ಉಡುಪಿ: ಉಡುಪಿಯ ನಾಡ ಹಬ್ಬ ಎಂದೇ ಪ್ರಸಿದ್ದವಾಗಿರುವ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಮಹೋತ್ಸವಕ್ಕೆ ಮೊದಲ ಹೆಜ್ಜೆಯನ್ನಿರಿಸಲಾಗಿದೆ. ಉಡುಪಿಯಲ್ಲಿ ಅಷ್ಟಮಠಗಳಿದ್ದು ಪ್ರತೀ ಒಂದೊಂದು ಮಠಕ್ಕೆ 2 ವರ್ಷಗಳಂತೆ ಪರ್ಯಾಯ ನಡೆಸುವ, ಶ್ರೀ ಕೃಷ್ಣನ ಪೂಜೆ ನಡೆಸಲು ಅವಕಾಶ ಸಿಗುತ್ತದೆ. ಇದೀಗ ಪೇಜಾವರ ಶ್ರೀಗಳ ಪರ್ಯಾಯ ಮಹೋತ್ಸವ ನಡೆಯುತ್ತಿದ್ದು ಮುಂದಿನ ಅಂದರೆ 2018ರ ಜನವರಿ 18ರಂದು ನಡೆಯುವ ಪರ್ಯಾಯದ ಪೀಠವನ್ನು ಪಲಿಮಾರು ಮಠಾದೀಶರು ಏರಳಿದ್ದಾರೆ. ಇದಕ್ಕಾಗಿ ಸಾಂಪ್ರದಾಯಿಕ ಬಾಳೆ ಮುಹೂರ್ತ ಧಾರ್ಮಿಕ ವಿಧಿ ವಿಧಾನಗಳೋಂದಿಗೆ ನಡೆಯಿತು.

ಪೊಡವಿಗೊಡೆಯ , ಅನ್ನ ಬ್ರಹ್ಮನ ಕ್ಷೇತ್ರ ಉಡುಪಿಯಲ್ಲಿ ಇದೀಗ ಮುಂದಿನ ಪರ್ಯಾಯಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. 800 ವರ್ಷಗಳ ಹಿಂದೆ ಮದ್ವಾಚಾರ್ಯರು ಉಡುಪಿಯಲ್ಲಿ ಶ್ರೀ ಕೃಷ್ಣನನ್ನು ಪ್ರತಿಷ್ಟಾಪಿಸಿ ಕೃಷ್ಣನ ಪೂಜೆಗಾಗಿ ಅಷ್ಟ ಮಠಗಳನ್ನು ನಿರ್ಮಿಸಿ, ಅಷ್ಟ ಯತಿಗಳನ್ನು ನೇಮಿಸುತ್ತಾರೆ. ಎರಡು ತಿಂಗಳಿಗೊಮ್ಮೆ ಪರ್ಯಾಯ ಮಹೋತ್ಸವ ನಡೆಯುವ ಸಂಪ್ರದಾಯವನ್ನು ವಾದಿರಾಜರು 2 ವರ್ಷಗಳಿಗೊಮ್ಮೆ ಬದಲಾಯಿಸುತ್ತಾರೆ. ಅಂದಿನಿಂದ ಇಂದಿನವರೆಗೆ 2 ವರ್ಷಗಳಿಗೊಮ್ಮೆ ಎಂಬಂತೆ ಉಡುಪಿಯಲ್ಲಿ ನಾಡ ಹಬ್ಬ ಎಂದೇ ಪ್ರಸಿದ್ದ ವಾದ ಪರ್ಯಾಯ ಮಹೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಒಂದೋಂದು ಮಠಕ್ಕೆ ಎರಡು ವರ್ಷ ಎಂಬಂತೆ 16 ವರ್ಷಗಳಿಗೊಮ್ಮೆ ಪರ್ಯಾಯ ಮಹೋತ್ಸವ ನಡೆಸುವ ಅಧಿಕಾರ ಪ್ರತೀ ಮಠಕ್ಕೆ ಸಿಗುತ್ತದೆ. ಇದೀಗ ನಡೆಯುತ್ತಿರುವ ಪೇಜಾವರ ಶ್ರೀಗಳ ಪರ್ಯಾಯ 2018 ಜನವರಿ 16ಕ್ಕೆ ಕೊನೆಗೊಳ್ಳಲಿದೆ. ನಂತರ ಅವಕಾಶ ಪಲಿಮಾರು ಮಠಕ್ಕೆ ಸಿಗಲಿದ್ದು ಪರ್ಯಾಯ ಒಂದು ವರ್ಷದ ಮುಂಚೆಯೇ ಪರ್ಯಾಯದ ಸಂಪ್ರದಾಯಗಳು ನಡೆಯುತ್ತದೆ. ಪರ್ಯಾಯ ಕೈಗೊಳ್ಳುವ ಮಠಗಳು ನಾಲ್ಕು ಮುಹೂರ್ತಗಳನ್ನು ನಡೆಸಬೇಕು. ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ, ಭತ್ತ ಮುಹೂರ್ತಗಳನ್ನು ನಡೆಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಹಿನ್ನಲೆಯಲ್ಲಿ ಬಾಳೆ ಮುಹೂರ್ತ ಭಾನುವಾರ ಧಾರ್ಮಿಕ ವಿಧಿ ವಿಧಾನದ ಮೂಲಕ ನಡೆಯಿತು.
ಶ್ರೀ ಕೃಷ್ಣನ ಪೂಜಾ ಕೈಕಂರ್ಯದ ಸರತಿ ಆರಭವಾಗುವುದೇ ಪಲಿಮಾರು ಮಠದಿಂದ.ಕೊನೆಗೊಳ್ಳುವುದು ಪೇಜಾವರ ಮಠದಿಂದ. ಪಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ನಂತರ ಪೇಜಾವರ ಮಠದಿಂದ ಕೊನೆಗೊಳ್ಳುತ್ತದೆ. ಇದೀಗ ಪಲಿಮಾರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಎರಡನೇ ಪರ್ಯಾಯ ಪೀಠವನ್ನು ಏರಲಿದ್ದಾರೆ. ಪರ್ಯಾಯದ ಪೂರ್ವ ಸಿದ್ದತೆಯ ಮೊದಲ ಹೆಜ್ಜೆಯಾಗಿ ಬಾಳೆ ಮುಹೂರ್ತ ಸಂಪನ್ನಗೊಂಡಿದೆ. ಸಚಿವ ಪ್ರಮೋದ್ ಮದ್ವರಾಜ್, ಶಾಸಕ ವಿನಯ್ ಕುಮಾರ್ ಸೊರಕೆ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಪಲಿಮಾರು ಶ್ರೀಗಳು ಬಾಳೆ ಮುಹೂರ್ತದ ಮೂಲಕ ಉತ್ತಮ ಆರೋಗ್ಯಕ್ಕೆ ಇದು ಮುಹೂರ್ತವಾಗಲಿ ಎಂದು ಆಶಿಸಿದ್ದಾರೆ.
ಪೇಜಾವರ ಶ್ರೀಗಳ ಐತಿಹಾಸಿಕ ಪರ್ಯಾಯದ ಬಳಿಕ ಇದೀಗ ಮತ್ತೆ ಮುಂದಿನ ಪರ್ಯಾಯ ಮಹೋತ್ಸವಕ್ಕೆ ಸಿದ್ದತೆ ಮಠದ ವತಿಯಿಂದ ಆರಂಭಗೊಂಡಿದೆ. ಮುಂದಿನ ಮುಹೂರ್ತಗಳ ಜೊತೆಗೆ ಪಲಿಮಾರು ಶ್ರೀಗಳು ದೇಶಪರ್ಯಟನೆಗೆ ತೆರಳಲಿದ್ದಾರೆ. ಒಟ್ಟಾರೆಯಾಗಿ ಪರ್ಯಾಯ ಮಹೋತ್ಸವದ ಮತ್ತೊಂದು ಚಕ್ರ ಪಲಿಮಾರು ಪರ್ಯಾಯದೊಂದಿಗೆ ಆರಂಭವಾಗಲಿದೆ.
Comments are closed.