ಅಂತರಾಷ್ಟ್ರೀಯ

ಸ್ಯಾಮ್ಸಂಗ್‌ ಗ್ಯಾಲಕ್ಸಿ ನೋಟ್‌ 7 ಬ್ಯಾಟರಿ ಏಕೆ ಸ್ಫೋಟಿಸುತ್ತದೆ?

Pinterest LinkedIn Tumblr

sam

ಪದೇ ಪದೇ ಫೋನ್‌ ಬ್ಯಾಟರಿ ಸ್ಫೋಟದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಪ್ರಸಿದ್ಧ ಕಂಪನಿ ಸ್ಯಾಮ್ಸಂಗ್‌ ತಯಾರಿಕೆಯ ಗ್ಯಾಲಕ್ಸಿ ನೋಟ್‌ 7 ಸ್ಮಾರ್ಟ್‌ಫೋನ್‌ಗಳನ್ನು ವಿಮಾನಗಳಲ್ಲಿ ಕೊಂಡೊಯ್ಯುವುದನ್ನು ವಿಮಾನಯಾನ ಕಂಪನಿಗಳು ನಿಷೇಧಿಸಿವೆ. ಜೊತೆಗೆ ಈ ಫೋನ್‌ ಅತ್ಯಂತ ಅಪಾಯಕಾರಿ ಎಂಬ ಹಣೆಪಟ್ಟಿ ಸಂಪಾದಿಸಿದೆ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿಗಳೇಕೆ ಸ್ಫೋಟಿಸುತ್ತವೆ? ಅದಕ್ಕೆ ಕಾರಣಗಳೇನು? ಎಂಬುದರ ಕುರಿತ ವಿವರ ಇಲ್ಲಿದೆ.

ಸ್ಯಾಮ್ಸಂಗ್‌ಗೆ ಕೆಟ್ಟ ಹೆಸರು!
ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಸ್ಯಾಮ್ಸಂಗ್‌ ಮುಂಚೂಣಿಯಲ್ಲಿರುವ ಹೆಸರು. ಜಗತ್ತಿನ ಅತಿ ದೊಡ್ಡ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿಯೂ ಹೌದು. ಸೆ.2ರಂದು ಸ್ಯಾಮ್ಸಂಗ್‌ ವಿನೂತನ ಗ್ಯಾಲಕ್ಸಿ ನೋಟ್‌ 7 ಅನ್ನು ಬಿಡುಗಡೆ ಮಾಡಿದೆ. ಅದಾದ ಬಳಿಕ ಸುಮಾರು 35 ಫೋನ್‌ಗಳಿಗೆ ಬೆಂಕಿ ಹತ್ತಿಕೊಂಡ ಅಥವಾ ಸ್ಫೋಟಿಸಿದ ಸುದ್ದಿಗಳು ವರದಿಯಾಗಿವೆ. ಇದುವರೆಗೆ ಈ ಮಾದರಿಯ 25 ಲಕ್ಷ ಫೋನ್‌ಗಳನ್ನು 10 ದೇಶಗಳಲ್ಲಿ ಸ್ಯಾಮ್ಸಂಗ್‌ ಮಾರಾಟ ಮಾಡಿದೆ. ಸದ್ಯ ಫೋನ್‌ ಸ್ಫೋಟಗೊಳ್ಳುತ್ತಿರುವುದು ಸ್ಯಾಮ್ಸಂಗ್‌ಗೆ ಕೆಟ್ಟ ಹೆಸರು ತಂದಿದೆ. ಇದಕ್ಕಾಗಿ ಫೋನ್‌ಗಳನ್ನು ಕೂಡಲೇ ವಾಪಸ್‌ ಪಡೆವ ಪ್ರಕ್ರಿಯೆನ್ನು ಅದು ಆರಂಭಿಸಿದೆ.

ಸಮಸ್ಯೆ ಏನು?
ಸ್ಯಾಮ್ಸಂಗ್‌ ಗ್ಯಾಲಕ್ಸಿ ನೋಟ್‌ 7 ಸ್ಫೋಟಕ್ಕೆ ಕಾರಣವಾಗಿರುವುದು ಅದರ ಬ್ಯಾಟರಿ. ಬ್ಯಾಟರಿಯಲ್ಲಿನ ಸಣ್ಣ ದೋಷದಿಂದಾಗಿ ಗಂಭೀರ ಪರಿಣಾಮ ಎದುರಿಸುವಂತಾಗಿದೆ. ಸ್ಯಾಮ್ಸಂಗ್‌ ತನ್ನ ಫೋನ್‌ಗೆ ಚೀನಾದ ಬ್ಯಾಟರಿ ಪೂರೈಕೆದಾರರಿಂದ ಬ್ಯಾಟರಿ ಪಡೆಯುತ್ತಿದೆ. ನಿರ್ದಿಷ್ಟ ಪೂರೈಕೆದಾರರು ಪೂರೈಸಿದ ಬ್ಯಾಟರಿಯಲ್ಲಿ ಈ ಸಮಸ್ಯೆ ಕಂಡುಬಂದಿದೆ. ಲೀಥಿಯಂ ಅಯಾನ್‌ ಬ್ಯಾಟರಿಗಳು ಇವಾಗಿದ್ದು, ಬೇರೆ ಪೂರೈಕೆದಾರರು ಪೂರೈಸಿದ ಬ್ಯಾಟರಿಗಳಲ್ಲಿ ಈ ಸಮಸ್ಯೆ ಗೊತ್ತಾಗಿಲ್ಲ.

ಬ್ಯಾಟರಿ ತಲೆನೋವು!
ಗ್ಯಾಡೆjಟ್‌ಗಳಲ್ಲಿ ಬ್ಯಾಟರಿ ಸ್ಫೋಟದ ಸಮಸ್ಯೆ ಇದೇ ಮೊದಲೇನಲ್ಲ. ಭಾರತದಲ್ಲಿ ಹಲವು ಬಾರಿ ಮಾಧ್ಯಮಗಳಲ್ಲಿ ಈ ವಿಚಾರ ಪ್ರಕಟಗೊಂಡಿವೆ. ಬ್ಯಾಟರಿ ಸಮಸ್ಯೆಯಿಂದಾಗಿ ದೊಡ್ಡ ಕಂಪನಿಗಳ ಉತ್ಪನ್ನಗಳಿಗೇ ತೀವ್ರ ಹಿನ್ನಡೆಯಾಗಿದೆ. 2006ರಲ್ಲಿ ಪ್ರಸಿದ್ಧ ಡೆಲ್‌ಕಂಪನಿ ತನ್ನ ನೋಟ್‌ಬುಕ್‌ ಲ್ಯಾಪ್‌ ಟಾಪ್‌ಗ್ಳಲ್ಲಿ ಬ್ಯಾಟರಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ 40 ಲಕ್ಷ ಲ್ಯಾಪ್‌ ಟಾಪ್‌ಗ್ಳನ್ನು ಹಿಂಪಡೆದಿತ್ತು. 2013ರಲ್ಲಿ ಬೋಯಿಂಗ್‌ 787 ಮಾದರಿ ವಿಮಾನಗಳಲ್ಲಿ ಬ್ಯಾಟರಿ ಸಮಸ್ಯೆ ಕಾಣಿಸಿಕೊಂಡಿತ್ತು. ಇದಕ್ಕಾಗಿ ಹಲವು ಕಂಪನಿಗಳು ಈ ಮಾದರಿ ವಿಮಾನ ಹಾರಾಟವನ್ನೇ ರದ್ದುಗೊಳಿಸಿದ್ದವು.

ಡೇಂಜರ್‌ ಡೇಂಜರ್‌
ಹಲವು ತಾಂತ್ರಿಕ ಸೌಲಭ್ಯ, ಹಗುರ ಎಂಬ ಕಾರಣಕ್ಕೆ ಇಂದು ಲೀಥಿಯಮ್‌ ಅಯಾನ್‌ ಬ್ಯಾಟರಿಗಳನ್ನು ಬಳಸಲಾಗುತ್ತದೆ. ಹೆಚ್ಚಿನ ಸುರಕ್ಷತಾ ಪರೀಕ್ಷೆಯೊಂದಿಗೆ ಇದನ್ನು ಸರಿಯಾಗಿ ತಯಾರಿಸಿದ್ದರೆ, ಸರಿ. ಇಲ್ಲವೆಂದರೆ, ಬಗಲಲ್ಲೇ ಅಪಾಯವನ್ನು ಕಟ್ಟಿಕೊಂಡಂತೆ. ಬ್ಯಾಟರಿಗೆ ತೀವ್ರ ಬಿಸಿಯಾದರೆ, ಫೋನ್‌ ಶೇ.100ರಷ್ಟು ಚಾರ್ಜ್‌ ಆದ ಬಳಿಕವೂ ಚಾರ್ಜ್‌ನಲ್ಲೇ ಇದ್ದರೆ ಸಮಸ್ಯೆಗೆ ದಾರಿ. ಶೇ.100ರಷ್ಟು ಚಾರ್ಜ್‌ ಆದ ಬಳಿಕ ಸಾಮಾನ್ಯವಾಗಿ ಬ್ಯಾಟರಿಗೆ ವಿದ್ಯುತ್‌ ವೋಲ್ಟೆàಜ್‌ ಕಡಿಮೆ ಹರಿಸುವಂತಹ ವ್ಯವಸ್ಥೆ ಇರುತ್ತದೆ. ಆದರೆ ಇದು ಕೈಕೊಟ್ಟರೆ, ಬ್ಯಾಟರಿ ಮೇಲೆ ನೇರ ಪರಿಣಾಮ ಬೀರುತ್ತದೆ.

ಬ್ಯಾಟರಿಗಳೇಕೆ ಸ್ಫೋಟಗೊಳ್ಳುತ್ತವೆ?
ಲೀಥಿಯಮ್‌ ಅಯಾನ್‌ ಬ್ಯಾಟರಿಗಳನ್ನೇ ಸ್ಮಾರ್ಟ್‌ಫೋನ್‌ ಗಳಲ್ಲಿ ಬಳಸಲಾಗುತ್ತದೆ. ಲೀಥಿಯಂ ಎನ್ನುವುದು ಅತ್ಯಂತ ಹಗುರ ಲೋಹ ಮತ್ತು ಅತ್ಯಂತ ದಹನಕಾರಿ ವಸ್ತು. ಇದು ಆಮ್ಲಜನಕಕ್ಕೆ ಪರಿಣಾಮ ಬೀರುತ್ತದೆ. ಇದೇ ಕಾರಣ ಇದನ್ನು ಅತ್ಯಂತ ಬಿಗುವಾದ (ಗಾಳಿಯೂ ಸೋಕದಂತೆ) ಪ್ಯಾಕ್‌ ಮಾಡಲಾಗುತ್ತದೆ. ಕಾರಣ ಇದು ಅತ್ಯಂತ ಹಗುರ ಮತ್ತು ಬೇಗನೆ ಚಾರ್ಜ್‌ ಆಗಬಲ್ಲದು. ಲೀಥಿಯಂ ಅಯಾನ್‌ ಬ್ಯಾಟರಿಗಳ ಒಳಗೆ ಮಧ್ಯೆ, ಧನ-ಋಣಗಳನ್ನು ತೆಳುವಾದ ಪ್ಲಾಸ್ಟಿಕ್‌ ಬೇರ್ಪಡಿಸುತ್ತದೆ. ಒಂದು ವೇಳೆ ಶಾರ್ಟ್‌ ಸರ್ಕ್ನೂಟ್‌ ಆದರೆ ಇದಕ್ಕೆ ಹಾನಿಯಾಗುತ್ತದೆ ಜೊತೆಗೆ ಹೆಚ್ಚಿದ ಶಾಖ ಲೀಥಿಯಮ್‌ ಅನ್ನು ಸ್ಫೋಟಿಸುವಂತೆ ಮಾಡುತ್ತದೆ.

ಫಾಸ್ಟ್‌ ಚಾರ್ಜಿಂಗ್‌ ಕಿರಿಕ್‌!
ಈಗಿನ ಸ್ಮಾರ್ಟ್‌ಫೋನ್‌ಗಳೆಲ್ಲ ಅತಿ ವೇಗವಾಗಿ ಚಾರ್ಜ್‌ ಆಗಬಲ್ಲದು. ಈ ತಂತ್ರಜ್ಞಾದ ಮೂಲಕ ಶೇ.0 ಯಿಂದ ಶೇ.60ರಷ್ಟು ಚಾರ್ಜ್‌ 30 ನಿಮಿಷಗಳಲ್ಲಾಗುತ್ತದೆ. ವೇಗದ ಚಾರ್ಜ್‌ಗಾಗಿ ವೋಲ್ಟೋಜ್‌ ನಿಯಂತ್ರಕ ಚಿಪ್‌ಗ್ಳನ್ನು ಅಳವಡಿಸಲಾಗುತ್ತದೆ. ಇದು ಚಾರ್ಜರ್‌ನೊಂದಿಗೆ ಸಂವಹನ ನಡೆಸಿ, ಆದಷ್ಟು ಬೇಗ ಒಂದಿಷ್ಟು ಪ್ರಮಾಣದಲ್ಲಿ ಚಾರ್ಜ್‌ ಆಗುವಂತೆ ಮಾಡುತ್ತದೆ. ಹೆಚ್ಚು ವಿದ್ಯುತ್‌ ಪ್ರವಹಿಸಿದಾಗ ಬ್ಯಾಟರಿಗಳು ಬೇಗನೇ ಬಿಸಿಯಾಗುತ್ತವೆ ಇದಕ್ಕಾಗಿ ಕೆಲವೊಂದು ತಾಂತ್ರಿಕ ಉಪಾಯಗಳನ್ನು ಕೈಗೊಂಡಿದ್ದರೂ, ಬ್ಯಾಟರಿ ದೋಷದಿಂದ ಎಡವಟ್ಟಾಗುವ ಸಾಧ್ಯತೆ ಇರುತ್ತದೆ.

-ಉದಯವಾಣಿ

Comments are closed.