ರಾಷ್ಟ್ರೀಯ

ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ಕ್ ಶೃಂಗಸಭೆಗೆ ಭಾರತ, ಆಫ್ಘಾನಿಸ್ತಾನ, ಬಾಂಗ್ಲಾ, ಭೂತಾನ್ ಬಹಿಷ್ಕಾರ!

Pinterest LinkedIn Tumblr

modi

ನವದೆಹಲಿ: ಉರಿ ಉಗ್ರ ದಾಳಿ ಹಿನ್ನೆಲೆ ಯಲ್ಲಿ ಪಾಕಿಸ್ತಾನ ಮತ್ತು ಭಾರತ ಮಧ್ಯೆ ಒಡಕು ಸೃಷ್ಟಿಯಾಗಿರುವ ಬೆನ್ನಲ್ಲೇ, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನವೆಂಬರ್‌ 9 ಮತ್ತು 10ರಂದು ನಡೆಯಲಿರುವ ಸಾರ್ಕ್‌ ಶೃಂಗ ಸಭೆಯನ್ನು ಭಾರತ ಬಹಿಷ್ಕರಿಸಿದೆ. ಇದರ ಬೆನ್ನಲ್ಲೇ ಇತರೆ ಸಾರ್ಕ್ ರಾಷ್ಟ್ರಗಳೂ ಕೂಡ ಸಭೆಯನ್ನು ಬಹಿಷ್ಕರಿಸಿದ್ದು, ಬಾಂಗ್ಲಾದೇಶ, ಆಫ್ಘಾನಿಸ್ತಾನ ಹಾಗೂ ಭೂತಾನ್ ಸರ್ಕಾರಗಳು ಸಾರ್ಕ್ ಸಭೆಯನ್ನು ಬಹಿಷ್ಕರಿಸಿ ಪತ್ರ ಬರೆದಿವೆ.

ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗಿ ಆಗಬೇಕಿತ್ತು. ಆದರೆ ಮೋದಿ ಅವರು ಸಾರ್ಕ್‌ ಸಮ್ಮೇಳನಕ್ಕೆ ಗೈರು ಹಾಜರಾಗಲಿದ್ದಾರೆ.

ಇದೇ ನವೆಂಬರ್ 9 ಮತ್ತು 10ರಂದು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದಿನಲ್ಲಿ ಸಾರ್ಕ್ ಶೃಂಗಸಭೆ ನಡೆಯಲಿದ್ದು, ಈಗಾಗಲೇ ಭಾರತ ಸರ್ಕಾರ ತಾನು ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಣೆ ಮಾಡಿದೆ. ಗಡಿಯಲ್ಲಿನ ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲು ತಾನು ಸಿದ್ಧವಿಲ್ಲ ಎಂದು ಹೇಳಿ ಭಾರತ ಸಭೆಯಿಂದ ಹಿಂದೆ ಸರಿದಿತ್ತು. ಇದೀಗ ಭಾರತದ ಬೆನ್ನಿಗೆ ನಿಂತಿರುವ ಬಾಂಗ್ಲಾದೇಶ, ಆಫ್ಘಾನಿಸ್ತಾನ ಹಾಗೂ ಭೂತಾನ್ ಸರ್ಕಾರಗಳು ತಾವೂ ಕೂಡ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪತ್ರಬರೆದಿವೆ.

ಇನ್ನು ತನ್ನ ನಿಲುವಿನ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬಾಂಗ್ಲಾದೇಶ ಸರ್ಕಾರ, ತನ್ನ ದೇಶದ ಆಂತರಿಕ ವಿಚಾರಗಳಲ್ಲಿ ತಲೆ ಹಾಕುತ್ತಿರುವ ದೇಶದಲ್ಲಿ ಸಾರ್ಕ್ ಶೃಂಗಸಭೆ ನಡೆಯುತ್ತಿರುವುದು ಸರಿಯಲ್ಲ. ಹೀಗಾಗಿ ತಾನು ಸಭೆಯನ್ನು ಬಹಿಷ್ಕರಿಸಿರುವುದಾಗಿ ಹೇಳಿದೆ. ಇಂತಹುದೇ ಕಾರಣ ಒಡ್ಡಿ ಆಫ್ಘಾನಿಸ್ತಾನ ಕೂಡ ಶೃಂಗಸಭೆಯಿಂದ ಹಿಂದೆ ಸರಿದಿದೆ.

ಸಾರ್ಕ್ ಶೃಂಗಸಭೆ ನಡಾವಳಿಗಳ ಪ್ರಕಾರ ಒಕ್ಕೂಟದ ಯಾವುದೇ ಒಂದು ರಾಷ್ಟ್ರ ಸಭೆಯನ್ನು ಬಹಿಷ್ಕರಿಸಿದರೆ ಶೃಂಗಸಭೆ ರದ್ದಾಗುತ್ತದೆ. ಹೀಗಾಗಿ ಪಾಕಿಸ್ತಾನದಲ್ಲಿ ಯೋಜನೆಯಾಗಿದ್ದ 2016ರ ಶೃಂಗಸಭೆ ರದ್ದಾಗುವುದು ಬಹುತೇಕ ಖಚಿತವಾಗಿದೆ.

Comments are closed.