
ಮಂಗಳೂರು, ಸೆ.11: ಎತ್ತಿನಹೊಳೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯ ಪರವಾಗಿ ದಿಲ್ಲಿಯ ರಾಷ್ಟ್ರೀಯ ಹಸಿರುಪೀಠದಿಂದ ತೀರ್ಪು ಬರುವಂತೆ ಕೋರಿ ಸೆ.14ರಂದು ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಹಮ್ಮಿಕೊಳ್ಳಲಾಗಿದೆ. ಸೆ.21ರಂದು ಅಂತಿಮ ತೀರ್ಪು ಪ್ರಕಟವಾಗುವ ನಿರೀಕ್ಷೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿಯ ರಕ್ಷಣೆಗಾಗಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ವತಿಯಿಂದ ಸಾಮೂಹಿಕ ಪ್ರಾರ್ಥನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಳಗ್ಗೆ 8:30ರಿಂದ ಕದ್ರಿ ದೇವಸ್ಥಾನದಲ್ಲಿ, 10 ಗಂಟೆಗೆ ಮಿಲಾಗ್ರಿಸ್ ಚರ್ಚ್, 11 ಗಂಟೆಗೆ ಮಂಗಳಾದೇವಿ ದೇವಸ್ಥಾನ, 12 ಗಂಟೆಗೆ ಉಳ್ಳಾಲ ದರ್ಗಾ ಹಾಗೂ 1 ಗಂಟೆಗೆ ಕುದ್ರೋಳಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಸಾಮೂಹಿಕ ಪ್ರಾರ್ಥನೆಗೆ ಅಜಿತ್ ಕುಮಾರ್ ರೈ ಮಾಲಾಡಿ, ಜೆ.ಬಿ.ಕ್ರಾಸ್ತಾ, ಮುಹಮ್ಮದ್ ಮಸೂದ್, ಗಂಗಾಧರ ಹೊಸಬೆಟ್ಟು, ಸಂಸದ ನಳಿನ್ಕುಮಾರ್ ಕಟೀಲ್, ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಪಂ, ತಾಪಂ, ಗ್ರಾಪಂ ಅಧ್ಯಕ್ಷರು, ಸ್ಥಳೀಯಾಡಳಿತಗಳ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.
ಎತ್ತಿನಹೊಳೆ ಯೋಜನೆಯನ್ನು ಕೈಬಿಡಬೇಕು ಎಂಬ ನಮ್ಮ ಹೋರಾಟಕ್ಕೆ ಮುಖ್ಯಮಂತ್ರಿ ಯಾವುದೇ ರೀತಿಯ ಬೆಲೆ ಕೊಟ್ಟಿಲ್ಲ. ಒಂದು ಕಡೆ ಮಾತುಕತೆ ನಡೆಸುವುದಾಗಿ ಹೇಳಿರುವ ಅವರು, ಮತ್ತೊಂದೆಡೆ ಯೋಜನೆ ಮಾಡಿಯೇ ಸಿದ್ಧ ಎಂಬ ಹೇಳಿಕೆ ನೀಡುವ ಮೂಲಕ ಕರಾವಳಿ ಜನರ ಭಾವನೆಗಳನ್ನು ನಿರ್ಲಕ್ಷಿಸಿದ್ದಾರೆ. ಇದರ ನಡುವೆ ದ.ಕ., ಉಡುಪಿ ಸೇರಿದಂತೆ 12 ಜಿಲ್ಲೆಗಳಿಗೆ ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಒದಗಿಸುವ ಮಾತುಗಳೂ ಕೇಳಿ ಬರುತ್ತಿವೆ. ನಮ್ಮ ಪ್ರಕೃತಿದತ್ತ ನೀರನ್ನು ಬೇರೆಡೆಗೆ ಹಾಯಿಸಿ ನಮಗೆ ಉಪ್ಪು ನೀರನ್ನು ಸಂಸ್ಕರಿಸಿ ನೀಡುವುದು ಅರ್ಥವಿಲ್ಲದ ಮಾತು ಎಂದು ವಿಜಯಕುಮಾರ್ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.
ಸಮಿತಿಯ ಪದಾಧಿಕಾರಿಗಳಾದ ಡಾ.ಅಣ್ಣಯ್ಯ ಕುಲಾಲ್, ಅರ್ಜಿದಾರ ಪುರುಷೋತ್ತಮ ಚಿತ್ರಾಪುರ, ಯೋಗೀಶ್ ಕುಮಾರ್ ಜೆಪ್ಪು, ಶಶಿರಾಜ್ ಕೊಳಂಬೆ, ತುಷಾರ್ ಕದ್ರಿ, ಪ್ರಶಾಂತ್, ಶಶಿರಾಜ್ ಕಾವೂರು ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Comments are closed.