
ನವದೆಹಲಿ: ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಕೆಲವು ಸುದ್ದಿ ವಾಹಿನಿಗಳು ಪ್ರಚೋದನಾತ್ಮಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿವೆ ಎಂದು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
ಹಿಂಸೆ ಹಾಗೂ ದೊಂಬಿಯ ಸುದ್ದಿಗಳನ್ನು ವರದಿ ಮಾಡುವಾಗ ಮಾಧ್ಯಮಗಳು ಸಂಯಮ ಪ್ರದರ್ಶಿಸಬೇಕು. ಹಿಂಸೆಗೆ ಪ್ರಚೋದನೆ ನೀಡುವ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಬಾರದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸಲಹೆ ನೀಡಿದೆ.
‘ಹಿಂಸಾಚಾರದ ಘಟನೆಗಳ ನೇರ ಪ್ರಸಾರ ಅಥವಾ ಮರು ಪ್ರಸಾರವನ್ನು ಮಾಡದಿರುವುದು ಒಳಿತು. ವರದಿಯಲ್ಲಿ ಕಾವೇರಿ ನದಿ ಹಾಗೂ ಭದ್ರತಾ ಸಿಬ್ಬಂದಿಯ ದೃಶ್ಯಗಳನ್ನು ಬಳಸಿಕೊಳ್ಳಬಹುದು’ ಎಂದು ಸಚಿವಾಲಯ ಸಲಹೆ ನೀಡಿದೆ. ವರದಿಯಲ್ಲಿ ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕು ಎಂದು ಸೂಚಿಸಿದೆ. ಕೇಬಲ್‌ಟಿ.ವಿ. ನೆಟ್‌ವರ್ಕ್ಸ್(ನಿಯಂತ್ರಣ) ಕಾಯ್ದೆ – 1995ರ ನಿಯಮಗಳನ್ನು ಟಿ.ವಿ. ವಾಹಿನಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಾಕೀತು ಮಾಡಲಾಗಿದೆ.
‘ಘಟನೆಗಳ ಸತ್ಯಾಸತ್ಯತೆ ಪರಿಶೀಲಿಸಿ, ಸಾರ್ವಜನಿಕ ಹಿತವನ್ನು ಪರಿಗಣನೆಯಲ್ಲಿ ಇಟ್ಟುಕೊಂಡು ಕಾರ್ಯಕ್ರಮ ಪ್ರಸಾರ ಮಾಡಿ’ ಎಂದು ಸಚಿವಾಲಯ ಟಿ.ವಿ. ವಾಹಿನಿಗಳಿಗೆ ಸೂಚಿಸಿದೆ. ‘ಹಿಂಸಾತ್ಮಕ ಘಟನೆಗಳು, ದೊಂಬಿಗಳ ದೃಶ್ಯಗಳನ್ನು ಕೆಲವು ವಾಹಿನಿಗಳು ಮತ್ತೆ ಮತ್ತೆ ಪ್ರಸಾರ ಮಾಡುತ್ತಿವೆ. ಇದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಬಹುದು. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಕಾನೂನು ಮತ್ತು ಸುವ್ಯವಸ್ಥೆ ಕುಸಿಯುವಂತೆ ಮಾಡಬಹುದು’ ಎಂದು ಸಚಿವಾಲಯ ಆತಂಕ ವ್ಯಕ್ತಪಡಿಸಿದೆ.
‘ಪರಿಸ್ಥಿತಿ ತಿಳಿಗೊಳಿಸಲು ಮಾಧ್ಯಮಗಳು ಸಹಕಾರ ನೀಡಬೇಕು ಎಂದು ಮಾಹಿತಿ ಮತ್ತು ವಾರ್ತಾ ಸಚಿವ ಎಂ. ವೆಂಕಯ್ಯ ನಾಯ್ಡು ಕೋರಿದ್ದಾರೆ’ ಎಂದು ಸಚಿವಾಲಯ ಹೇಳಿದೆ.ಇದೇ ಮಾದರಿಯ ಸಂದೇಶವನ್ನು ಹೈದರಾಬಾದ್‌ಪೊಲೀಸರು ಅಲ್ಲಿನ ಮಾಧ್ಯಮಗಳಿಗೆ ರವಾನಿಸಿದ್ದಾರೆ.
Comments are closed.