ರಾಷ್ಟ್ರೀಯ

ಉತ್ತರ ಪ್ರದೇಶ ಚುನಾವಣೆ ದೇಶದ ರಾಜಕೀಯ ಭವಿಷ್ಯ ನಿರ್ಧಾರ: ಅಖಿಲೇಶ್‌

Pinterest LinkedIn Tumblr

akhileshಲಖನೌ: ‘ಮುಂಬರುವ ಉತ್ತರ ಪ್ರದೇಶದ ಚುನಾವಣೆ ದೇಶದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶ ಸರ್ಕಾರ ಇತರೆ ರಾಜ್ಯಗಳಿಗೆ ಮಾದರಿಯಾದ ಆಡಳಿತ ನೀಡಿದೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂದಿದ್ದಾರೆ.

‘ನಾವು ಯಾರನ್ನೂ ಪರೀಕ್ಷಿಸುವ ಅಗತ್ಯವಿಲ್ಲ. ಯಾರಾದರೂ ನನ್ನನ್ನು ಪರೀಕ್ಷಿಸಬೇಕೆಂದಿದ್ದರೆ ಅದಕ್ಕೆ ನಾನು ಸಿದ್ಧ’ ಎಂದು ಅಖಿಲೇಶ್‌ ಹೇಳಿದ್ದಾರೆ.

ಮುಖ್ಯಮಂತ್ರಿಯಾಗಲಾರೆ: ಶಿವಪಾಲ್‌
‘ನಾನು ಮುಖ್ಯಮಂತ್ರಿಯಾಗಲಾರೆ. ನನ್ನಿಂದ ಯಾವುದೇ ತ್ಯಾಗವನ್ನೂ ನೀವು (ಅಖಿಲೇಶ್‌ ಯಾದವ್‌) ಬಯಸಬಹುದು. ಪಕ್ಷಕ್ಕಾಗಿ ನನ್ನ ರಕ್ತ ಕೊಡಲೂ ನಾನು ಸಿದ್ಧನಿದ್ದೇನೆ’ ಎಂದು ಶಿವಪಾಲ್‌ ಸಿಂಗ್‌ ಯಾದವ್‌ ಹೇಳಿದ್ದಾರೆ.

‘ನೀವು ನನ್ನನ್ನು ಎಷ್ಟೇ ಅವಮಾನಿಸಿದರೂ, ಎಷ್ಟು ಬಾರಿ ಹೊರಹಾಕಿದರೂ ಪರವಾಗಿಲ್ಲ. ನಾನು ಒಳ್ಳೆಯ ಕೆಲಸ ಮಾಡಿದ್ದೇನೆ ಎಂಬುದು ನನಗೆ ಗೊತ್ತಿದೆ. ಪಕ್ಷಕ್ಕಾಗಿ ಯಾವ ರೀತಿಯ ತ್ಯಾಗಕ್ಕೂ ನಾನು ಸಿದ್ಧನಿದ್ದೇನೆ’ ಎಂದಿದ್ದಾರೆ.

‘ನೀವು ಒಳ್ಳೆಯ ಕೆಲಸ ಮಾಡಿದ್ದೀರಿ. ನಾನೂ ಕೂಡಾ ಸಚಿವನಾಗಿ ನನಗೆ ನೀಡಿದ ಜವಾಬ್ದಾರಿಗಳನ್ನು ಉತ್ತಮವಾಗಿಯೇ ನಿಭಾಯಿಸಿದ್ದೇನೆ. ಲೋಕೋಪಯೋಗಿ, ನೀರಾವರಿ, ಕಂದಾಯ, ಸಹಕಾರ ಇಲಾಖೆ ಸೇರಿದಂತೆ ನನಗೆ ನೀಡಿದ್ದ ಇಲಾಖೆಗಳಲ್ಲಿ ನಾನು ಮಾಡಿರುವ ಕೆಲಸವನ್ನು ನೀವು ಪರಿಶೀಲಿಸಬಹುದು’ ಎಂದು ಅವರು ಹೇಳಿದ್ದಾರೆ.

56 ಇಂಚಿನ ಎದೆಯಿಂದ ಏನು ಪ್ರಯೋಜನ?
‘ಇಷ್ಟು ದಿನವಾದರೂ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗದ ನಿಮಗೆ 56 ಇಂಚಿನ ಎದೆ ಇದ್ದು ಏನು ಪ್ರಯೋಜನ’ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

Comments are closed.