
ಬೆಂಗಳೂರು: ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಆರೋಪಿಗಳ ಸಿಸಿಟಿವಿ ದೃಶ್ಯದ ಫೋಟೋ ಬಿಡುಗಡೆ ಮಾಡಿದ್ದಾರೆ.
ಪ್ರಕರಣ ಸಂಬಂಧ ಮತ್ತಿಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಆದರೆ ವಿಚಾರಣೆ ವೇಳೆ ಈ ಇಬ್ಬರು ಯಾವ ಸುಳಿವನ್ನು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ದಾಖಲಾಗಿದ್ದ ವಿಡಿಯೋ ದೃಶ್ಯಾವಳಿಯಲ್ಲಿರುವ ಆರೋಪಿಗಳ ಭಾವಚಿತ್ರವನ್ನು ರಿಲೀಸ್ ಮಾಡಲಾಗಿದ್ದು ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೂ ರವಾನಿಸಲಾಗಿದೆ. ಜೊತೆಗೆ ಪಕ್ಕದ ರಾಜ್ಯಗಳಿ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಎಡು ವಿಶೇಷ ತಂಡಗಳನ್ನು ರಚಿಸಿದ್ದು, ನಗರದ ಹೊರವಲಯದಲ್ಲಿ ಕಂಡು ಬರುವ ಅನುಮಾನಾಸ್ಪದ ವ್ಯಕ್ತಿಗಳ ಫೋನ್ ಕರೆಗಳನ್ನು ಟ್ರ್ಯಾಪ್ ಮಾಡುವಂತೆ ಸೂಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹತ್ಯೆಗೂ ಮುನ್ನ ರುದ್ರೇಶ್ ಸುಮಾರು 20 ಕರೆಗಳನ್ನು ಸ್ವೀಕರಿಸಿದ್ದಾರೆ. ಸಿಸಿಟಿವಿ ವಿಡಿಯೋಗಳನ್ನು ವಶಕ್ಕೆ ಪಡೆದಿದ್ದು, ಪರಿಶೀಲನೆ ಮಾಡಿದ್ದು ಆರೋಪಿಗಳ ಚಲನವಲನ ಹಾಗೂ ಬೈಕ್ ನಂಬರ್ ಗಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಕೆಲವೊಂದು ದೃಶ್ಯಾವಳಿಗಳು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಹತ್ಯೆಗೂ ಮುನ್ನ ರುದ್ರೇಶ್ ನನ್ನು ಕರೆದಿದ್ದ ವ್ಯಕ್ತಿ ಆತನ ಸಾವಿನ ನಂತರ ನಾಪತ್ತೆಯಾಗಿದ್ದಾನೆ. ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಕೊಲೆಗೆ ಹಳೇ ದ್ವೇಷ, ರಾಜಕೀಯ ಉದ್ದೇಶ, ರಿಯಲ್ ಎಸ್ಟೇಟ್ ವ್ಯವಹಾರ, ಹಣಕಾಸು ವಿವಾದ ಕಾರಣವಾಗಿರಬಹುದೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Comments are closed.