ಕರ್ನಾಟಕ

ಮತ್ತೆ ಕರ್ನಾಟಕಕ್ಕೆ ಭಾರಿ ಹಿನ್ನಡೆ; ತಮಿಳುನಾಡಿಗೆ ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ

Pinterest LinkedIn Tumblr

suprim

ನವದೆಹಲಿ: ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸೂಚನೆ ನೀಡಿದೆ.

ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ ಉಭಯ ರಾಜ್ಯಗಳ ಪರ ವಕೀಲರ ವಾದವನ್ನು ಆಲಿಸಿತು. ಬಳಿಕ ತನ್ನ ಆದೇಶ ನೀಡಿದ ನ್ಯಾಯಾಲಯ ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನಂತೆ ಸೆಪ್ಟೆಂಬರ್ 20ರವರೆಗೆ ನೀರು ಹರಿಸುವಂತೆ ಆದೇಶ ನೀಡಿದೆ. ಅಲ್ಲದೆ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 20ಕ್ಕೆ ಮುಂದೂಡಲಾಗಿದೆ.

ಇದಕ್ಕೂ ಮೊದಲು ಕರ್ನಾಟಕದ ಪರ ತಮ್ಮ ವಾದ ಮಂಡಿಸಿದ ವಕೀಲ ಫಾಲಿ ನಾರಿಮನ್ ಅವರು, ಕರ್ನಾಟಕ ರಾಜ್ಯವೇ ಸಾಕಷ್ಟು ನೀರಿನ ತೊಂದರೆ ಎದುರಿಸುತ್ತಿದೆ. ಈ ಸಂಕಷ್ಟ ಕಾಲದಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ತನ್ನ ಈ ಹಿಂದಿನ ಆದೇಶಕ್ಕೆ ತಡೆ ನೀಡಬೇಕು ಎಂದು ಹೇಳಿದರು.

ಇದಕ್ಕೆ ತಕರಾರು ತೆಗೆದ ತಮಿಳುನಾಡು ಪರ ವಕೀಲ ಶೇಖರ್ ನಫಡೆ ಅವರು, ಕರ್ನಾಟಕದ ವಾದವನ್ನು ಒಪ್ಪುವಂತಿಲ್ಲ. ಕರ್ನಾಟಕ ಏಕ ಪಕ್ಷೀಯವಾಗಿ ಮೇಲ್ಮನವಿ ಸಲ್ಲಿಸಿದೆ. ಉಭಯ ರಾಜ್ಯಗಳಿಗೂ ನೀರು ಸರಿಸಮಾನವಾಗಿ ಹಂಚಿಕೆಯಾಗಬೇಕು. ಆದರೆ ಪ್ರಸ್ತುತ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿ ಏಕಪಕ್ಷೀಯವಾಗಿದೆ ಎಂದು ವಾದ ಮಂಡಿಸಿದರು.

ಬಳಿಕ ತಮ್ಮ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನ್ಯಾ. ದೀಪಕ್ ಮಿಶ್ರಾ ಮತ್ತು ನ್ಯಾ. ಉದಯ್ ಲಲಿತ್ ನೇತೃತ್ವದ ನ್ಯಾಯಪೀಠ ಪ್ರತಿ ನಿತ್ಯ 12 ಸಾವಿರ ಕ್ಯೂಸೆಕ್ಸ್ ನೀರಿನಂತೆ ಸೆಪ್ಟೆಂಬರ್ 20ರವರೆಗೆ ನೀರು ಬಿಡುವಂತೆ ಆದೇಶ ನೀಡಿತು. ಆ ಮೂಲಕ ಈ ಹಿಂದಿನ ಆದೇಶಕ್ಕಿಂತ ಕರ್ನಾಟಕ ತಮಿಳುನಾಡಿಗೆ ಹೆಚ್ಚುವರಿ 3 ಟಿಎಂಸಿ ಅಧಿಕ ನೀರು ಬಿಡುವ ಅನಿವಾರ್ಯತೆ ಎದುರಾಗಿದೆ.

ಇದಕ್ಕೂ ಮೊದಲು ಕರ್ನಾಟಕದ ಪರ ವಕೀಲ ನಾರಿಮನ್ ವಾದಕ್ಕೆ ಮನ್ನಣೆ ನೀಡಿದ್ದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ಪ್ರತಿನಿತ್ಯ 10 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶ ನೀಡಲು ಮುಂದಾಗುತ್ತಿದ್ದಂತೆಯೇ ತಮಿಳುನಾಡಪರ ವಕೀಲ ಶೇಖರ್ ನಫಡೆ ಆದೇಶಕ್ಕೆ ತಕರಾರು ತೆಗೆದರು. 10 ಸಾವಿರ ಕ್ಯೂಸೆಕ್ಸ್ ನೀರು ಏನೇನಕ್ಕೂ ಸಾಲುವುದಿಲ್ಲ. ನೀರಿಲ್ಲದೇ ತಮಿಳುನಾಡು ರೈತರು ಸಾಕಷ್ಟು ತೊಂದರೆಗೀಡಾಗಿದ್ದಾರೆ ಎಂದು ಹೇಳಿದರು. ಆ ಬಳಿಕ ಇಡೀ ತೀರ್ಪನ್ನೇ ಬದಲಿಸಿದ ನ್ಯಾಯಮೂರ್ತಿಗಳು ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿದರು.

ಇದೇ ವೇಳೆ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಕರ್ನಾಟಕದ ಜನತೆ ವಿರೋಧಿಸಿದ್ದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾ.ದೀಪಕ್ ಮಿಶ್ರಾ ಅವರು, ದೇಶದ ನಾಗರಿಕರು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕು. ಆದೇಶ ಪಾಲನೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಯಾವುದೇ ಕಾರಣಕ್ಕೂ ನಾಗರಿಕರು ಕಾನೂನು ಕೈಗೆ ತೆಗೆದುಕೊಳ್ಳಬಾರದು. ಅಂತೆಯೇ ಕಾರ್ಯಾಂಗ ಕೂಡ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

Comments are closed.