ರಾಷ್ಟ್ರೀಯ

ಅಂದು ಉಗ್ರ, ಇಂದು ಶಾಂತಿ ಬೋಧಕ

Pinterest LinkedIn Tumblr

sagma

ಗುವಾಹಟಿ (ಅಸ್ಸಾಂ): 90ರ ದಶಕದಲ್ಲಿ ಶಸ್ತ್ರಾಸ್ತ್ರ ಹಿಡಿದು ಗಾರೋ ಬುಡಕಟ್ಟು ಜನರ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಹೆಲ್ಡಿಸನ್ ಎಂ. ಸಂಗ್ಮಾ ಈಗ ಧರ್ಮಗುರು. ಹೌದು, ಅಂದು ಶಸ್ತ್ರಸಜ್ಜಿತ ಹೋರಾಟ ನಡೆಸಿದ್ದ ಉಗ್ರನೊಬ್ಬ ಇಂದು ಚರ್ಚ್‌ನಲ್ಲಿ ಶಾಂತಿ ಉಪದೇಶ ನೀಡುತ್ತಿರುವುದು ಮೇಘಾಲಯ ಇತಿಹಾಸದಲ್ಲೇ ಇದು ಮೊದಲು.

ಸೋಮವಾರ ಇಲ್ಲಿನ ರಾಂಗ್‌ಜೆಂಗ್ ಬ್ಯಾಪ್ಟಿಸ್ಟ್ ಚರ್ಚ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಲ್ಡಿಸನ್ ಅವರಿಗೆ ‘ರೆವರೆಂಡ್’ ದೀಕ್ಷೆಯನ್ನು ನೀಡಲಾಯಿತು. ಗಾರೋ ಬುಡಕಟ್ಟಿನವರು ‘ಅಚಿಕ್ ಮಟ್ರಿಕ್ ಲಿಬರೇಷನ್ ಆರ್ಮಿ (ಎಎಂಎಲ್ಎ) ಎಂಬ ಸಂಘಟನೆ ಕಟ್ಟಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದರು. ಹೆಲ್ಡಿಸನ್ ಅವರು ಈ ಸಂಘಟನೆಯನ್ನು ಸೇರಿದ್ದರು. ಆದರೆ 1994ರಲ್ಲಿ ವಿಲ್ಲಿಯಾಮ್‌ನಗರ ಜೈಲಿನಲ್ಲಿದ್ದಾಗ ಹಿಂಸೆಯ ದಾರಿ ಕೈಬಿಡುವ ನಿರ್ಧಾರ ಮಾಡಿದರು. ತಮ್ಮ ಸಂಘಟನೆಯ ಎಲ್ಲರೂ ಶರಣಾಗುವಂತೆ ಮಾಡಿದರು. ಹೀಗಾಗಿ 1995ರಲ್ಲಿ ಎಲ್ಲರಿಗೂ ಕ್ಷಮಾದಾನ ನೀಡಲಾಗಿತ್ತು.

ಶಿಲ್ಲಾಂಗ್‌ನ ಪುನರ್ವಸತಿ ಕೇಂದ್ರದಲ್ಲಿದ್ದಾಗ ರೆವರೆಂಡ್ ತೆಸಂಗ್ ಮೊಮಿನ್ ಅವರು ನೀಡಿದ ಉಪದೇಶವು ಇವರ ಬದುಕನ್ನೇ ಬದಲಿಸಿತು. ಅರ್ಧಕ್ಕೆ ನಿಂತಿದ್ದ ವಿದ್ಯಾಭ್ಯಾಸ ಮುಂದುವರಿಸಿದರು.

2000ರಲ್ಲಿ ಪಾದ್ರಿ ಆಗಿ ನೇಮಕಗೊಂಡ ಹೆಲ್ಡಿಸನ್ ಅವರು 15 ವರ್ಷಗಳಿಂದ ಶಾಂತಿ ಮಂತ್ರ ಪಠಿಸುತ್ತಿದ್ದಾರೆ. ಸರ್ಕಾರದ ಜತೆ ಸೇರಿ ಯುವಕರನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ.

Comments are closed.