ಬೆಂಗಳೂರು: ತಮಿಳುನಾಡಿನಲ್ಲಿ ಕನ್ನಡಿಗರ ಮೇಲಿನ ಹಲ್ಲೆ ಮತ್ತು ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿರುವ
ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡಿನಲ್ಲಿ ಕನ್ನಡಿಗರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಅಲ್ಲಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಪತ್ರ ಬರೆದಿದ್ದಾರೆ.
ಜತೆಗೆ ಕೇಂದ್ರ ಗೃಹ ಸಚಿವರ ಜತೆಯೂ ಈ ಕುರಿತು ಚರ್ಚಿಸಿದ್ದಾರೆ. ತಮಿಳು ನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮತ್ತು
ಕರ್ನಾಟಕದವರ ಅಂಗಡಿ- ಹೋಟೆಲ್‌ಗಳ ಮೇಲೆ ನಡೆಸಿರುವ ದಾಳಿ ಖಂಡನಾರ್ಹ ಮತ್ತು ಕಳವಳಕಾರಿ ಎಂದು ಜಯಲಲಿತಾ ಅವರಿಗೆ ಸೋಮವಾರ ಬರೆದಿರುವ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಕನ್ನಡಿಗರಿಗೆ ಭದ್ರತೆ ನೀಡಿ ಅವರ ಆಸ್ತಿಪಾಸ್ತಿ ರಕ್ಷಣೆಗೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಆಗ್ರಹಿಸಿದ್ದಾರೆ.
ತಮಿಳುನಾಡಿನಲ್ಲಿ ಕನ್ನಡಿಗರ ಮೇಲಿನ ಹಲ್ಲೆಗೆ ಸಿಎಂ ಸಿದ್ದರಾಮಯ್ಯ ಖಂಡನೆ
ಬೆಂಗಳೂರು: ನೆರೆರಾಜ್ಯ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಎಸಗಿರುವುದು ಖಂಡನೀಯವಾಗಿದ್ದು, ಇದರ ದುಷ್ಪರಿಣಾಮ ರಾಜ್ಯದಲ್ಲಿಯೂ ಆಗಲಿದೆ. ಹೀಗಾಗಿ ರಾಜ್ಯದ ಜನತೆ ಪ್ರಚೋದನೆಗೊಳಗಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆದಿದೆ ಎಂಬುದರ ಬಗ್ಗೆ ವರದಿಯಾಗಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಇಬ್ಬರು ಪೊಲೀಸ್ ನಿರ್ದೇಶಕರು ಚರ್ಚಿಸಿದ್ದಾರೆ. ದೌರ್ಜನ್ಯ ನಡೆಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ, ಎರಡು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಸಹ ಚರ್ಚೆ ಮಾಡಿದ್ದಾರೆ ಎಂದು ಹೇಳಿದರು.
ಕನ್ನಡಿಗರ ಮೇಲೆ ನಡೆದಿರುವ ದೌರ್ಜನ್ಯ ಖಂಡನೀಯ. ಇದರ ವ್ಯತಿರಿಕ್ತ ಪರಿಣಾಮ ರಾಜ್ಯದ ಮೇಲೂ ಬೀಳಲಿದೆ. ಹೀಗಾಗಿ ರಾಜ್ಯದ ಜನತೆ, ಕನ್ನಡಪರ ಸಂಘಟನೆಗಳು ಪ್ರಚೋದನೆಗೊಳಗಾಗಬಾರದು. ಎರಡು ರಾಜ್ಯಗಳ ನಡುವೆ ಸೌಹಾರ್ದತಯುತ ವಾತಾವರಣ ಇರಬೇಕು. ಇದಕ್ಕಾಗಿ ರಾಜ್ಯದ ಪ್ರತಿಯೊಬ್ಬರು ಶಾಂತಿ ಕಾಪಾಡಬೇಕು ಎಂದರು.
ಕರ್ನಾಟಕದ ಪರಿಸಿ§ತಿ “ಎಚ್ಚರಿಕೆ ಗಂಟೆ’: ಜಯಾ
ಚೆನ್ನೈ: ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ವಿರೋಧಿಸಿ ಕರ್ನಾಟದಲ್ಲಿ ನಡೆದ ಹಿಂಸಾಚಾರ “ಎಚ್ಚರಿಕೆಯ ಗಂಟೆ’ ಎಂದು ಹೇಳಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಕರ್ನಾಟಕದಲ್ಲಿರುವ ತಮಿಳು ಭಾಷಿಕರ ರಕ್ಷಣೆ ನೀಡಬೇಕು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಿದ್ದಾರೆ. ಕರ್ನಾಟದಲ್ಲಿನ ಉದ್ವಿಗ್ನ ಪರಿಸ್ಥಿತಿಗೆ ಕಳವಳ ವ್ಯಕ್ತಪಡಿಸಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಪತ್ರ ಬರೆದಿರುವ ಜಯಲಲಿತಾ, “ತಮಿಳು ಭಾಷಿಕರ ಹೋಟೆಲ್ ಮತ್ತು ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಲಾಗಿದೆ. ಇದು ಎಚ್ಚರಿಕೆ ಗಂಟೆಯಾಗಿದ್ದು, ಅತೀವ ಕಳವಳಕ್ಕೆ ಕಾರಣವಾಗಿದೆ. ತಮಿಳು ಭಾಷಿಕರ ಮೇಲೆ ಮತ್ತು ಆಸ್ತಿಗಳ ಮೇಲೆ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದ್ದು, ಕರ್ನಾಟಕದಲ್ಲಿನ ಪರಿಸ್ಥಿತಿ ಗಂಭೀರವಾಗಿರುವುದು ಕಳವಳ ಮೂಡಿಸಿದೆ.
ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕರ್ನಾಟಕದಲ್ಲಿರುವ ತಮಿಳರ ಆಸ್ತಿಪಾಸ್ತಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ನಾನು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
– ಉದಯವಾಣಿ
Comments are closed.