ಕರ್ನಾಟಕ

ಕನ್ನಡ ಮಕ್ಕಳು ಬಾವಿ ಕಪ್ಪೆ ಹೇಳಿದವರೂ ಬಾವಿ ಕಪ್ಪೆ: ನ್ಯಾಯಾಧೀಶರಿಗೆ ಬರಗೂರು ತಿರುಗೇಟು

Pinterest LinkedIn Tumblr

kannadaಬೆಂಗಳೂರು, ಸೆ. ೧೦- ನೆಲ, ಜಲ ವಿಷಯದಲ್ಲಿ ಕನ್ನಡ ಹಾಗೂ ತೆಲುಗು ರಾಜ್ಯಗಳ ಜನರ ನಡುವೆ ಇರುವ ಸೌಹಾರ್ದತೆ ಪ್ರತಿಯೊಂದು ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರು ಇಂದು ಇಲ್ಲಿ ಅಭಿಪ್ರಾಯಪಟ್ಟರು.
ತೆಲುಗು ವಿಜ್ಞಾನ ಸಮಿತಿ ವತಿಯಿಂದ ಕೃಷ್ಣದೇವರಾಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಕನ್ನಡ, ತೆಲುಗು ಭಾಷಿಕರು ಯಾವತ್ತಿಗೂ ನೀರು ಹಾಗೂ ನೆಲದ ವಿಷಯವಾಗಿ ಎಂದೂ ಸಂಘರ್ಷಕ್ಕೆ ಇಳಿದಿಲ್ಲ ಎಂದರು.
ಶ್ರೀಕೃಷ್ಣದೇವರಾಯ ಕನ್ನಡ ಮತ್ತು ತೆಲುಗು ಭಾಷಿಕರಿಬ್ಬರಿಗೂ ಸೇರುತ್ತಾರೆ. ಎರಡೂ ರಾಜ್ಯಗಳಲ್ಲೂ ಈ ರಾಜ ಮಾದರಿಯಾಗಿ ನಿಲ್ಲುತ್ತಾನೆ ಎಂದರು.
ಸೌಹಾರ್ದತೆ, ಹೊಂದಾಣಿಕೆ ವಿಷಯ ಬಂದಾಗ ಎರಡೂ ರಾಜ್ಯಗಳ ಜನರು ಸಂವಿಧಾನಾತ್ಮಕ ಒಕ್ಕೂಟದ ಸಮಸ್ಯೆಗೆ ಮಾದರಿಯಾಗುತ್ತಾರೆ. ಕೃಷ್ಣದೇವರಾಯ ಎಂದಿಗೂ ನಮ್ಮವನು ಎಂದು ಕಚ್ಚಾಟ ನಡೆಸಿಲ್ಲ ಎಂದರು.
ಕನ್ನಡ ಕಲಿತವರೆಲ್ಲ ಬಾವಿ ಕಪ್ಪೆಗಳು ಎಂಬ ನ್ಯಾಯಾಧೀಶರೊಬ್ಬರ ಹೇಳಿಕೆಯನ್ನು ಪ್ರಸ್ತಾಪಿಸಿದ ಬರಗೂರು ರಾಮಚಂದ್ರಪ್ಪ, ಭಾರತದಲ್ಲಿ ಬಾವಿ ಕಪ್ಪೆಗಳಿಗೇನೂ ಬರವಿಲ್ಲ. ಹೇಳಿದವರು ಕೂಡ ಒಂದು ರೀತಿಯ ಬಾವಿ ಕಪ್ಪೆಗಳಿದ್ದಂತೆ ಎಂದರು.
ಮುಖ್ಯ ಅತಿಥಿಯಾಗಿದ್ದ ಆರೋಗ್ಯ ಸಚಿವ ಕೆ.ಆರ್ ರಮೇಶ್ ಕುಮಾರ್ ಮಾತನಾಡಿ, ಜಾತಿ, ಭಾಷೆಯಾಧಾರದಲ್ಲಿ ಮನುಷ್ಯ ಮನುಷ್ಯನ ನಡುವೆ ಗೋಟೆ ಕಟ್ಟುವುದು ಉತ್ತಮ ಬೆಳವಣಿಗೆಯಲ್ಲ ಎಂದರು.
ಒಬ್ಬ ವ್ಯಕ್ತಿ ಜೀವನದಲ್ಲಿ ಏನು ಮಾಡುತ್ತಾನೋ ಅದು ಮುಖ್ಯವಲ್ಲ ಎಂದ ಅವರು, ಶ್ರೀಕೃಷ್ಣದೇವರಾಯ ಉತ್ತಮ ವ್ಯಕ್ತಿಯಾಗಿದ್ದಾನೆ. ಅದರಿಂದಲೇ ಅಮರ ಸ್ಥಾನದಲ್ಲಿ ನಿಲ್ಲುತ್ತಾನೆ ಎಂದರು.
ಈ ಸಂದರ್ಭದಲ್ಲಿ ಪದ್ಮಭೂಷಣ ಡಾ. ಯಾಱ್ಲಗಡ್ಡ ಲಕ್ಷ್ಮಿಪ್ರಸಾದ, ಬಹುಭಾಷಾ ನಟಿ ಡಾ. ಜಯಪ್ರದಾ, ಚಿತ್ರನಟ ಸಾಯಿಕುಮಾರ್ ಅವರಿಗೆ ಶ್ರೀಕೃಷ್ಣದೇವರಾಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ತೆಲುಗು ವಿಜ್ಞಾನ ಸಮಿತಿ ಅಧ್ಯಕ್ಷ ಡಾ. ಎ. ರಾಧಾಕೃಷ್ಣರಾಜು ಸ್ವಾಗತಿಸಿದರು. ತೆಲುಗು ವಿಜ್ಞಾನ ಸಮಿತಿ ವಿದ್ಯಾಟ್ರಸ್ಟ್‌ನ ಅಧ್ಯಕ್ಷ ಕೆ. ಮುನಿಸ್ವಾಮಿ ರಾಜು, ಪ್ರಧಾನ ಕಾರ್ಯದರ್ಶಿ ಎ.ಕೆ. ಜಯಚಂದ್ರಾರೆಡ್ಡಿ, ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ, ಪಾಲಿಕೆ ಸದಸ್ಯ ಜಿ. ಮಂಜುನಾಥ ರಾಜು ಉಪಸ್ಥಿತರಿದ್ದರು.
ರಾಜ್ಯಸಭಾ ಸದಸ್ಯ ಡಾ. ಸಿ. ಸುಬ್ಬರಾಮೆರೆಡ್ಡಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವೇಳೆ ಶ್ರೀಕೃಷ್ಣದೇವರಾಯ ಕಲಾಮಂದಿರ ಹಾಗೂ ಡಾ. ಟಿ. ಸುಬ್ಬರಾಮರೆಡ್ಡಿ ಕಲಾವೇದಿಕೆಯನ್ನು ಉದ್ಘಾಟಿಸಿದರು.

Comments are closed.