ನವದೆಹಲಿ (ಪಿಟಿಐ): ವಿವಿಧ ಚುನಾವಣೆಗಳ ಸ್ಪರ್ಧೆ ವೇಳೆ ಪದವಿ ವಿದ್ಯಾರ್ಹತೆ ಬಗ್ಗೆ ಸುಳ್ಳು ಮಾಹಿತಿ ಪ್ರಮಾಣಪತ್ರ ಸಲ್ಲಿಕೆ ಆರೋಪದ ಮೇಲೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ದಾಖಲಾಗಿದ್ದ ದೂರಿನ ತೀರ್ಪನ್ನು ದೆಹಲಿ ಕೋರ್ಟ್ ಕಾಯ್ದಿರಿಸಿದೆ.
ದೂರುದಾರ ಮತ್ತು ಲೇಖಕ ಅಮೀರ್ ಖಾನ್ ಅವರ ವಾದ ಆಲಿಸಿದ ಬಳಿಕ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ವಿಂದರ್ ಸಿಂಗ್ ಅವರು ಸೆ. 15ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದಾರೆ. ಇರಾನಿ ಅವರ ಶೈಕ್ಷಣಿಕ ಪದವಿ ಬಗ್ಗೆ ಚುನಾವಣಾ ಆಯೋಗ ಮತ್ತು ದೆಹಲಿ ವಿಶ್ವವಿದ್ಯಾಲಯ ಸಲ್ಲಿಸಿದ ವರದಿಗಳ ಆಧಾರದ ಮೇಲೆ ತೀರ್ಪು ಹೊರಬೀಳಲಿದೆ.
ಚುನಾವಣೆ ವೇಳೆ ಸ್ಮೃತಿ ಇರಾನಿ ಅವರು ನೀಡಿದ್ದ ದಾಖಲಾತಿಗಳನ್ನು ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಕೋರ್ಟ್ ಈ ಹಿಂದೆಯೇ ಹೇಳಿತ್ತು. ಆದರೆ, ಈ ಮಾಹಿತಿಯು ತನ್ನ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಚುನಾವಣಾ ಆಯೋಗ ಹೇಳಿತ್ತು. ಅಲ್ಲದೇ ಕೋರ್ಟ್ ಸೂಚನೆಯಂತೆ ದೆಹಲಿ ವಿವಿಯು 1996ರಲ್ಲಿ ಇರಾನಿ ಅವರು ಪಡೆದ ಬಿಎ ಪದವಿ ಸಂಬಂಧಿತ ದಾಖಲೆಗಳನ್ನು ಸಲ್ಲಿಸಿತ್ತು.
ಉದ್ದೇಶಪೂರ್ವಕವಾಗಿಯೇ ಇರಾನಿ ಅವರು 2004, 2011, 2014ರಲ್ಲಿ ಚುನಾವಣೆಗಳಲ್ಲಿ ಹೊಂದಾಣಿಕೆ ಇಲ್ಲದ ಶೈಕ್ಷಣಿಕ ಅರ್ಹತೆಯ ಮಾಹಿತಿಯನ್ನು ಆಯೋಗಕ್ಕೆ ನೀಡಿದ್ದಾರೆ. ಜತೆಗೆ ಈ ಬಗ್ಗೆ ವಿವಾದ ಭುಗಿಲೆದ್ದ ಬಳಿಕವೂ ಯಾವುದೇ ಸ್ಪಷ್ಟೀಕರಣಕ್ಕೆ ಅವರು ಮುಂದಾಗಿಲ್ಲ ಎಂದು ದೂರುದಾರ ಅಮೀರ್ ಖಾನ್ ಹೇಳಿದರು.
Comments are closed.