ನವದೆಹಲಿ(ಪಿಟಿಐ): ರಾಜಧಾನಿ, ಶತಾಬ್ದಿ ಎಕ್ಸ್ಪ್ರೆಸ್ ರೈಲುಗಳ ಪ್ರಯಾಣದರ ಏರಿಕೆ ಬೆನ್ನಲ್ಲೇ ಸಂಪೂರ್ಣ ಹವಾನಿಯಂತ್ರಿತ ‘ಹಮ್ಸಫರ್’ ರೈಲು ಮುಂದಿನ ತಿಂಗಳಿನಿಂದ ಸಂಚಾರ ಆರಂಭಿಸಲಿದೆ.
ರೈಲ್ವೆ ಸಚಿವ ಸುರೇಶ್ ಪ್ರಭು ಅವರು, 2016–17ರ ಮುಂಗಡಪತ್ರ ಮಂಡನೆ ವೇಳೆ ಈ ರೈಲಿನ ಬಗ್ಗೆ ಪ್ರಸ್ತಾಪಿಸಿದ್ದರು. ಎಕ್ಸ್ಪ್ರೆಸ್ ರೈಲು ಪ್ರಯಾಣದರಕ್ಕಿಂತ ಶೇಕಡ 20 ಹೆಚ್ಚಳ ಇರುತ್ತದೆ. ಕೇವಲ ಎಸಿ–3 ಬೋಗಿಗಳನ್ನು ಮಾತ್ರವೇ ಹೊಂದಿರುವ ವಿಶೇಷ ದರ್ಜೆಯ ‘ಹಮ್ಸಫರ್’ ರೈಲು ದೆಹಲಿ ಮತ್ತು ಗೋರಖ್ಪುರ ನಡುವೆ ಸಂಚಾರ ಆರಂಭಿಸುವ ಸಾಧ್ಯತೆ ಇದೆ. ಈ ರೈಲಿನ ಇನ್ನೂ ವಿಶೇಷವೆಂದರೆ ನಗರಗಳ ನಡುವೆ ರಾತ್ರಿ ವೇಳೆ ಪ್ರಯಾಣ ನಡೆಸಲಿದ್ದು, ಸಾಮಾನ್ಯ ಎಸಿ–3 ಬೋಗಿಗಳಲ್ಲಿ ಇಲ್ಲದ ಹಲವು ಹೆಚ್ಚುವರಿ ಸೌಲಭ್ಯಗಳು ದೊರಕಲಿವೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಸಿಟಿವಿ, ಜಿಪಿಎಸ್ ಆಧರಿತ ಮಾಹಿತಿ ವ್ಯವಸ್ಥೆ, ಬೆಂಕಿ ಮತ್ತು ಹೊಗೆ ಪತ್ತೆ ಹಾಗೂ ನಿರೋಧಕ ವ್ಯವಸ್ಥೆ, ಪ್ರತಿ ಬರ್ತ್ಗೂ ಮೊಬೈಲ್ ಮತ್ತು ಲ್ಯಾಪ್ಟಾಪ್ ಚಾರ್ಜ್ ಪಾಯಿಂಟ್ಗಳು ‘ಹಮ್ಸಫರ್’ ರೈಲಿನ ವಿಶೇಷಗಳಲ್ಲಿ ಸೇರಿವೆ. ಇವುಗಳ ಹೊರತಾಗಿ, ಮಹಾರಾಜ ಎಕ್ಸ್ಪ್ರೆಸ್ ಬೋಗಿಗಳಲ್ಲಿ ಇರುವಂತೆ ವಿನೈಲ್ಶೀಟ್ಗಳ ಬಳಕೆಯೊಂದಿಗೆ ಸುಂದರ ಒಳ ಮತ್ತು ಹೊರವಿನ್ಯಾಸವನ್ನು ‘ಹಮ್ಸಫರ್’ ರೈಲು ಹೊಂದಿದೆ.
Comments are closed.