ಕರ್ನಾಟಕ

ರಾಜ್ಯದಲ್ಲಿ 1950ರ ಭೀಕರ ಕ್ಷಾಮ ಮರುಕಳಿಸುವ ಭೀತಿ

Pinterest LinkedIn Tumblr

droughtಬೆಂಗಳೂರು, ನ. ೨ – ಅರವತ್ತಾರು ವರ್ಷಗಳ ಹಿಂದೆ ರಾಜ್ಯವನ್ನು ಕಾಡಿದ್ದ ಭೀಕರ ಬರಗಾಲದ ಸ್ಥಿತಿ ಈ ಬಾರಿ ಮತ್ತೆ ಆವರಿಸುವ ಲಕ್ಷಣಗಳನ್ನು ಸರ್ಕಾರ ಗುರುತಿಸಿದೆ.

1950ರಲ್ಲಿ ಇದೇ ಪ್ರಮಾಣದ ಬರಗಾಲ ಆವರಿಸಿತ್ತು. ಆಗಿನ ಪರಿಸ್ಥಿತಿ ತುಂಬಾ ಭೀಕರವಾಗಿತ್ತು. ಆಗಿನ ಸರ್ಕಾರ ಬರಗಾಲದ ಬವಣೆ ನೀಗಲು ಪರಿಹಾರ ಕಾಮಗಾರಿಗಳನ್ನು ಆರಂಭಿಸಿ ಸಂತ್ರಸ್ತರಿಗೆ ನೆರವಾಗಿತ್ತು.

* ರಾಜ್ಯಕ್ಕೆ ಮತ್ತೆ ಕಾಡಿದ ಭೀಕರ ಬರಗಾಲ.

* ಕೈಕೊಟ್ಟ ಹಿಂಗಾರು – ಮುಂಗಾರು.

* ಜಲಾಶಯ ಕೆರೆ-ಕುಂಟೆಗಳಲ್ಲಿ ಬತ್ತಿಹೋದ ನೀರು.

* ಕೈಕೊಟ್ಟ ಬೆಳೆದು ನಿಂತ ಪೈರು.

* ವಿದ್ಯುತ್ ಕಡಿತದ ಅನಿವಾರ್ಯತೆ.

* ಜಲಾಶಯಗಳಲ್ಲಿ ತಳ ಮುಟ್ಟಿದ ನೀರು.

* 136 ತಾಲೂಕುಗಳಲ್ಲಿ ಬರಗಾಲದ ತೀವ್ರತೆ.

* 15 ಸಾವಿರ ಕೋಟಿ ರೂ. ಬೆಳೆ ನಷ್ಟ.

* ಪರಿಹಾರ ಕಾಮಗಾರಿಗಳಿಗೆ 3,375 ಕೋಟಿ ರೂ.ಗೆ ಕೇಂದ್ರಕ್ಕೆ ಮನವಿ.

* ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ.

* ಜಾನುವಾರುಗಳ ಮೇವಿಗೂ ತತ್ವಾರ.

* ಕುಡಿಯುವ ನೀರಿಗೂ ಬರ.

ಮುಂಗಾರು ಮಳೆ ವೈಫಲ್ಯದ ಪರಿಣಾಮವಾಗಿ ಜಲಾಶಯಗಳು, ಕೆರೆ-ಕುಂಟೆಗಳು ಈಗ ಬಹುತೇಕ ಖಾಲಿ. ಬೆಳೆದು ನಿಂತ ಪೈರು ಹೊಲದಲ್ಲೇ ಕಮರಿಹೋಗುತ್ತಿದೆ. ಜಲ ಮೂಲಗಳು ಬತ್ತಿ ಹೋಗುತ್ತಿವೆ. ಜಾನುವಾರುಗಳಿಗೆ ಮೇವಿನ ಕೊರತೆಯೂ ಎದುರಾಗಿದೆ, ಈ ಸಮಸ್ಯೆಗಳ ಬ್ರಹ್ಮಾಂಡವನ್ನು ಎದುರಿಸಲು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.

ಸರ್ಕಾರದ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ವಿದ್ಯುತ್ ಕಡಿತ ಜಾರಿ ಮಾಡದೇ ಬೇರೆ ಮಾರ್ಗವಿಲ್ಲ. ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಿದರೂ ದುಬಾರಿ ಹಣ ನೀಡಿ ಗ್ರಾಹಕರು ಬಳಸುವುದು ಕಷ್ಟ. ಈಗಾಗಲೇ ವಿದ್ಯುತ್ ಸಮಸ್ಯೆ ಇನ್ನೊಂದು ದೊಡ್ಡ ಸವಾಲು.

ತಮಿಳುನಾಡಿನ ದುರಾಸೆ ಹಾಗೂ ಒತ್ತಡ‌ದ ಪರಿಣಾಮವಾಗಿ ಕೃಷ್ಣರಾಜಸಾಗರ ಸೇರಿದಂತೆ ಕಾವೇರಿ ನದಿ ಜಲಾಶಯಗಳಲ್ಲಿ ನೀರು ತಳಮುಟ್ಟಿದೆ.

ಕಾವೇರಿ ಅಚ್ಚುಕಟ್ಟಿಗೆ ನೀರನ್ನು ಒದಗಿಸಲು ಅಸಾಧ್ಯ. ಮಲೆನಾಡಿನ ಪ್ರದೇಶದಲ್ಲೂ ಇದೇ ಪರಿಸ್ಥಿತಿ ಇದೆ. ಇನ್ನೂ ಬಯಲುಸೀಮೆಯಲ್ಲಿ ಚಳಿಗಾಲದ ಆರಂಭದಲ್ಲಿ ಕುಡಿಯುವ ನೀರಿಗೆ ಬರ ಎದುರಾಗಿದೆ. ಹೀಗಾಗಿ ಬರಗಾಲದ ಬವಣೆ ಎದುರಿಸುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.

ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಬರಗಾಲ ಈಗ ಮತ್ತೊಮ್ಮೆ ಎದುರಾಗಿದ್ದು, ಸಹಜವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಬರಗಾಲದ ಬಿಸಿ ಅನುಭವಿಸುವಂತಾಗಿದೆ.

ಭೀಕರ ಬರ ಇನ್ನೊಮ್ಮೆ ರಾಜ್ಯದಲ್ಲಿ ಎದುರಾಗಿರುವುದರಿಂದ ಸಹಜವಾಗಿಯೇ ಸರ್ಕಾರ ಕಂಗೆಟ್ಟಿದೆ.

ರಾಜ್ಯದ 176 ತಾಲೂಕುಗಳ ಪೈಕಿ 136 ತಾಲೂಕುಗಳಲ್ಲಿ ಭೀಕರ ಬರ ಉಂಟಾಗಿದ್ದು, ಕೆರೆ ಮತ್ತು ನದಿಗಳು ಬರಿದಾಗುತ್ತಲೇ ಹೋಗುತ್ತಿವೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಲೇ ಇವೆ. ಟ್ಯಾಂಕರ್‌ಗಳ ಮೂಲಕ ಹಳ್ಳಿಗಳಿಗೆ ನೀರು ಪೂರೈಸಲು ಸರ್ಕಾರ ಶತಪ್ರಯತ್ನ ನಡೆಸಿವೆ.

ಮುಂಗಾರು ಮತ್ತು ಹಿಂಗಾರು ಕೈಕೊಟ್ಟಿರುವುದರಿಂದ ನೇರವಾಗಿ ಕೃಷಿಯ ಮೇಲೆ ಪರಿಣಾಮವನ್ನುಂಟು ಮಾ‌ಡಿದೆ. ಕೃಷಿ ಭೂಮಿ ಒಣಗಲಾರಂಭಿಸಿದ್ದು, ರೈತರು ತಲೆ ಮೇಲೆ ಕೈ ಎತ್ತಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಕರ್ನಾಟಕದ ಹಳೆಯ ಭಾಗಗಳು ಬರಗಾಲದಿಂದ ತತ್ತರಿಸಿ ಹೋಗಿದೆ. ಆ ಭಾಗದಲ್ಲಿ ಮಳೆ ಬಾರದಿದ್ದರೆ ಮುಂದೇನು? ಎಂಬ ಸ್ಥಿತಿ ಎದುರಾಗಿದೆ. ಜಾನುವಾರುಗಳ ಮೇವಿಗೂ ತತ್ವಾರ ಉಂಟಾಗಿದೆ. ಸರ್ಕಾರ ಮೇವು ಪೂರೈಸಲು ಮುಂದಾಗಿದೆ.

ಸರ್ಕಾರ ಈಗಾಗಲೇ ಬರ ಪರಿಸ್ಥಿತಿಯನ್ನು ಲೆಕ್ಕಾಚಾರ ಹಾಕಿದೆ. ಒಟ್ಟು 12,145.29 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಮೊರೆ ಹೋಗಿದ್ದು, ಬರ ಪರಿಹಾರಕ್ಕಾಗಿ 3,373.85 ಕೋಟಿ ಹಾಗೂ ನೆರೆ ಪರಿಹಾರಕ್ಕಾಗಿ 386.44 ಕೋಟಿ ನೆರವು ಕೇಳಲು ನಿರ್ಧರಿಸಿವೆ.

ತೀವ್ರ ಬರಗಾಲದಿಂದ ತತ್ತರಿಸಿರುವ ರಾಜ್ಯದ ಪರಿಸ್ಥಿತಿಯನ್ನು ವೀಕ್ಷಿಸಲು ಕೇಂದ್ರ ಅಧ್ಯಯನ ತಂಡ ಇಂದು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿರುವುದು ಮುಳುಗುವವನಿಗೆ ಹುಲ್ಲಿನ ಆಸರೆಯಾದಂತಾಗಿದೆ.

ಮೂರು ತಂಡಗಳಲ್ಲಿ ಜಿಲ್ಲೆಯ ಪ್ರವಾಸ ಆರಂಭಿಸಿರುವ ಅಧ್ಯಯನ ತಂಡ ಸದ್ಯದಲ್ಲೇ ಕೇಂದ್ರಕ್ಕೆ ತನ್ನ ವರದಿಯನ್ನು ಸಲ್ಲಿಸಲಿದೆ. ವರದಿಯಂತೆ ಕೇಂದ್ರ ಸರ್ಕಾರ ಪರಿಹಾರ ಹಣವನ್ನು ಬಿಡುಗಡೆ ಮಾಡಿದಲ್ಲಿ ಕೊಂಚ ಮಟ್ಟಿಗಾದರೂ ಸರ್ಕಾರ ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಹಾದಿ ಸುಗಮವಾಗಲಿದೆ

Comments are closed.