
ಮಂಗಳೂರು, ಡಿಸೆಂಬರ್.5: ಆರೋಗ್ಯಪೂರ್ಣ ಜೀವನಕ್ಕಾಗಿ ಭಾರತೀಯ ವೈದ್ಯ ಪದ್ಧತಿಗಳಾದ ಆಯುರ್ವೇದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿಗಳು (ಆಯುಷ್) ಅತ್ಯಂತ ಪರಿಣಾಮಕಾರಿ ಎನಿಸಲ್ಪಟ್ಟಿದೆ. ಆದುದರಿಂದ ಆಯುಷ್ನ್ನು ಆರೋಗ್ಯ ಸೇವೆಯ ಪ್ರಧಾನ ವಾಹಿನಿಗೆ ತರುವ ಕಾರ್ಯಕ್ರಮಗಳಲ್ಲಿ “ಆಯುಷ್ ಚಿಕಿತ್ಸಾ ಶಿಬಿರ”ವು ಒಂದಾಗಿದೆ.
ಭಾನುವಾರ ಮಂಗಳೂರು ನಗರದ ಪಂಜಿಮೊಗರು ಗುಡ್ಡೆಯಂಗಡಿಯಲ್ಲಿರುವ ಮೊಗೇರ ಸಂಘದ ಸಮುದಾಯ ಭವನದಲ್ಲಿ ಉಚಿತ ಆಯುಷ್ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಯಿತು.
ಮಂಗಳೂರಿನ ಲಾಲ್ ಬಾಗ್ ಹ್ಯಾಟ್ ಹಿಲ್ ನಲ್ಲಿರುವ ಜಿಲ್ಲಾ ಆಯುರ್ವೇದ ಮತ್ತು ಹೋಮಿಯೋಪತಿ ಸಂಯುಕ್ತ ಆಸ್ಪತ್ರೆ ವತಿಯಿಂದ ಜರಗಿದ ಈ ಶಿಬಿರವು ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಇವರ ಸಹಕಾರದೊಂದಿಗೆ ಹಾಗೂ ಮೋಗೇರ ಸಂಘ ಮಂಗಳೂರು ಇವರ ಸಹಭಾಗಿತ್ವದಲ್ಲಿ ಜರಗಿತು.

“ಆಯುಷ್ ಚಿಕಿತ್ಸಾ ಶಿಬಿರ”ಕ್ಕೆ ಸ್ಥಳೀಯ ಕಾರ್ಪೋರೇಟರ್ ಶ್ರೀ ದಯಾನಂದ ಶೆಟ್ಟಿ ಇವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಸಹಸ್ರಾರು ವರ್ಷಗಳ ಇತಿಹಾಸವುಳ್ಳ ಆಯುರ್ವೇದದಲ್ಲಿ ತಿಳಿಸಿರುವಂತೆ ಜೀವನ ಶೈಲಿ, ಆಹಾರ ಪದ್ಧತಿ ಅನುಸರಿಸಿದಲ್ಲಿ ಆರೋಗ್ಯ ರಕ್ಷಣೆಗೆ ಸಹಕಾರಿಯಾಗುತ್ತದೆ.ಉಚಿತ ಚಿಕಿತ್ಸೆಯೊಂದಿಗೆ ಯೋಗ, ಪ್ರಾಣಾಯಾಮಗಳ ಬಗ್ಗೆ ಅರಿವು ಮೂಡಿಸುತ್ತಿರುವ ಆಯುಷ್ ಇಲಾಖೆಯ ಪ್ರಯತ್ನ ಶ್ಲಾಘನೀಯವೆಂದರು.
ಮಂಗಳೂರು ತಾಲೂಕು ಮೋಗೇರ ಸಂಘದ ಅಧ್ಯಕ್ಷರಾದ ಶ್ರೀ ಸೀತಾರಾಮ್ ರವರು ಮಾತಾನಾಡಿ, ಆರ್ಥಿಕವಾಗಿ ಹಿಂದುಳಿದ ಶ್ರಮ ಜೀವಿಗಳೇ ಅಧಿಕವಾಗಿರುವ ಈ ಪರಿಸರದಲ್ಲಿ ಆಯುಷ್ ನ ಉಚಿತ ಚಿಕಿತ್ಸಾ ಶಿಬಿರವು ನಿಜಕ್ಕೂ ಪ್ರಯೋಜನಕಾರಿ ಎನಿಸಲ್ಪಟ್ಟಿದೆ ಎಂದರು.

ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಇವರು ನಿತ್ಯ ಜೀವನನೋಪಯೋಗಿ ಎನಿಸುವ ಸರಳವಾದ ಯೋಗಮುದ್ರೆಗಳು ಹಾಗೂ ವರ್ಣ ಚಿಕಿತ್ಸೆಗಳ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು. ಇದು ಸಾರ್ವಜನಿಕರಿಗೆ ರೋಗ ಬರದಂತೆ ತಡೆಯಲು ಹಾಗೂ ರೋಗ ಬಂದ ನಂತರ ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಹಮ್ಮದ್ ಇಕ್ಬಾಲ್ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯುಷ್ ಪದ್ಧತಿಗಳನ್ನು ಜನರಿಗೆ ತಲಪಿಸುವ ಪ್ರಯತ್ನದ ಆಂಗವಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ವಿವಿಧ ಸ್ಪೆಶಾಲಿಟಿ ವಿಭಾಗಗಳನ್ನು ತೆರೆದು ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಹ್ಯಾಟ್ ಹಿಲ್ನಲ್ಲಿರುವ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿಯು ಉತ್ತಮ ಸೇವೆ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಕರೆಯಿತ್ತರು.

ಆಯುಷ್ ವೈಧ್ಯಾಧಿಕಾರಿ ಡಾ.ಮುರಳಿಧರ್ ಆಶ್ರಿತ್ ಸ್ವಾಗತಿಸಿದರು. ಹಿರಿಯ ಆಯುರ್ವೇದ ತಜ್ಞ ವೈಧ್ಯರಾದ ಡಾ. ದೇವದಾಸ್ ಕೆ.ಪುತ್ರನ್ ವಂದಿಸಿದರು.
ಆಯುಷ್ ಇಲಾಖೆಯ ವೈಧ್ಯಾಧಿಕಾರಿ ಡಾ ಮೊಹಮ್ಮದ್ ಅಶ್ಫಾಕ್, ಶುಶ್ರೂಷಕಿ ಶ್ರೀಮತಿ ಸುನಂದ, ನಿತಿನ್, ನಿತೇಶ್ ಹಾಗೂ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ. ಕಾರ್ತಿಕ್ , ಡಾ ವಾಣಿ ಹಾಗೂ ತಂಡದವರು ಭಾಗವಹಿಸಿ ಸೇವೆಗೈದರು. ಮೊಗೇರ ಸಂಘದ ಪಧಾದಿಕಾರಿಗಳು ಉಪಸ್ಥಿತರಿದ್ದರು. ಸುತ್ತಮುತ್ತಲ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು.
Comments are closed.