ಕರ್ನಾಟಕ

ಕಾವೇರಿ ವಿಚಾರ; ಪ್ರಧಾನಿ ಸಂದರ್ಶನಕ್ಕೆ ಸಿಕ್ಕದ ಅನುಮತಿ

Pinterest LinkedIn Tumblr

modi-siddaramaiah

ಬೆಂಗಳೂರು: ಕಾವೇರಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಗೆ ಮನವಿ ಮಾಡ‌ಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಭೇಟಿಗೆ ಸಮಯ ನಿಗದಿ ಮಾಡುವಂತೆ ಕೋರಿ ಎರಡು ದಿನ ಕಳೆದರು ಇದುವರೆಗೂ ಪ್ರಧಾನಿ ಭೇಟಿಗೆ ಅವಕಾಶ ಸಿಕ್ಕಿಲ್ಲ.

ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಈ ತಿಂಗಳ 20ರ ವರೆಗೂ ಪ್ರತಿದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪ್ರೀಂ ಕೋರ್ಟಿನ ತೀರ್ಪನ್ನು ಪಾಲಿಸುತ್ತೇನೆ. ಆದರೆ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ಕಾವೇರಿ ಕಣಿವೆಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಖುದ್ದು ಭೇಟಿ ಮಾಡಿ ಮನವಿ ಮಾಡುವುದಾಗಿ ಹೇಳಿದ್ದರು.

ಪ್ರಧಾನಿಗಳ ಭೇಟಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಸಮಯ ನಿಗದಿ ಮಾಡುತ್ತಾರೆ ಎಂದು 2 ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ ಇದುವರೆಗೂ ಪ್ರಧಾನಿ ಭೇಟಿ ಇನ್ನೂ ನಿಗದಿಯಾಗಿಲ್ಲ.

ಮುಖ್ಯಮಂತ್ರಿಗಳ ಪ್ರಧಾನಿ ಭೇಟಿಗೆ ಸಮಯ ನಿಗದಿ ಮಾಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಪ್ರಧಾನಿ ಕಾರ್ಯಾಲಯವನ್ನು 4-5 ಬಾರಿ ಸಂಪರ್ಕ ಮಾಡಿದ್ದರೂ ಪ್ರಧಾನಿಗಳ ಭೇಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇನ್ನೂ ಅವಕಾಶ ಸಿಕ್ಕಿಲ್ಲ.

ಬಿಜೆಪಿ ಆಕ್ಷೇಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಗೆ ಒತ್ತಾಯಿಸಿರುವುದು ಸರಿಯಲ್ಲ. ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಲು ಸಾಧ್ಯವೆ ಎಂದು ಬಿಜೆಪಿ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದೆ. ಹಾಗಾಗಿ ಪ್ರಧಾನಿ ಭೇಟಿಗೆ ಬಿಜೆಪಿ ಮುಖಂಡರು ಹೆಚ್ಚಿನ ಆಸಕ್ತಿ ತೋರಿಲ್ಲ ಎನ್ನಲಾಗಿದೆ.

Comments are closed.