್ ಸಂಸ್ಥೆಗಳಲ್ಲಿ 263 ಟನ್ಗಳಷ್ಟು ಚಿನ್ನದ ಆಭರಣಗಳು ಸಂಗ್ರಹವಾಗಿದ್ದು, ಇದು ಬೆಲ್ಜಿಯಂ, ಸಿಂಗಾಪುರ, ಸ್ವೀಡನ್ ಅಥವಾ ಆಸ್ಟ್ರೇಲಿಯಾದಲ್ಲಿರುವ ಚಿನ್ನದ ಸಂಗ್ರಹಕ್ಕಿಂತ ಹೆಚ್ಚು. 2 ವರ್ಷಗಳ ಹಿಂದೆ ಈ ಸಂಸ್ಥೆಗಳಲ್ಲಿದ್ದ ಚಿನ್ನದ ಪ್ರಮಾಣ 195 ಟನ್ಗಳು.
ನ. 8 ರಂದು ಪ್ರಧಾನ ಮಂತ್ರಿ ನರೇಂದ್ರಮೋದಿ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ನಂತರ ಚಿನ್ನದ ಸಂಗ್ರಹ 263 ಟನ್ಗಳಿಗೆ ಏರಿದೆ.
ಭಾರತದಲ್ಲಿ ಇಡೀ ಜಗತ್ತಿನ ಚಿನ್ನದ ಬೇಡಿಕೆಗೆ ಹೋಲಿಸಿದರೆ ಶೇ. 30 ರಷ್ಟಿದೆ. ಇಲ್ಲಿನ ಜನ ಇತರೆ ಎಲ್ಲಾ ಸಾಮಾಜಿಕ ಭದ್ರತೆಗಾಗಿ ಚಿನ್ನವನ್ನೇ ನಂಬಿದ್ದಾರೆ.
ಇದು ಭಾರತದ ವಿಷಯವಾದರೆ ಕೇರಳದಲ್ಲಿ ಚಿನ್ನದ ಬೇಡಿಕೆಗೆ ಇನ್ನಷ್ಟು ಆದ್ಯತೆ ಇದೆ. ಅಲ್ಲಿ ಚಿನ್ನಾಭರಣ ಕೈಗಾರಿಕೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ತೊಡಗಿಕೊಂಡಿದ್ದಾರೆ.
ಕಳೆದ 2 ವರ್ಷದಲ್ಲಿ ಕೇರಳದ ಅತಿ ದೊಡ್ಡ ಚಿನ್ನದ ಸಾಲ ನೀಡುವ ಕಂಪನಿಯಾದ ಮುತ್ತೂಟ್ ಫೈನಾನ್ಸ್ ತನ್ನ ಸಂಗ್ರಹವನ್ನು 116 ಟನ್ಗಳಿಂದ 150 ಟನ್ಗಳಿಗೆ ಹೆಚ್ಚಿಸಿಕೊಂಡಿದೆ.
ಈ ಒಂದೇ ಸಂಸ್ಥೆಯ ಬಳಿಯಿರುವ ಚಿನ್ನ ಸಿಂಗಾಪುರದಲ್ಲಿರುವ 127.4 ಟನ್ ಚಿನ್ನಕ್ಕಿಂತ ಹೆಚ್ಚು ಸ್ವೀಡನ್ನಲ್ಲಿ 125.7 ಟನ್, ಆಸ್ಟ್ರೇಲಿಯಾದಲ್ಲಿ 79.9 ಟನ್, ಕುವೈತ್ನಲ್ಲಿ 79 ಟನ್, ಡೆನ್ಮಾರ್ಕ್ನಲ್ಲಿ 65.5 ಟನ್ ಮತ್ತು ಫಿನ್ಲ್ಯಾಂಡ್ನಲ್ಲಿ 49.1 ಟನ್ಗಳಷ್ಟು ಚಿನ್ನದ ಸಂಗ್ರಹವಿದೆ. ಈ ಎಲ್ಲಾ ದೇಶಗಳ ಚಿನ್ನ ಸಂಗ್ರಹಕ್ಕಿಂತ ಮುತ್ತೂಟ್ ಫೈನಾನ್ಸ್ ಬಳಿಯಿರುವ ಸಂಗ್ರಹವೇ ಹೆಚ್ಚು.
ಇತರೆ 2 ದೊಡ್ಡ ಕಂಪನಿಗಳಾದ ಮಣಪ್ಪುರಂ ಫೈನಾನ್ಸ್ (65.9 ಟನ್) ಮತ್ತು ಮುತ್ತೂಟ್ ಫಿನ್ಕಾರ್ಪ್ (46.88 ಟನ್) ಚಿನ್ನ ಸೇರಿ ಈ ಮೂರು ಕಂಪನಿಗಳ ಬಳಿ 262.78 ಟನ್ ಚಿನ್ನದ ಸಂಗ್ರಹವಿದೆ.
ಈ ಹಿನ್ನೆಲೆಯಲ್ಲಿ ವಿಶ್ವ ಚಿನ್ನದ ಪರಿಷತ್ ನೀಡಿರುವ ವರದಿಯ ಪ್ರಕಾರ ಚಿನ್ನದ ಸಂಗ್ರಹದಲ್ಲಿ ಭಾರತ 558 ಟನ್ ಚಿನ್ನದೊಡನೆ 11ನೇ ಸ್ಥಾನದಲ್ಲಿದೆ.
ಮೊದಲ ಸ್ಥಾನದಲ್ಲಿರುವ ಅಮೆರಿಕದ ಬಳಿ 8134 ಟನ್, ಜರ್ಮನಿ ಬಳಿ 3,378 ಟನ್ ಮತ್ತು ಐಎಂಎಫ್ ಬಳಿ 2814 ಟನ್ ಚಿನ್ನ ಇದೆ.
ಚಿನ್ನದ ಆಭರಣಗಳನ್ನು ಮಾಡಿಸಿಕೊಳ್ಳುವ ಜನರಲ್ಲಿ ಭಾರತಕ್ಕೆ ಮೊದಲನೇ ಸ್ಥಾನ. 2016ರ ಮೊದಲ 3 ತಿಂಗಳಲ್ಲಿ ಭಾರತೀಯರು 107.6 ಟನ್ ಚಿನ್ನ ಖರೀದಿಸಿದ್ದಾರೆ. ಯುರೋಪ್ ಮತ್ತು ಉತ್ತರ ಅಮೆರಿಕಾ ಸೇರಿ ಒಟ್ಟು 67.8 ಟನ್ ಚಿನ್ನವನ್ನು ಅದೇ ಅವಧಿಯಲ್ಲಿ ಖರೀದಿಸಿವೆ. 98.1 ಟನ್ ಚಿನ್ನ ಖರೀದಿಸಿದ ಚೀನಾ 2ನೇ ಸ್ಥಾನದಲ್ಲಿದೆ.
Comments are closed.