
ನವದೆಹಲಿ: ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಸದಾ ಚಟುವಟಿಕೆಯಿಂದಿರುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರಿವರ ಕಾಲೆಳೆಯುತ್ತಿರುತ್ತಾರೆ. ಆದರೆ ಸೆಹ್ವಾಗ್ ಪತ್ನಿ ಆರತಿ ಇದೀಗ ವೀರು ಕಾಲೆಳೆದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಗೆಲುವಿಗೆ ಪ್ರಮುಖ ಕಾರಣರಾಗಿದ್ದ ರವಿಚಂದ್ರನ್ ಅಶ್ವಿನ್ ಮೂರು ಟೆಸ್ಟ್ ಗಳಲ್ಲಿ ಬರೋಬ್ಬರಿ 27 ವಿಕೆಟ್ ಗಳನ್ನು ಪಡೆದಿದ್ದರು. ಇನ್ನು ಇಂದೋರ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ 13 ವಿಕೆಟ್ ಪಡೆಯುವ ಮೂಲಕ ನಾಲ್ಕೇ ದಿನಗಳಲ್ಲಿ ಭಾರತಕ್ಕೆ ಜಯ ತಂದುಕೊಟ್ಟಿದ್ದರು. ಇದರೊಂದಿಗೆ ಅಶ್ವಿನ್ ತಮ್ಮ ವೃತ್ತಿಜೀವನದಲ್ಲಿ 7ನೇ ಬಾರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ತಮ್ಮ ಟ್ವೀಟರ್ ನಲ್ಲಿ ಅಶ್ವಿನ್ ರನ್ನು ಅಭಿನಂದಿಸಿದ ಸೆಹ್ವಾಗ್, ಮದುವೆಯಾದ ವ್ಯಕ್ತಿ ಮಾತ್ರ ಬೇಗನೆ ಮನೆಗೆ ಹೋಗುವ ಅವಸರವನ್ನು ಅರ್ಥೈಸಬಲ್ಲರು ಎಂದು ಟ್ವೀಟಿಸಿದ್ದರು. ಇದಕ್ಕೆ ಪ್ರತಿಯಾಗಿ ಅಶ್ವಿನ್ ವೀರು ಪಾ ಎಂದು ಮಾತ್ರ ಟ್ವೀಟಿಸಿದ್ದರು.
ಆದರೆ ಅಶ್ವಿನ್ ಪತ್ನಿ ಪ್ರೀತಿ ಹ್ಹಹ್ಹ, ನಾನೇನೂ ಬೇಗನೆ ಬರಲು ಹೇಳಿರಲಿಲ್ಲ ಎಂದು ಟ್ವೀಟಿಸಿದ್ದರು. ಇದರ ಬೆನ್ನಲ್ಲೇ ಸೆಹ್ವಾಗ್ ಪತ್ನಿ ಆರತಿ ನಾನೂ ಹಾಗೆ ಹೇಳುತ್ತಿರಲಿಲ್ಲ. ಇಬ್ಬರೂ ಯಾವಾಗಲೂ ಅವಸರದಲ್ಲಿರುತ್ತಾರೆ ಎಂದು ಟ್ವೀಟಿಸಿ ಕಾಲೆಳೆದಿದ್ದಾರೆ.
Comments are closed.