ಬೆಂಗಳೂರು: ಸರ್ಕಾರಿ ನೌಕರರಿಗೆ ಜನಪ್ರನಿಧಿಗಳಿಗೆ ವೈದ್ಯಕೀಯ ವೆಚ್ಚಕ್ಕೆ ಕೋಟಿ ಕೋಟಿ ದುಡ್ಡು ವ್ಯಯಿಸಲಾಗುತ್ತಿದೆ. ಅದೆಲ್ಲವೂ ಖಾಸಗಿ ಆಸ್ಪತ್ರೆಯ ಪಾಲಾಗುತ್ತಿದೆ. ಇದಕ್ಕಾಗಿ ಆರೋಗ್ಯ ಸಚಿವ ರಮೇಶ್ಕುಮಾರ್ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕಡ್ಡಾಯ ಅನ್ನುವ ಕಾಯ್ದೆ ತರೋದಕ್ಕೆ ನಿರ್ಧಾರ ಮಾಡಿದ್ದಾರೆ. ಆದ್ರೇ ಈ ನಿರ್ಧಾರಕ್ಕೆ ಸರ್ಕಾರಿ ನೌಕರರು ಮಾತ್ರ ಫುಲ್ ಗರಂ ಆಗಿದ್ದಾರೆ.
ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬರೋಬ್ಬರಿ 150 ಕೋಟಿ ಹಾಗೂ ಜನಪ್ರತಿನಿಧಿಗಳಿಗೆ ಸುಮಾರು 50 ಕೋಟಿಯಷ್ಟು ವೈದ್ಯಕೀಯ ವೆಚ್ಚಕ್ಕಾಗಿ ಖರ್ಚು ಮಾಡುತ್ತಿದೆ. ಈ ದುಡ್ಡೆಲ್ಲವೂ ಖಾಸಗಿ ಆಸ್ಪತ್ರೆಗೆ ಹೋಗ್ತಾ ಇದೆ. ನಾವೇ ಹಿಂಗ್ಮಾಡಿದ್ರೆ ಜನ್ರು ಸರ್ಕಾರಿ ಆಸ್ಪತ್ರೆಯನ್ನು ತಾತ್ಸಾರ ಮಾಡ್ತಾರೆ ಅಂತಾ ಆರೋಗ್ಯ ಸಚಿವ ರಮೇಶ್ ಕುಮಾರ್ ಜನಪರ ಆರೋಗ್ಯ ನೀತಿ ತರಲು ಮನಸು ಮಾಡಿದ್ದಾರೆ.
ಈ ಪ್ರಕಾರ ಸರ್ಕಾರಿ ನೌಕರರು ಹಾಗೂ ಜನಪ್ರತಿನಿಧಿಗಳು ಸರ್ಕಾರಿ ಆಸ್ಪತ್ರೆಗೆ ಹೋಗಿ ಕಡ್ಡಾಯ ಚಿಕಿತ್ಸೆ ಪಡೆಯುವಂತೆ ಕಾಯ್ದೆ ತರಲು ಮುಂದಾಗಿದ್ದಾರೆ. ಈ ಕಾಯ್ದೆ ಜಾರಿಯ ಬಗ್ಗೆ ಖುದ್ದು ಅಭಿಪ್ರಾಯ ನೀಡುವಂತೆ ರಮೇಶ್ ಕುಮಾರ್ ವಿವಿಧ ಸರ್ಕಾರಿ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ವಿನಂತಿಸಿಕೊಂಡಿದ್ದಾರೆ.
ಆದ್ರೇ ಆರೋಗ್ಯ ಸಚಿವರು ಮುಂದಿಟ್ಟ ಪ್ರಸ್ತಾವನೆಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮಾತ್ರ ಹಿಗ್ಗಾಮುಗ್ಗಾ ಗರಂ ಆಗಿದೆ. ತುರ್ತು ಪರಿಸ್ಥಿತಿ ಹಾಗೂ ಮಾರಣಾಂತಿಕ ಕಾಯಿಲೆ ಬಂದಾಗ ಸರ್ಕಾರಿ ಆಸ್ಪತ್ರೆಗೆ ಹೋದ್ರೆ ಜೀವ ಕಳೆದುಕೊಳ್ಳಬೇಕಾಗುತ್ತೆ, ನಮ್ಮ ಸಾವನ್ನು ನೀವು ಬಯಸ್ತಾ ಇದ್ದೀರಾ ಅಂತಾ ರಮೇಶ್ ಕುಮಾರ್ಗೆ ಲೇವಡಿ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಯನ್ನು ಮೊದ್ಲು ರಿಪೇರಿ ಮಾಡಿ, ಆಮೇಲ್ ಬೇಕಾದ್ರೇ ನೋಡೋಣ ಅಂತಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ ಕಿಡಿ ಕಾರಿದ್ದಾರೆ.
ಸರ್ಕಾರಿ ಕೆಲ್ಸ ಬೇಕು, ಆದ್ರೇ ಸರ್ಕಾರಿ ಆಸ್ಪತ್ರೆ ಮಾತ್ರ ಬೇಡ ಎನ್ನುವ ಮನಸ್ಥಿತಿ ನೌಕರರದ್ದು. ಅತ್ತ ಉತ್ಸಾಹದಲ್ಲಿ ಬದಲಾವಣೆ ತರೋದಕ್ಕೆ ಹೊರಟ ಸಚಿವ ರಮೇಶ್ ಕುಮಾರ್ ಇವ್ರ ಮಾತಿಗೆ ಮಣೆ ಹಾಕ್ತಾರಾ, ಅಥವಾ ಮುಲಾಜಿಲ್ಲದೇ ಇಂತದೊಂದು ಕಾಯ್ದೆ ಜಾರಿ ಮಾಡುತ್ತಾರಾ ಎನ್ನುವುದೇ ಸದ್ಯದ ಕುತೂಹಲ.
Comments are closed.