
ಮೈಸೂರು: ಭಾರತದ ಎಲ್ಲಾ ನದಿಗಳ ಬಗ್ಗೆ ಅಂತಾರಾಜ್ಯ ವಿವಾದಗಳು ಸೃಷ್ಟಿಯಾಗುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಷ್ಟ್ರೀಯ ಜಲನೀತಿ ರೂಪಿಸುವುದು ಅನಿವಾರ್ಯ ಇದೆ.ನ್ಯಾಯಾಲಯವು ಕೂಡ ಮಾನವೀಯ ದೃಷ್ಟಿಯಿಂದ ಜಲವಿವಾದ ಪರಿಶೀಲಿಸುವ ಅಗತ್ಯವಿದೆ ಎಂದು ನಾಡೋಜ ಚನ್ನವೀರ ಕಣವಿ ಹೇಳಿದರು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಪ್ರಸ್ತುತ ಕರ್ನಾಟಕದಲ್ಲಿ ಮಹಾದಾಯಿ ನದಿ ನೀರಿನ ಸಂಬಂಧಪಟ್ಟಂತೆ ಹೋರಾಟ ಒಂದು ವರ್ಷದಿಂದ ಜನಾಂದೋಲನವಾಗಿ ನಡೆಯುತ್ತಿದೆ. ಮಾತುಕತೆ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಲು ನ್ಯಾಯಾಲಯವು ನೀಡಿರುವ ಮಾತನ್ನು ರಾಜಕೀಯವಾಗಿ ಬಳಸಿಕೊಳ್ಳದೆ ಪ್ರಧಾನಿಯವರು ಮಧ್ಯಸ್ಥಿಕೆ ವಹಿಸಿ ಸೌಹಾರ್ದತೆಯಿಂದ ಬಗೆಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಕಾವೇರಿ ನೀರಿನ ಸಂದರ್ಭದಲ್ಲಿ ತಮಿಳುನಾಡು ಮಗ್ಗುಲ ಮುಳ್ಳಾಗಿ ಚುಚ್ಚುತ್ತಲೇ ಇದೆ. ಸದ್ಯಕ್ಕೆ ಸಂಕಷ್ಟಸೂತ್ರವೊಂದನ್ನು ಸಿದ್ಧಗೊಳಿಸುವುದೇ ತುರ್ತು ಪರಿಹಾರ ಎಂದು ಸಲಹೆ ನೀಡಿದರು.
ಕಲಬುರ್ಗಿ ಹತ್ಯೆ ಅಪರಾಧಿಗಳನ್ನು ಬಂಧಿಸಬೇಕು. ಕಲಬುರ್ಗಿ ಅವರ ಹತ್ಯೆ ನಡೆದು ವರುಷ ಕಳೆದರೂ ತನಿಖೆ ಪೂರ್ಣಗೊಂಡಿಲ್ಲದೆ ಇರುವುದು ನೋವಿನ,ಬೇಸರದ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಚೆನ್ನವೀರ ಕಣವಿ, ಮನುಷ್ಯ ಮತ್ತು ಸಮಾಜವನ್ನು ಮುಕ್ತಗೊಳಿಸಬೇಕಾದರೆ ಮೌಢ್ಯಾಚರಣೆ ನಿಷೇಧ ಕಾಯಿದೆ ತರಬೇಕು ಎಂಬ ಧೋರಣಾ ನಿರ್ಣಯವನ್ನು ತೀವ್ರ ಗೊಳಿಸಬೇಕು ಎಂದರು.
ಬಾಳಿಗೊಂದು ನಂಬಿಕೆ ಬೇಕು. ಈ ನಂಬಿಕೆಗಳು ವ್ಯಕ್ತಿಗತ ನೆಲೆಯಲ್ಲಿರುತ್ತವೆ. ಅಂಥವುಗಳನ್ನು ಯಾವ ವೈಚಾರಿಕರೂ ವಿರೋಧಿಸುವುದಿಲ್ಲ. ಆದರೆ ಜನಸಾಮಾನ್ಯರನ್ನು ಶೋಷಣೆಗೆ ಒಳಪಡಿಸುವ ಮೂಢನಂಬಿಕೆಗಳನ್ನು ನಾಗರಿಕ ಸಮಾಜ ವಿರೋಧಿಸಬೇಕೆಂದು ಕರೆ ನೀಡಿದರು.
ರಾಜ್ಯದಲ್ಲಿ ಬರಗಾಲದ ಛಾಯೆ ದಟ್ಟವಾಗಿ ಆವರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಈ ಸಲದ ದಸರಾ ಉತ್ಸವವನ್ನು ಸರಳವಾದ `ಸಾಂಪ್ರದಾಯಕ’ ರೀತಿಯಲ್ಲಿ ಆಚರಿಸಲು ನಿರ್ಧರಿಸಿರುವು ಸರ್ಕಾರದ ಕ್ರಮವನ್ನು ಶ್ಲಾಘಿಸಿದ ಕಣವಿಯವರು, ಹಸಿರು ದಸರಾಗೆ ಒತ್ತು ನೀಡಿರುವುದು ಸಮಂಜಸ ಎಂದರು.
ಕನ್ನಡ ನಾಡನ್ನು ಇಂದಿಗೂ ಪರಭಾಷೆ, ಪರಕೀಯ ಸಂಸ್ಕೃತಿಗಳು ಘಾಸಿಗೊಳಿಸುತ್ತಿವೆ. ಇಂತಹ ಸಂದಿಗ್ಥ ಪರಿಸ್ಥಿತಿಯಲ್ಲಿ ನಾಡ ಹಬ್ಬ ಎಲ್ಲರನ್ನೂ ಒಂದು ಸೂತ್ರದಡಿ ಬಂಧಿಸಿ ಹೋರಾಟದ ಮನೋಭಾವ ಬೆಳೆಸಲಿ ಎಂದರು.
ಎಲ್ಲಿಯವರೆಗೆ ಜಾತಿ ಮತಾಧಾರಿತ ತಾರತಮ್ಯವಿರುತ್ತದೆಯೋ ಅಲ್ಲಿ ಸ್ವಾತಂತ್ರ್ಯಕ್ಕೆ ಅಪಾಯವಿದೆ ಎಂಬ ಡಾ.ಅಂಬೇಡ್ಕರ್ ಅವರು ಎಚ್ಚರಿಕೆ ನೀಡಿದ್ದರು. ಅರ್ಥಹೀನವಾದ ಮೂಢ ಆಚರಣೆಗಳ ಸೀಗೆ ಮೆಳೆಯಲ್ಲಿ ಸಿಕ್ಕಿಕೊಂಡ ಮನುಷ್ಯನನ್ನು ಮತ್ತು ಸಮಾಜವನ್ನು ಮುಕ್ತಗೊಳಿಸಬೇಕಾದರೆ, ಮೌಢ್ಯಾಚರಣೆ ನಿಷೇಧ ಕಾಯ್ದೆ ತರಬೇಕೆಂಬ ಧೋರಣಾ ನಿಣರ್ಯಯವನ್ನು ಕರ್ನಾಟಕ ಸರ್ಕಾರ ಕಾರ್ಯಗತಗೊಳಿಸಬೇಕು ಎಂದರು.
Comments are closed.