ಕರಾವಳಿ

ಸುಳ್ಯ ಕಾಂಗ್ರೆಸ್ ಮುಖಂಡನ ಹತ್ಯೆ ತನಿಖೆಗೆ ವಿಶೇಷ ತಂಡ ರಚನೆ.

Pinterest LinkedIn Tumblr

congrs_leder_murder_2

ಮಂಗಳೂರು, ಸೆ.25: ಕರಾವಳಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸ್ಮಾಯಿಲ್ ನೇಲ್ಯಮಜಲು(52) ಕೊಲೆ ಪ್ರಕರಣದ ಬೆನ್ನುಬಿದ್ದಿರುವ ಪೊಲೀಸ್ ತಂಡ ಹಲವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದೆ. ಇಸ್ಮಾಯಿಲ್ ಹಾಗೂ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಆಸ್ತಿ ವಿವಾದವಿದ್ದು, ಇದೇ ಹಿನ್ನೆಲೆಯಲ್ಲಿ ಕೃತ್ಯ ನಡೆಸಿರಬೇಕೆಂದು ಶಂಕಿಸಿರುವ ಪೊಲೀಸರು ಈ ನಿಟ್ಟಿನಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಘಟನೆಯ ವಿವರ:
ಸೆ.23 ರಂದು ಸುಳ್ಯದ ಐವರ್ನಾಡು ಮಸೀದಿಗೆ ತೆರಳಿ ಪ್ರಾರ್ಥನೆ ಮುಗಿಸಿ ತನ್ನ ಇನೋವಾ ಕಾರಿನ ಸಮೀಪ ಬರುತ್ತಿದ್ದ ಇಸ್ಮಾಯಿಲ್‌ರನ್ನು ಹೊಂಚು ಹಾಕಿ ಕುಳಿತಿದ್ದ ಹಂತಕರ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಯದ್ವಾತದ್ವಾ ಕಡಿದು ಪರಾರಿಯಾಗಿತ್ತು. ಕುತ್ತಿಗೆ ಭಾಗಕ್ಕೆ ಬಿದ್ದ ಏಟಿನಿಂದ ಇಸ್ಮಾಯಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಎರಡು ಬೈಕ್‌ಗಳಲ್ಲಿ ಆಗಮಿಸಿದ್ದ ನಾಲ್ವರು ದುಷ್ಕರ್ಮಿಗಳ ತಂಡ ಕೃತ್ಯ ನಡೆಸಿರುವ ಮಾಹಿತಿ ಲಭಿಸಿದ್ದು, ಘಟನಾಸ್ಥಳಕ್ಕೆ ತಕ್ಷಣವೇ ಪೊಲೀಸ್, ಶ್ವಾನದಳ ಆಗಮಿಸಿ ಪರಿಶೀಲನೆಯನ್ನು ನಡೆಸಿದೆ. ಎಸ್.ಪಿ.ಭೂಷಣ್ ಜಿ.ಬೋರಸೆ ಸ್ಥಳಕ್ಕೆ ಭೇಟಿ ನೀಡಿದ್ದು, ಪುತ್ತೂರು ಎಸ್‌ಪಿ ರಿಷ್ಯಂತ್ ಸಿಂಗ್ ನೇತೃತ್ವದಲ್ಲಿ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ.

ಆಸ್ತಿ ವಿಚಾರದಲ್ಲಿ ತಮಗೆ ಪ್ರಾಣಭಯ ಇರುವುದಾಗಿ ಅರಿವಾಗುತ್ತಲೇ ಇಸ್ಮಾಯಿಲ್ ಅಂಗರಕ್ಷಕನನ್ನು ಹೊಂದಿದ್ದರು. ಪತಿ-ಪತ್ನಿ ಜೊತೆಯಾಗಿ ತೆರಳುತ್ತಿದ್ದ ಸಂದರ್ಭ ಅಂಗರಕ್ಷಕ ಅವರೊಂದಿಗೆ ಇರುತ್ತಿದ್ದ. ಆದರೆ ನಿನ್ನೆ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗಿಯಾಗಿದ್ದ ಇಸ್ಮಾಯಿಲ್ ಒಂಟಿಯಾಗಿಯೇ ತೆರಳಿದ್ದರು. ಅಲ್ಲಿಂದ ಹಿಂತಿರುಗುವಾಗ ಐವರ್ನಾಡು ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ವಾಪಸ್ ಆಗುತ್ತಿದ್ದಾಗ ಘಟನೆ ನಡೆದಿದೆ. ಚಿಕನ್ ಸೆಂಟರ್ ಪಕ್ಕದಲ್ಲಿ ಕಾರು ನಿಲ್ಲಿಸಿ ತೆರಳಿದ್ದ ಇಸ್ಮಾಯಿಲ್ ಬಳಿ ಪಿಸ್ತೂಲ್ ಇದ್ದರೂ ಹಂತಕರು ಏಕಾಏಕಿ ಅಡಗಿ ಕುಳಿತು ದಾಳಿ ಮಾಡಿ ಕೊಲೆಗೈದಿದ್ದಾರೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಹಿಂದೆ ಚೂರಿಯಿಂದ ಇರಿದಿದ್ದ ಆರೋಪಿಯೇ ಇತರರ ಜೊತೆ ಸೇರಿ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಶ್ವಾನದಳ ಸ್ಥಳಕ್ಕೆ ಆಗಮಿಸಿದ್ದರೂ ಮಳೆಯಿಂದಾಗಿ ಹೆಚ್ಚು ದೂರ ಹೋಗದೆ ವಾಪಸ್ ಆಗಿದೆ.

ಹಿಂದೆಯೂ ಕೊಲೆಯತ್ನ ನಡೆದಿತ್ತು: ಬೆಳ್ಳಾರೆ ಸಮೀಪದ ನೇಲ್ಯಮಜಲಿನಲ್ಲಿ ವಾಸವಿರುವ ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ರಾಜ್ಯ ಸರಕಾರದ ನಿಗಮ ಮಂಡಳಿ ಮಾಜಿ ಸದಸ್ಯೆ ವಹೀದಾ ಇಸ್ಮಾಯಿಲ್ ಅವರ ಪತಿಯಾಗಿರುವ ಇಸ್ಮಾಯಿಲ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡವಾಗಿದ್ದರು. ಇವರಿಗೆ ಸೇರಿದ ಜಾಗದಲ್ಲಿ ದೈವಸ್ಥಾನವೊಂದಿದ್ದು, ಪ್ರತೀವರ್ಷ ಇವರೇ ಮುಂದೆ ನಿಂತು ದೈವದ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು ಎನ್ನಲಾಗಿದೆ. ಆದರೆ ಬೆಳ್ಳಾರೆಯಲ್ಲಿನ ಜಾಗದ ವಿಚಾರಕ್ಕೆ ಸಂಬಂಧಿಸಿ ಕೆಲವರ್ಷಗಳಿಂದ ವ್ಯಕ್ತಿಯೊಬ್ಬರ ಜೊತೆ ವಿವಾದವಿತ್ತು.

ಇದೇ ಕಾರಣಕ್ಕೆ ಎರಡು ವರ್ಷಗಳ ಹಿಂದೆ ಸುಳ್ಯದ ಗಾಂಧಿನಗರದಲ್ಲಿ ವಹೀದಾ ಮತ್ತು ಇಸ್ಮಾಯಿಲ್ ಇಬ್ಬರ ಮೇಲೂ ಚೂರಿಯಿಂದ ಇರಿದು ಕೊಲೆಯತ್ನ ನಡೆದಿತ್ತು. ಈ ಪ್ರಕರಣದ ಆರೋಪಿ ನ್ಯಾಯಾಲಯದಲ್ಲಿ ಜಾಮೀನು ಪಡೆದು ಹೊರಬಂದಿದ್ದು ಆತ ಸುಳ್ಯ ಪೇಟೆಯಲ್ಲಿ ರಾಜಾರೋಷವಾಗಿ ಇಸ್ಮಾಯಿಲ್‌ರನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಘಟನೆಯ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದ್ದು ಆತನ ಚಲನವಲನಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.

Comments are closed.