
ಮಂಗಳೂರು: ಉಪನ್ಯಾಸಕರೋರ್ವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವಾಟ್ಸಾಪಿನಲ್ಲಿ ಸುಳ್ಳು ಸಂದೇಶ ಸಂದೇಶ ರವಾನೆ ಮಾಡಿದ ವಿದ್ಯಾರ್ಥಿಯನ್ನು ಪುತ್ತೂರು ಪೊಲೀಸರು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಬಂಟ್ವಾಳ ನರಿಕೊಂಬು ಪುತ್ತೊಟ್ಟೆಬೈಲು ನಿವಾಸಿ ಮಂಗಳೂರು ಸೈಂಟ್ ಅಲೋಷಿಯಸ್ ಕಾಲೇಜಿನ ದ್ವಿತೀಯ ಬಿ.ಕಾಂ.ನ ವಿದ್ಯಾರ್ಥಿ ವಿನುತ್ ಎನ್ ಶೆಟ್ಟಿ (19) ಎಂದು ಹೆಸರಿಸಲಾಗಿದೆ.
ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕ ಪರಮೇಶ್ವರ ಶರ್ಮಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಆತ ವಾಟ್ಸಾಪ್ ಸಂದೇಶ ಕಳಿಸಿದ್ದ. ಇದು ಹಲವಾರು ವಾಟ್ಸಾಪ್ ಗ್ರೂಪ್ಗಳಿಗೆ ರವಾನೆಯಾಗಿದ್ದು ಹಲವಾರು ಮಂದಿ ಪರಮೇಶ್ವರರವರ ಮನೆಗೂ ತೆರಳಿ ಈ ಬಗ್ಗೆ ವಿಚಾರಿಸಿದ್ದಾರೆ ಎನ್ನಲಾಗಿದೆ.
ವಿನುತ್ ಎನ್ ಶೆಟ್ಟಿ ಕಳೆದ 2014-15ನೇ ಸಾಲಿನಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಈ ಸಂದೇಶವನ್ನು ವಾಟ್ಸಪ್ ಮೂಲಕ ಆ. 22ರಂದು ಕಾಲೇಜಿನ ವಿದ್ಯಾರ್ಥಿಗಳ ಗ್ರೂಪಿಗೆ ರವಾನಿಸಿದ್ದಾನೆ. ಇದು ಮತ್ತಷ್ಟು ಗ್ರೂಪ್ಗಳಿಗೆ ಕಾಡ್ಗಿಚ್ಚಿನಂತೆ ರವಾನೆಯಾಗಿದೆ.
ಇದರ ಪರಿಣಾಮವಾಗಿ ಉಪನ್ಯಾಸಕ ಪರಮೇಶ್ವರ ಶರ್ಮಾ ಮೃತಪಟ್ಟಿದ್ದಾರೆಂದು ಅವರ ಸಂಬಂಧಿಕರು ಮತ್ತು ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಉಪನ್ಯಾಸಕ ಪರಮೇಶ್ವರ ಶರ್ಮಾ ಅವರ ಮನೆಗೆ ತೆರಳಿದ್ದರು. ಆ ವೇಳೆ ಅಲ್ಲಿದ್ದ ಪರಮೇಶ್ವರ ಶರ್ಮಾ ಅವರನ್ನು ನೋಡಿ ಮಾತನಾಡಿಸಿ, ವಾಟ್ಸಪ್ ಮೂಲಕ ಸುಳ್ಳು ಸಂದೇಶ ರವಾನೆ ಮಾಡಿರುವ ಬಗ್ಗೆ ತಿಳಿಸಿದ್ದಾರೆ.
ಕೂಡಲೇ ಪರಮೇಶ್ವರ ಶರ್ಮಾ ಅವರು ಈ ಕುರಿತು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರ ನೇತೃತ್ವದ ಪೊಲೀಸರು ಮಾಹಿತಿ ತಂತ್ರಜ್ಞಾನದ ಮೂಲಕ ವಾಟ್ಸಪ್ನಲ್ಲಿ ಬಂದ ಸಂದೇಶವನ್ನು ಆಧರಿಸಿ ತನಿಖೆ ನಡೆಸಿ ಸುಳ್ಳು ಸಂದೇಶ ಸೃಷ್ಟಿಸಿದ ವಿದ್ಯಾರ್ಥಿ ವಿನುತ್ ಶೆಟ್ಟಿ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಶಕ್ಕೆ ಪಡೆದು ವಿದ್ಯಾರ್ಥಿಯನ್ನು ವಿಚಾರಿಸಿದಾಗ ಆತ ವಿಚಿತ್ರ ವಿಚಾರವೊಂದನ್ನು ಪೊಲೀಸರಿಗೆ ಹೇಳಿದ್ದಾನೆ. ಆರೋಪಿ ವಿನುತ್ ಎನ್. ಶೆಟ್ಟಿ 2014-15ನೇ ಸಾಲಿನಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಈ ವೇಳೆ ಆತ ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿದ್ದ. ಆ ಸಂದರ್ಭದಲ್ಲಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಉಪನ್ಯಾಸಕ ಪರಮೇಶ್ವರ ಶರ್ಮಾ ಅವರ ಬಳಿಗೆ ಮಾತನಾಡಲು ತೆರಳಿದ್ದ ವೇಳೆ ಅವರು ತನ್ನನ್ನು ನಿರ್ಲಕ್ಷಿಸಿ ಅಪಮಾನಿಸಿದ್ದಾರೆ ಎಂಬ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ವಿನುತ್ ಈ ದ್ವೇಷ ಸಾಧನೆಗಾಗಿಯೇ ಕೃತ್ಯ ನಡೆಸಿರುವುದಾಗಿ ತಿಳಿಸಿದ್ದಾನೆ.
ಪೊಲೀಸರು ಆರೋಪಿ ವಿದ್ಯಾರ್ಥಿ ವಿನುತ್ ಎನ್.ಶೆಟ್ಟಿ ವಿರುದ್ಧ ವಿದ್ಯುನ್ಮಾನ ಯಂತ್ರದ ಮೂಲಕ ಭಯಹುಟ್ಟಿಸುವ ಕೃತ್ಯ ನಡೆಸಿದ ಮತ್ತು ಬೆದರಿಕೆ ಸಂದೇಶ ಕಳಿಸಿದ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
Comments are closed.