ರಾಷ್ಟ್ರೀಯ

ರಕ್ಷಣಾ ದಾಖಲೆ ಹೊಂದಿದ್ದನೆಂಬ ಆರೋಪ; ಪಾಕಿಸ್ತಾನ ಹೈಕಮೀಷನರ್ ಕಚೇರಿ ಅಧಿಕಾರಿ ಬಂಧನ

Pinterest LinkedIn Tumblr

pakನವದೆಹಲಿ, ಅ. ೨೭- ರಕ್ಷಣಾ ದಾಖಲೆಗಳನ್ನು ಹೊಂದಿದ್ದಾನೆ ಎಂಬ ಆರೋಪದ ಮೇಲೆ ಪಾಕಿಸ್ತಾನ ಹೈಕಮೀಷನರ್ ಅಬ್ದುಲ್ ಬಾಸಿತ್ ಕಚೇರಿಯ ಅಧಿಕಾರಿಯೊಬ್ಬರನ್ನು ಬಂಧಿಸಿರುವ ದೆಹಲಿ ಪೊಲೀಸರು ವಿಚಾರಣೆ ನಂತರ ಆತನನ್ನು ರಾಜತಾಂತ್ರಿಕ ರಕ್ಷಣಾ ನೀತಿ ಆಧಾರದ ಮೇಲೆ ಬಿಡುಗಡೆ ಮಾಡಿದ್ದಾರೆ.

ಈ ಮಧ್ಯೆ ಪಾಕಿಸ್ತಾನಕ್ಕೆ ಗೂಢಚರ್ಯೆ ಮಾಹಿತಿ ನೀಡುತ್ತಿದ್ದರು ಎಂಬ ಆರೋಪದ ಮೇಲೆ ಇನ್ನಿಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಪಾಕಿಸ್ತಾನ ಹೈಕಮೀಷನರ್ ಕಚೇರಿಯ ಮೆಹ್‌ಮೂದ್ ಅಖ್ತರ್‌ರನ್ನು ಪೊಲೀಸರು ಬಂಧಿಸಿ ಅವರ ಬಳಿ ಇದ್ದ ನಕ್ಷೆಗಳು, ಯೋಧರ ನಿಯೋಜನೆ ಹಾಗೂ ಕಾರ್ಯತಂತ್ರಗಳ ಕುರಿತು ದಾಖಲೆಗಳನ್ನು ವಶಕ್ಕೆ ಪ‌ಡೆದಿದ್ದಾರೆ.

ಜಾಗೃತದಳದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದೆಹಲಿಯ ಅಪರಾಧ ವಿಭಾಗದ ಪೊಲೀಸರು ಅಖ್ತರ್‌ನನ್ನು ವಶಕ್ಕೆ ಪಡೆದಿದ್ದರು.

ಈ ನಡುವೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಪಾಕಿಸ್ತಾನದ ಹೈಕಮೀಷನರ್ ಅಬ್ದುಲ್ ಬಾಸಿತ್ ಅವರಿಗೆ ಸಮನ್ಸ್ ನೀಡಿ ವಿಚಾರಣೆಗಾಗಿ ಕರೆಸಿಕೊಳ್ಳಲಾಗಿದೆ.

ದೆಹಲಿ ಅಪರಾಧ ವಿಭಾಗದ ಪೊಲೀಸರು ಬಂಧಿಸಿರುವ ಇನ್ನಿಬ್ಬರು ಗೂಢಚಾರಿಗಳು ರಾಜಸ್ಥಾನ ನಿವಾಸಿಗಳೆಂದು ಹೇಳಲಾಗಿದ್ದು, ಇವರು ಪಾಕಿಸ್ತಾನದ ಹೈಕಮೀಷನರ್ ಸಿಬ್ಬಂದಿಗೆ ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನು ಒದಗಿಸುತ್ತಿದ್ದರು ಎಂದು ಹೇಳಲಾಗಿದೆ.

ಆರೋಪಿಗಳಿಬ್ಬರು ರಾಜಸ್ಥಾನದವರಾಗಿದ್ದು, ಪಾಕಿಸ್ತಾನದ ಐಎಸ್‌ಐಗಾಗಿ ಕೆಲಸ ಮಾಡುತ್ತಿದ್ದರು. ದೆಹಲಿಯ ಪಾಕಿಸ್ತಾನ ಹೈಕಮೀಷನರ್ ಕಚೇರಿ ಸಿಬ್ಬಂದಿಯೊಂದಿಗೂ ಈ ಗೂಢಚಾರಿಗಳು ಸಂಪರ್ಕದಲ್ಲಿದ್ದರು. ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಒದಗಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತರನ್ನು ಮೌಲಾನ ರಂಜಾನ್ ಮತ್ತು ಸುಭಾಷ್ ಜಾಂಗೀರ್ ಎಂದು ಗುರುತಿಸಲಾಗಿದೆ.

ಬಂಧಿಸಲಾಗಿದ್ದ ಮೆಹಮೂದ್ ಅಖ್ತರ್‌ಗೆ ದೇಶ ಬಿಟ್ಟು ಹೋಗುವಂತೆ ಸೂಚಿಸಲಾಗಿದೆ. ಕಳೆದ 6 ತಿಂಗಳಿಂದ ರಕ್ಷಣಾ ದಾಖಲೆಗಳನ್ನು ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದ ಎಂದು ಹೇಳಲಾಗಿದೆ. ಆತನ ಬಳಿ ನಕಲಿ ಆಧಾರ್ ಕಾರ್ಡ್ ಇದ್ದು, ಅದನ್ನು ವಶಪ‌ಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.