ನವದೆಹಲಿ: ಮುಂಬೈನ ಹಾಜಿ ಅಲಿ ದರ್ಗಾದೊಳಗೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಲು ದರ್ಗಾ ಟ್ರಸ್ಟ್ ಸಮ್ಮತಿಸಿದೆ.
ದರ್ಗಾದ ಒಳಗೆ ಮಹಿಳೆಯರ ಪ್ರವೇಶಕ್ಕೆ ಇದ್ದ ನಿಷೇಧವನ್ನು ತೆರವುಗೊಳಿಸಿ ಬಾಂಬೆ ಹೈಕೋರ್ಟ್ ಆ. 26ರಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ ನಿಷೇಧ ತೆರವಿಗೆ ಎರಡು ವಾರಗಳ ತಡೆಯಾಜ್ಞೆಯನ್ನೂ ನೀಡಿತ್ತು.
ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಹಾಜಿ ಅಲಿ ದರ್ಗಾ ಟ್ರಸ್ಟ್ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ಸೋಮವಾರ ನಡೆದಿದೆ. ಅರ್ಜಿ ವಿಚಾರಣೆ ವೇಳೆ ದರ್ಗಾದ ಒಳಗೆ ಪ್ರವೇಶಿಸಿಲು ಮಹಿಳೆಯರಿಗೆ ಅವಕಾಶ ನೀಡುವುದಾಗಿ ಹೇಳಿದ ಟ್ರಸ್ಟ್, ದರ್ಗಾದಲ್ಲಿನ ಮೂಲಸೌಕರ್ಯಗಳನ್ನು ಸರಿಪಡಿಸುವುದಕ್ಕಾಗಿ ನಾಲ್ಕು ವಾರಗಳ ಕಾಲಾವಕಾಶ ಬೇಕು ಎಂದು ಮನವಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಎಲ್ ನಾಗೇಶ್ವರ ರಾವ್ ಅವರ ನ್ಯಾಯಪೀಠವು, ದರ್ಗಾ ಟ್ರಸ್ಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ತಳ್ಳಿ ಹಾಕಿ, ಟ್ರಸ್ಟ್ ನ ಬೇಡಿಕೆಯಂತೆ ಕಾಲಾವಕಾಶವನ್ನು ನೀಡಿದೆ.
Comments are closed.