ಮಂಗಳೂರು : ಬಯಲುಸೀಮೆಯ ಜಿಲ್ಲೆಗಳಿಗೆ ನೀರೊದಗಿಸುವ ಎತ್ತಿನಹೊಳೆ ತಿರುವು ಯೋಜನೆಗಾಗಿ ಅರಣ್ಯ ಇಲಾಖೆ ಭೂಮಿ ಬಳಸಿಕೊಳ್ಳಲು ಮತ್ತು ಮರಗಳನ್ನು ಕಡಿಯಲು ಇಲಾಖೆ ಅನುಮತಿ ನೀಡಿದ್ದು, ಇದರೊಂದಿಗೆ ಯೋಜನೆ ಜಾರಿಗೆ ಇದ್ದ ಪ್ರಮುಖ ತೊಡಕು ನಿವಾರಣೆಯಾದಂತಾಗಿದೆ. ಯೋಜನೆ ಜಾರಿಗೆ ಅರಣ್ಯ ಇಲಾಖೆ ಅನುಮತಿಯಿಲ್ಲದೆ ಮರಗಳನ್ನು ಕಡಿದ ಪ್ರಕರಣ ಹಸಿರು ನ್ಯಾಯಾಧಿಕರಣದ ಮೆಟ್ಟಿಲೇರಿತ್ತು. ಇಲಾಖೆ ಅನುಮತಿ ಇಲ್ಲದೆ ಮರಗಳನ್ನು ಕಡಿಯುವುದಿಲ್ಲ ಎಂದು ಸರ್ಕಾರ ನ್ಯಾಯಾಧಿಕರಣಕ್ಕೆ ತಿಳಿಸಿತ್ತು.
ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಸನ ಜಿಲ್ಲೆಯ ಕೆಲ ಪ್ರದೇಶಗಳಿಗೆ ನೀರೊದಗಿಸುವ ಎತ್ತಿನಹೊಳೆ ಯೋಜನೆಗಾಗಿ ಸಕಲೇಶಪುರ ಅರಣ್ಯ ವ್ಯಾಪ್ತಿಯಲ್ಲಿ 13.93 ಎಕರೆ ಪ್ರದೇಶದಲ್ಲಿ ಮರಗಳನ್ನು ಕಡಿಯಲು ಕೇಂದ್ರ ಅರಣ್ಯ ಸಚಿವಾಲಯ ಅನುಮತಿ ನೀಡಿದ್ದು, ಇದರ ಬೆನ್ನಲ್ಲೇ ಆ ವ್ಯಾಪ್ತಿಯಲ್ಲಿ 4995 ಮರ ಮತ್ತು 1332 ಬಿದಿರುಗಳನ್ನು ಕಡಿದು ಹಾಸನದ ನಾಟಾ ಸಂಗ್ರಹಾಲಯಕ್ಕೆ ಸಾಗಿಸಲು ರಾಜ್ಯ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಎತ್ತಿನಹೊಳೆ ಯೋಜನೆಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು ಸದ್ಯದಲ್ಲೇ ಹಸಿರು ನ್ಯಾಯಾಧಿಕರಣ ಅಂತಿಮ ಆದೇಶ ನೀಡಲಿದೆ. ನ್ಯಾಯಾಧಿಕರಣದ ಆದೇಶ ಪ್ರಕಟವಾಗುತ್ತಿದ್ದಂತೆ ಕಾಮಗಾರಿ ಮುಂದುವರಿಯುವ ಸಾಧ್ಯತೆಯಿದ್ದು, ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಪ್ರತಿಭಟನೆ ಮತ್ತು ಹೋರಾಟ ವ್ಯರ್ಥವಾಗುವ ಸಾಧ್ಯತೆಯೇ ಹೆಚ್ಚಿದೆ. ಅರಣ್ಯ ಸಂರಕ್ಷಣಾ ಕಾಯ್ದೆ-1980 ರನ್ವಯ 2015ರ ಮೇ 7ರಂದು ಅರಣ್ಯ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಯಂತೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ 13.93 ಎಕರೆ ಪ್ರದೇಶದಲ್ಲಿ ಮರಗಳನ್ನು ಕಡಿಯಲು ಹಲವು ಷರತ್ತುಗಳೊಂದಿಗೆ ಅನುಮತಿ ನೀಡಿದೆ. ಷರತ್ತುಗಳನ್ವಯ ಯೋಜನೆಗೆ ನಿಗದಿಪಡಿಸಿರುವ 13.93 ಹೆಕ್ಟೇರ್ ಪ್ರದೇಶದ 0.30 ಸೆಂಟಿಮೀಟರ್ಗಿಂತ ಹೆಚ್ಚು ಗಾತ್ರದ 4995 ಮರಗಳು,13.32 ಬಿದಿರುಗಳನ್ನು ಇಲಾಖೆಯ ಉಸ್ತುವಾರಿಯಲ್ಲಿ ಕಡಿದು ಹಾಸನದ ನಾಟಾ ಸಂಗ್ರಹಗಾರಕ್ಕೆ ಸಾಗಿಸಲು ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಅನುಮತಿ ನೀಡಿದೆ.
ಮರಗಳನ್ನು ಕಡಿಯುವ ಸಂದರ್ಭ ಗುರುತಿಸಿರುವ ಮರಗಳನ್ನು ಮಾತ್ರ ಕಡಿದು ತಯಾರಿಸಿದ ನಾಟಾ ಅಳತೆ ಪಟ್ಟಿಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಯಿಂದ ದೃಢೀಕರಿಸಿಕೊಂಡು ನಾಟಾ ಸಂಗ್ರಹಾಲಯಕ್ಕೆ ಸಾಗಿಸಬೇಕು. ಅನುಮತಿ ನೀಡದೇ ಇರುವ ಯಾವುದೇ ಮರಗಳಿಗೆ ಹಾನಿ ಮಾಡಬಾರದು. ಮರ ಕಡಿಯುವುದು ಸೇರಿದಂತೆ ಯಾವುದೇ ಅಕ್ರಮ ನಡೆಯದಂತೆ ನೋಡಿಕೊಳ್ಳಬೇಕು ಎಂಬ ಷರತ್ತು ವಿಧಿಸಲಾಗಿದೆ. ಒಂದು ವೇಳೆ ಅಕ್ರಮ ನಡೆದರೆ ಅದಕ್ಕೆ ಸಂಬಂಧಿಸಿದ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ಜವಾಬ್ಧಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Comments are closed.