ರಾಷ್ಟ್ರೀಯ

ಲಾಂಗ್‌, ಶಾರ್ಟ್‌, ಡೇ ಟ್ರೇಡಿಂಗ್‌: ಯಾವುದು ಒಳ್ಳೆಯದು?

Pinterest LinkedIn Tumblr

stock-marketಷೇರು ಮಾರುಕಟ್ಟೆ ವಿಷಯ ಗೊತ್ತಿಲ್ಲದವರಿಗೆ ಈ ಹಾವು ಏಣಿಯಾಟ ಏನೆಂದೇ ತಿಳಿಯುವುದಿಲ್ಲ. ಒಟ್ಟು ಕನ್‌ಫ್ಯೂಷನ್‌!! ಅಸಲಿಗೆ ಈ ವೈವಾಟು ಹೇಗೆ ನಡೆಯುತ್ತದೆ? ಶೇರು ವ್ಯವಹಾರವೆಂಬ ಈ ಹುಚ್ಚಾಟ ಹೇಗೆ ನಡೆಯುತ್ತದೆ? ಇದನ್ನು ಅರಿಯಲು ಪ್ರಯತ್ನಿಸೋಣ.

ಮಾರುಕಟ್ಟೆಯತ್ತ ನೋಡಿ, ಶೇರುಗಳಲ್ಲಿ ದಿನಂಪ್ರತಿ ವ್ಯವಹಾರ ನಡೆಯುತ್ತದೆ. ಕೆಲವರು ಕೊಡುತ್ತಾರೆ, ಕೆಲವರು ಕೊಳ್ಳುತ್ತಾರೆ. ನಿಮಿಷ ನಿಮಿಷಕ್ಕೆ ಶೇರು ಬೆಲೆ ಏರುಪೇರಾಗುತ್ತವೆ. ವಿಷಯ ಗೊತ್ತಿಲ್ಲದವರಿಗೆ ಈ ಹಾವು ಏಣಿಯಾಟ ಏನೆಂದೇ ತಿಳಿಯುವುದಿಲ್ಲ. ಒಟ್ಟು ಕನ್‌ಫ್ಯೂಷನ್‌!! ಅಸಲಿಗೆ ಈ ವೈವಾಟು ಹೇಗೆ ನಡೆಯುತ್ತದೆ? ಶೇರು ವ್ಯವಹಾರವೆಂಬ ಈ ಹುಚ್ಚಾಟ ಹೇಗೆ ನಡೆಯುತ್ತದೆ? ಇದನ್ನು ಅರಿಯಲು ಪ್ರಯತ್ನಿಸೋಣ:

ಮುಖ್ಯವಾಗಿ ಶೇರು ವ್ಯವಹಾರ ವಿವಿಧ ರೀತಿಯ ಕಾಂಟ್ರಾಕ್ಟ್ ಅಥವಾ ಕರಾರು ಮೂಲಕ ನಡೆಯುತ್ತದೆ. ಇಂತಹ ಕರಾರುಗಳನ್ನು ಮುಖ್ಯವಾಗಿ ಎರಡು ವಿಧಗಳಾಗಿ ನೋಡಬಹುದು:

1. ಶೇರುಗಳಲ್ಲಿ ಹೂಡಿಕೆ
2. ಶೇರುಗಳ ವ್ಯಾಪಾರ
ಹೂಡಿಕೆ : ಒಂದು ಶೇರಿನಲ್ಲಿ ದೀರ್ಘ‌ಕಾಲಿಕ ಆಸಕ್ತಿ ಹೊಂದಿ ಅದನ್ನು ಖರೀದಿಸಿ ಇಟ್ಟುಕೊಳ್ಳುವುದು ಹೂಡಿಕೆಯ ಮುಖ್ಯ ಲಕ್ಷಣ. ಆ ಶೇರನ್ನು ಖರೀದಿಸುವಾಗ ಅದನ್ನು ಮಾರುವ ಬಗ್ಗೆ ಸ್ಪಷ್ಟ ಧೋರಣೆ ಇರುವುದಿಲ್ಲ. ಕೆಲವು ತಿಂಗಳು, ವರ್ಷಗಳ ಬಳಿಕ ಎಂದಾದರೊಮ್ಮೆ ಬೆಲೆಯೇರಿದ ಮೇಲೆ ಅಗತ್ಯ ಬಿದ್ದಂತೆ ಮಾರಿಕೊಳ್ಳುವುದು ಹೂಡಿಕೆಯವರ ಒಲವು. ಈ ರೀತಿ ಹಣವನ್ನು ಒಂದು ಶೇರಿನ ಹಿಂದೆ ಹೂಡುವ ಮೊದಲು ಆ ಕಂಪೆನಿಯ ದೀರ್ಘ‌ಕಾಲಿಕ ಭವಿಷ್ಯದ ಬಗ್ಗೆ ಭರವಸೆ ಅಗತ್ಯ. ಇದಕ್ಕೆ ಆ ನಿಟ್ಟಿನ ಅಭ್ಯಾಸ ಕೂಡ ಅವಶ್ಯ. ಅಲ್ಲದೆ ಮಾರುಕಟ್ಟೆಯ ತಾತ್ಕಾಲಿಕ ಏಳುಬೀಳುಗಳಿಂದ ಅಂತಹ ಹೂಡಿಕೆ

ದಾರರು ವಿಚಲಿತರಾಗುವುದಿಲ್ಲ; ಆಗಬಾರದು. ಕಂಪೆನಿಗಳ ಮತ್ತು ಆರ್ಥಿಕತೆ ಬಗ್ಗೆ ಮೂಲಭೂತ ಅಧ್ಯಯನ ಇಲ್ಲಿ ಅಗತ್ಯ.
ಯಾವುದೇ ಕಂಪೆನಿಯಲ್ಲಿ ಇನ್ವೆಸ್ಟ್‌ ಮಾಡುವವರು ಮೊತ್ತ ಮೊದಲನೆಯದಾಗಿ ದೀರ್ಘ‌ ಕಾಲಕ್ಕೆ ಉತ್ತಮ ಪ್ರತಿಫ‌ಲ ಕೊಡಬಲ್ಲಂತಹ ಒಂದು ಉತ್ತಮ ಕಂಪೆನಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕೆ ಸತತ ಆಳವಾದ ಅಭ್ಯಾಸ ಅಗತ್ಯ. ಪರಿಣಿತರ ಸಲಹೆಯನ್ನೂ ಪಡೆಯಬಹುದು. ಆಯ್ಕೆ ಮಾಡಿಕೊಂಡ ಬಳಿಕ ಟ್ರೇಡಿಂಗ್‌ ಅಕೌಂಟ್‌ ಮೂಲಕ ನೇರವಾಗಿ ಆನ್‌-ಲೈನ್‌ ಆಗಿ ಅಥವ ಬ್ರೋಕರ್‌ ಮೂಲಕ ಮಾರುಕಟ್ಟೆ ಪ್ರವೇಶಿಸಿ ಆ ಶೇರನ್ನು ಖರೀದಿಸುವುದೇ. ಇನ್ನೇನೂ ಇಲ್ಲ. ಬೇಕಾದ ಬೆಲೆ ಹಾಕಿ ಪೂರ್ತಿ ಹಣ ತೆತ್ತು ಡೆಲಿವರಿಗಾಗಿ ಸ್ಪಾಟ್‌ ಬೈ ಮಾಡಿದರಾಯಿತು. ಈ ಖರೀದಿಸುವ ಪ್ರಕ್ರಿಯೆ ಅತ್ಯಂತ ಸುಲಭ. ಡಿ-ಮ್ಯಾಟ್‌ ಹೊಂದಿದ ಯಾರೇ ಆದರೂ ಅತಿ ಸುಲಭದಲ್ಲಿ ಇದನ್ನು ಕಲಿಯಬಹುದು. ಆನ್‌-ಲೈನ್‌ ಸಹಾಯ ಕೂಡ ಲಭ್ಯ. ಮಾರಾಟ ಮಾಡಬೇಕೆನಿಸಿದಾಗ ಅದೇ ರೀತಿಯಲ್ಲಿ ಶೇರನ್ನು ಮಾರಾಟ ಮಾಡಿದರಾಯಿತು. ಒಂದು ಬಾರಿಗೆ ಎಷ್ಟಾದರೂ ಒಂದೇ ಒಂದು ಶೇರು ಕೂಡ ಖರೀದಿಸಬಹುದು ಅಥವಾ ಮಾರಬಹುದು. ಇಲ್ಲಿ ಕನಿಷ್ಠ ಲಾಟ್‌ ಸೈಜಿನ ಪ್ರಮೇಯ ಇಲ್ಲ.

ಹೀಗೆ ಕೊಂಡುಕೊಂಡ ಶೇರು, ವ್ಯವಹಾರದ 2 ದಿನಗಳ ಬಳಿಕ (ಟಿ+2, ಅಥವ ಟ್ರಾನ್ಸಾಕÏನ್‌+2) ಸೆಟಲ್‌ಮೆಂಟ್‌ ಕಳೆದ ಕೂಡಲೇ ನಿಮ್ಮ ಡಿ-ಮಾಟ್‌ ಅಕೌಂಟಿಗೆ ಬಂದು ಸೇರುತ್ತವೆ. ಕೊಟ್ಟ ಶೇರು ಅದೇ ದಿನ ಸಂಜೆ ನಿಮ್ಮ ಎಕೌಂಟಿನಿಂದ ಹೊರಟು ಹೋಗುತ್ತದೆ. ಅದಕ್ಕೆ ತಕ್ಕಂತೆ ದುಡ್ಡು ಕೂಡ ನೀವು ನಮೂದಿಸಿದ ಬ್ಯಾಂಕ್‌ ಅಕೌಂಟಿಗೆ ಕ್ರೆಡಿಟ್‌/ಡೆಬಿಟ್‌ ಆಗುತ್ತವೆ. ಶೇರು ಕೊಟ್ಟವರಿಗೆ 2 ದಿನಗಳಲ್ಲಿ ದುಡ್ಡು ಬರುತ್ತದೆ ಹಾಗೂ ಶೇರು ಕೊಂಡವರ ದುಡ್ಡು ಅದೇ ದಿನ ಡೆಬಿಟ್‌ ಆಗುತ್ತದೆ. ಎಲ್ಲವೂ ಆಟೋಮಾಟಿಕ್‌ ಆಗಿ, ನಿರಾಯಾಸವಾಗಿ 2 ದಿನಗಳಲ್ಲಿ ನಡೆಯುತ್ತದೆ.

ವ್ಯಾಪಾರ: ವ್ಯಾಪಾರ ಅಥವ ಟ್ರೇಡಿಂಗ್‌ ಎಂಬುದು ಶೇರು ಹೂಡಿಕೆಗಿಂತ ಭಿನ್ನವಾದದ್ದು. ಇದು ಕೊಡ-ಕೊಳ್ಳುವ ಸರಣಿ. ಅಲ್ಪ ಕಾಲದ ಬಳಿಕ ಒಂದು ಚಿಕ್ಕ ಲಾಭಾಂಶಕ್ಕೆ ಮಾರುವ ಉದ್ದೇಶದಿಂದಲೇ ಖರೀದಿಸುವಂತದ್ದು; ಅಥವಾ ಒಂದು ಚಿಕ್ಕ ಲಾಭಾಂಶಕ್ಕೆ ವಾಪಾಸು ಕೊಳ್ಳುವ ಉದ್ದೇಶದಿಂದಲೇ ಮಾರುವಂತದ್ದು, ಟ್ರೇಡಿಂಗ್‌ನ ಮುಖ್ಯ ಲಕ್ಷಣ. ಟ್ರೇಡಿಂಗ್‌ ಆ ದಿನದೊಳಗೇ ಕೆಲವು ನಿಮಿಷಗಳ/ಗಂಟೆಗಳ ಮಟ್ಟಿಗೆ ನಡೆಯುವ ಡೇ ಟ್ರೇಡಿಂಗ್‌ ಆಗಿರಬಹುದು ಅಥವಾ ಕೆಲವು ವಾರಗಳ ಮಟ್ಟಿಗೆ ನಡೆಯುವ ಡಿರೈವೆಟಿವ್‌ ಮಾದರಿಯ ಫ್ಯೂಚರ್ಸ್‌/ಆಪ್ಷನ್ಸ್‌ ಟ್ರೇಡಿಂಗ್‌ ಆಗಿರಬಹುದು. ಮಾರುಕಟ್ಟೆಯ ದೈನಂದಿಕ ಏಳು ಬೀಳುಗಳೇ ಈ ವ್ಯವಹಾರದ ಜೀವಾಳ. ಟ್ರೇಡಿಂಗ್‌ ನಡೆಸುವವರು ಇದರ ಬಗ್ಗೆ ವಿಶೇಷ ಅಧ್ಯಯನ ನಡೆಸುತ್ತಾರೆ ಹಾಗೂ ಕಂಪೆನಿಗಳ ದೀರ್ಘ‌ಕಾಲಿಕ ಸಾಧನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಟ್ರೇಡಿಂಗಿನಲ್ಲಿ ಲಾಂಗ್‌ ಮತ್ತು ಶಾರ್ಟ್‌
ಟ್ರೇಡ್‌ ಮಾಡುವಾಗ ಎರಡು ರೀತಿಯಲ್ಲಿ ಮಾರಾಟ ಮಾಡಲು ಬರುತ್ತದೆ. ಕೈಯಲ್ಲಿ ಈಗಾಗಲೇ ಇರುವ ಒಂದು ಶೇರನ್ನು ಸೇಲ್‌ ಮಾಡಲು ಹೊರಟರೆ ಅದು ಲಾಂಗ್‌ ಸೇಲ್‌. ಹೆಚ್ಚಾಗಿ ಮಾರಾಟ ಮಾಡುವುದು ಈ ರೀತಿ ಕೈಯಲ್ಲಿ ಇರುವುದನ್ನೇ. ಮೊದಲೇ ಕಡಿಮೆ ಬೆಲೆಗೆ ಕೊಂಡು ಆಮೇಲೆ ಹೆಚ್ಚು ಬೆಲೆಗೆ ಮಾರಿದರೆ ಅದರಿಂದ ಲಾಭ ಉಂಟಾಗುತ್ತದೆ. ಬುಲ್‌ ಅಥವಾ ಗೂಳಿಗಳು ಮಾರುಕಟ್ಟೆಯಲ್ಲಿ ಈ ರೀತಿ ವ್ಯವಹರಿಸುತ್ತಾರೆ.

ಆದರೆ ಕೈಯಲ್ಲಿ ಇಲ್ಲದ ಶೇರನ್ನೂ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಬರುತ್ತದೆ. ಮೊತ್ತ ಮೊದಲು ಕೈಯಲ್ಲಿ ಇಲ್ಲದ ಶೇರನ್ನು ಮಾರಾಟ ಮಾಡಿ ಆ ಬಳಿಕ ಅದನ್ನು ವಾಪಾಸು ಖರೀದಿಸಬಹುದಾಗಿದೆ. ಅಲ್ಲಿಗೆ ಡೀಲ್‌ ಸಂಪೂಣವಾಗುತ್ತದೆ. ಇಂತದ್ದನ್ನು ಶಾರ್ಟ್‌ ಸೇಲ್‌ ಎನ್ನುತ್ತಾರೆ. ಒಂದು ಇಳಿಕೆಯ ಮಾರುಕಟ್ಟೆಯಲ್ಲಿ ಬೆಲೆ ಕೆಳಕ್ಕೆ ಕುಸಿಯುವಾಗ ಈ ರೀತಿ ಶೇರನ್ನು ಮೊದಲು ಕೊಟ್ಟು ಆಮೇಲೆ ಕೊಳ್ಳುವುದೇ ಜಾಣತನ. ಹೆಚ್ಚು ಬೆಲೆಗೆ ಕೊಟ್ಟು ಅನಂತರ ಕಡಿಮೆ ಬೆಲೆಗೆ ಕೊಂಡರೆ ಲಾಭ ಉಂಟಾಗುತ್ತದೆ. ಬೇರ್‌ ಅಥವ ಕರಡಿ ಮನೋಭಾವದವರು ಈ ರೀತಿಯ ಕುಸಿತದ ಟ್ರೆಂಡನ್ನು ಅನುಸರಿಸಿ ಶಾರ್ಟ್‌ ಸೇಲ್‌ ಮೂಲಕ ಮಾರುಕಟ್ಟೆಯಲ್ಲಿ ಆಟವಾಡುತ್ತಿರುತ್ತಾರೆ. ಈ ರೀತಿ ಮಾರುಕಟ್ಟೆ ಕುಸಿಯುವಾಗಲೂ ದುಡ್ಡು ಮಾಡಲು ಬರುತ್ತದೆ ಎಂಬ ಕಲ್ಪನೆ ಹಲವರಿಗೆ ಇಲ್ಲ. ಮಾರುಕಟ್ಟೆ ಮೇಲೆ ಹೋದರೆ ಮಾತ್ರ ದುಡ್ಡು ಎಂಬ ತಪ್ಪು ಕಲ್ಪನೆ ಬಹಳಷ್ಟು ಜನರ ಮನಸ್ಸಿನಲ್ಲಿ ಇದೆ. ಶಾರ್ಟ್‌ ಸೇಲ್‌ ಬಗ್ಗೆ ಅರಿವು ಅಗತ್ಯ. ಶಾರ್ಟ್‌ ಸೇಲ್‌ ಇರುವುದರಿಂದಲೇ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಭೀತಿ ಜೀವಂತವಾಗಿದೆ. ಇದನ್ನು ಮನಗಾಣಬೇಕು.

ಟ್ರೇಡಿಂಗ್‌ ಕರಾರುಗಳು: ಟ್ರೇಡಿಂಗ್‌ ನಡೆಸುವಾಗ ಅದರಲ್ಲಿ ವಿವಿಧ ರೂಪಗಳ ಕರಾರುಗಳಿರುತ್ತವೆ. ಹೂಡಿಕೆ ಮಾಡಿದಂತೆ ಶೇರನ್ನು ಡೆಲಿವರಿಗಾಗಿ ಕೊಳ್ಳುವುದು ಅಥವಾ ಮಾರುವುದು ಇಲ್ಲಿನ ಪದ್ಧತಿ ಅಲ್ಲ. ಟ್ರೇಡಿಂಗಿನ ಮೂರು ವಿಧದ ಕರಾರುಗಳ ಬಗ್ಗೆ ಈಗ ತಿಳಿದುಕೊಳ್ಳೋಣ:

ಡೇ ಟ್ರೇಡಿಂಗ್‌, ಫ್ಯೂಚರ್ಸ್‌ ಟ್ರೇಡಿಂಗ್‌, ಆಪ್ಷನ್‌ ಟ್ರೇಡಿಂಗ್‌ ಬೆಂಕಿಯೊಡನೆ ಸರಸ-ಡೇ ಟ್ರೇಡಿಂಗ್‌ ಹೆಸರೇ ಸೂಚಿಸುವಂತೆ ಒಂದು ದಿನದೊಳಗೆ ಮಾಡಿ ಮುಗಿಸುವ ಟ್ರೇಡಿಂಗ್‌ ವ್ಯವಹಾರವನ್ನು ಡೇ ಟ್ರೇಡಿಂಗ್‌ ಅನ್ನುತ್ತಾರೆ. ಇಲ್ಲಿ ಒಂದು ಶೇರನ್ನು ಒಂದೇ ದಿನದೊಳಗೆ ಬೈ-ಸೆಲ್‌ ಅಥವಾ ಸೆಲ್‌-ಬೈ ಮಾಡಬಹುದು. ಬೆಳಗ್ಗೆ ಖರೀದಿಸಿದ ಶೇರನ್ನು ಸಂಜೆ ಮಾರುಕಟ್ಟೆ ಮುಚ್ಚುವ ಮೊದಲು ಮಾರಿ ಡೀಲ್‌ ಕ್ಲೋಸ್‌ ಮಾಡಬಹುದು. ಅದಲ್ಲದೆ ಕೈಯಲ್ಲಿಲ್ಲದ ಶೇರನ್ನು ಮೊದಲು ಶಾರ್ಟ್‌ ಸೇಲ್‌ ಮಾಡಿ ಆಮೇಲೆ ಕೊಳ್ಳಲೂಬಹುದು.

ಡೇ ಟ್ರೇಡಿಂಗ್‌ನ ಮುಖ್ಯ ಅಂಶವೇನೆಂದರೆ ಇದರಲ್ಲಿ ತೊಡಗಿಕೊಳ್ಳಲು ಕೊಂಡ ಶೇರುಗಳ ಪೂರ್ತಿ ಮೌಲ್ಯ ಪಾವತಿ ಮಾಡಬೇಕಿಲ್ಲ. ಅಂಶಿಕ ಪಾವತಿ ಸಾಕು. ಹೇಗಾದರೂ ಡೆಲಿವರಿ ತೆಗೆದುಕೊಳ್ಳದೆ ಮರು ಮಾರಾಟ ಮಾಡುವುದೇ ಇದರ ಲಕ್ಷಣವಾದ ಕಾರಣ ಈ ಸೌಲಭ್ಯ ಒದಗಿಸಲಾಗಿದೆ. ಮಾರುಕಟ್ಟೆ ನಿಗದಿಪಡಿಸಿದ ಮಾರ್ಜಿನ್‌ ಮನಿ ಕೊಟ್ಟರೆ ಆಯಿತು. ಇದು ಸುಮಾರು ಶೇ. 20-30 ಅಥವಾ ಹೆಚ್ಚು ಕಡಿಮೆ ಸಂದರ್ಭಾನುಸಾರ ಶೇರನ್ನು ಹೊಂದಿಕೊಂಡು ಇರುತ್ತದೆ.

ಇದನ್ನು ಶೇರು ಮಾರುಕಟ್ಟೆಯವರು ಸಮಯಾನುಸಾರ ನಿಗದಿಪಡಿಸುತ್ತಾರೆ. ಆ ಪಟ್ಟಿ ಲಭ್ಯ. ಕೆಲವೊಮ್ಮೆ ನಿಮ್ಮ ಬ್ರೋಕರುಗಳೂ ಕೂಡ ಈ ದುಡ್ಡಿನಲ್ಲಿ ಭಾಗಶಃ ತಾವೇ ಫೈನಾನ್ಸ್‌ ಮಾಡಿ ಅದರ ಬಡ್ಡಿಯನ್ನು ನಿಮ್ಮಿಂದ ಪಡೆದುಕೊಳ್ಳುವ ಅವಕಾಶವೂ ಇದೆ. ಹಾಗಾಗಿ ಕಡಿಮೆ ದುಡ್ಡು ಕಟ್ಟಿ ಹೆಚ್ಚಿನ ಮೌಲ್ಯದಲ್ಲಿ ಟ್ರೇಡಿಂಗ್‌ ನಡೆಸುವ ಸೌಲಭ್ಯ ಇದರಲ್ಲಿ ಇರುತ್ತದೆ. ಇದು ಒಂದು ರೀತಿಯ ವಿತ್ತೀಯ ಗೇರ್‌, ವಾಹನದಲ್ಲಿ ಗೇರ್‌ ಇದ್ದಂತೆ. ಈ ಗೇರ್‌ನಿಂದ ಇದರಲ್ಲಿ ಹೂಡಿದ ಹಣಕ್ಕೆ ಲಾಭಾಂಶ ಜಾಸ್ತಿ; ಅದೇ ರೀತಿ ನಷ್ಟವಾದರೆ ನಷ್ಟಾಂಶವೂ ಜಾಸ್ತಿ. ಹೂಡಿಕೆಗಾಗಿ ಶೇರನ್ನು ಡೆಲಿವರಿ ತೆಗೆದುಕೊಳ್ಳುವುದಕ್ಕಿಂತ ಇಲ್ಲಿ ರಿಸ್ಕ್ ಜಾಸ್ತಿ. ಉದಾ: ರೂ. 100ರ ಶೇರನ್ನು ರೂ 20 ಮಾತ್ರ ಮಾರ್ಜಿನ್‌ ಮನಿಯಾಗಿ ಕೊಟ್ಟು ತೆಗೆದುಕೊಂಡಲ್ಲಿ ರೂ. 5ರಷ್ಟು ಬೆಲೆ ವೃದ್ಧಿಯಾದರೆ ಹೂಡಿಕೆ ಮೊತ್ತ ರೂ. 20ರ ಮೇಲೆ 5/20ಗಿ100= ಶೇ. 25 ಪ್ರತಿಫ‌ಲ ನೀಡುತ್ತದೆ.

ಮಾರ್ಜಿನ್‌ ಮನಿಯ ಸೌಲಭ್ಯದೊಂದಿಗೆ ಡೇ ಟ್ರೇಡಿಂಗಿಗೆ ಇಳಿದರೆ ಅದೇ ದಿನ ಡೀಲ್‌ ಕ್ಲೋಸ್‌ ಮಾಡಿ ಮಾರುಕಟ್ಟೆಯಿಂದ ಹೊರಬರಲೇ ಬೇಕಾಗುತ್ತದೆ.

ಇದು ಡೇ ಟ್ರೇಡಿಂಗಿನ ಮುಖ್ಯ ತತ್ವ. ಬೈ ಮಾಡಿದ್ದರೆ ದಿನಾಂತ್ಯದೊಳಗೆ ಸೇಲ್‌ ಹಾಗೂ ಶಾರ್ಟ್‌ ಸೇಲ್‌ ಮಾಡಿದ್ದರೆ ದಿನಾಂತ್ಯದೊಳಗೆ ಬೈ ಮಾಡಲೇ ಬೇಕು. ಒಂದು ವೇಳೆ ಹಾಗೆ ಮಾಡದೇ ಇದ್ದಲ್ಲಿ ಮಾರುಕಟ್ಟೆಯೇ ನಿಮ್ಮ ವ್ಯಾಪಾರವನ್ನು ಕ್ಲೋಸ್‌ ಮಾಡಿ ಲಾಭ/ನಷ್ಟವನ್ನು ನಿಮ್ಮ ಖಾತೆಗೆ ತುಂಬಿಸುತ್ತದೆ. ಡೇ ಟ್ರೇಡಿಂಗ್‌ ಮಾಡುವವರು ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಈ ವ್ಯವಸ್ಥೆಯಿಂದ ಹೊರ ಬರಬೇಕೆಂದಾದರೆ ಮಾರ್ಜಿನ್‌ ಮನಿ ಮಾತ್ರ ಕೊಟ್ಟು ಡೇ ಟ್ರೇಡಿಂಗ್‌ ಎಂದು ಆರಂಭಿಸಿದ ವ್ಯವಹಾರವನ್ನು ಪೂರ್ತಿ ಮೌಲ್ಯ ತೆತ್ತು ಡೆಲಿವರಿಗಾಗಿ ಪರಿವರ್ತನೆಗೊಳಿಸುವುದು ಒಂದೇ ಉಪಾಯ. ಇನ್ನಾವುದಾದರು ದಿನ ಲಾಭ ಬಂದಾಗ ವ್ಯವಹಾರ ಮುಗಿಸಿಕೊಂಡರಾಯಿತು.

ದಿನದೊಳಗೆ ವಿಪರೀತ ನಷ್ಟ ತಪ್ಪಿಸಲು ವೃತ್ತಿಪರ ಡೇ ಟ್ರೇಡರ್ಸ್‌ ಸ್ಟಾಪ್‌-ಲಾಸ್‌ ಹುಕುಂ ಇಟ್ಟೇ ವ್ಯವಹಾರಕ್ಕೆ ಇಳಿಯುತ್ತಾರೆ. ಒಂದು ನಿಗದಿಪಡಿಸಿದ ಬೆಲೆಯಿಂದ ಕೆಳಕ್ಕೆ ಶೇರು ಇಳಿಯಿತೋ ಲಾಸ್‌ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಕಂಪ್ಯೂಟರ್‌ ನಿಮ್ಮ ಹುಕುಂ ಅನುಸಾರ ಆ ಶೇರನ್ನು ಆ ಬೆಲೆಗೆ ಮಾರಿ ಬಿಡುತ್ತದೆ. ಶಾರ್ಟ್‌-ಸೆಲ್‌ ಮಾಡಿದ ಶೇರಾಗಿದ್ದರೆ ಒಂದು ನಿಗದಿಪಡಿಸಿದ ಸ್ಟಾಪ್‌-ಲಾಸ್‌ ಬೆಲೆಗೆ ನಿಮ್ಮ ಹುಕುಂ ಅನುಸಾರ ಕೊಂಡುಬಿಡುತ್ತದೆ. ಡೇ ಟ್ರೇಡಿಂಗ್‌ನಲ್ಲಿ ಸ್ಟಾಪ್‌-ಲಾಸ್‌ ಹುಕುಂ ಹಾಕಿಡಲು ಅವಕಾಶವಿದೆ. ಇದನ್ನು ಗಮನಿಸಿ ಜಾಣ್ಮೆಯಿಂದ ಉಪಯೋಗಿಸಿಕೊಳ್ಳುವುದು ಅಗತ್ಯ.

ಡೇ ಟ್ರೇಡಿಂಗ್‌ನಲ್ಲಿ ಒಲವಿದ್ದವರು ಮಾರುಕಟ್ಟೆಯ ತಾಂತ್ರಿಕ ನಡೆಯ ಬಗ್ಗೆ ಸಾಕಷ್ಟು ತಿಳಿದಿರುವುದು ಅಗತ್ಯ. ಟೆಕ್ನಿಕಲ್‌ ಅನಾಲಿಸಿಸ್‌ ಬಗ್ಗೆ ಮೂಲಭೂತ ಜ್ಞಾನ ಅತ್ಯಗತ್ಯ.

ಜಯದೇವ ಪ್ರಸಾದ ಮೊಳೆಯಾರ
jayadev.prasad@gmail.com

-ಉದಯವಾಣಿ

Comments are closed.