ಕರಾವಳಿ

ತಂತ್ರ ವಿದ್ಯೆ ಕಲಿಯಲು “ಮಾಯೋಂಗ್ ಸೆಂಟ್ರಲ್ ಮ್ಯೂಸಿಯಂ”

Pinterest LinkedIn Tumblr

Mayong_Central_Museum

ಕಾಲಾಜಾದೂ ಅಥವಾ ತಂತ್ರವಿದ್ಯೆಯ ಬಗ್ಗೆ ಭಾರತದ ಪ್ರತಿ ಊರಿನಲ್ಲಿಯೂ ಹಲವಾರು ಕಥೆಗಳು ಧಾರಾಳವಾಗಿ ಸಿಗುತ್ತವೆ. ಆದರೆ ಈ ವಿದ್ಯೆಯನ್ನು ಸಾಧಿಸಿ ಇದರ ಪ್ರಯೋಗ ಮಾಡುವವರು ಮಾತ್ರ ಎಲ್ಲಾ ಊರುಗಳಲ್ಲಿ ಸಿಗಲಾರರು. ಈ ತಂತ್ರವನ್ನು ಬಲ್ಲವರು ಒಳಿತಿಗಿಂತಲೂ ಕೆಡುಕಿಗೇ ಈ ವಿದ್ಯೆಯನ್ನು ಬಳಸಿ ಅಪಾರ ಸಾವು ನೋವಿಗೆ ಕಾರಣವಾಗಿರುವ ಕಾರಣ ತಂತ್ರವಿದ್ಯೆ ಕಪ್ಪು ವಿದ್ಯೆ ಅಥವಾ ಕಾಲಾಜಾದೂ ಎಂಬ ಅನ್ವರ್ಥನಾಮವನ್ನೇ ಪಡೆದುಕೊಂಡಿದೆ.

ಬೊಂಬೆಯನ್ನು ಮಂತ್ರಿಸಿ ವ್ಯಕ್ತಿಯೊಬ್ಬರ ಆತ್ಮಕ್ಕೆ ಲಗ್ಗೆಯಿಟ್ಟು ಬೊಂಬೆಗೆ ಸೂಜಿ ಚುಚ್ಚುವ ಮೂಲಕ ಆ ವ್ಯಕ್ತಿಗೆ ನೋವು ನೀಡುವಂತಹ ಕಥೆಗಳಂತೂ ಬೆನ್ನುಹುರಿಯಲ್ಲಿ ಛಳಕು ಹುಟ್ಟಿಸುತ್ತವೆ.

ಅದರಲ್ಲೂ ಈ ಅನುಭವಕ್ಕೆ ಒಳಗಾದವರು ತಮ್ಮ ಅನುಭವಗಳನ್ನು ಹೇಳುತ್ತಾ ಹೋದಂತೆಯೇ ಭಯ ಮತ್ತು ವಿಸ್ಮಯಗಳೆರಡೂ ಏಕಕಾಲಕ್ಕೆ ಉಂಟಾಗುತ್ತವೆ.ಕಾಲಾಜಾದೂವಿಗೆ ಕುಪ್ರಸಿದ್ಧವಾದ ದೇಶವೆಂದರೆ ಬಾಂಗ್ಲಾದೇಶ. ಆದರೆ ಭಾರತದಲ್ಲಿಯೂ ಈ ವಿದ್ಯೆಯನ್ನು ಅಭ್ಯಸಿಸುವವರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ ಈ ವಿದ್ಯೆಯನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯಸಿಸುವವರ ಗ್ರಾಮವೊಂದು ಮಾತ್ರ ಭಾರತದಲ್ಲಿದೆ. ಇದೇ ಕಾರಣಕ್ಕೆ ಈ ಗ್ರಾಮವನ್ನು ಭಾರತದ ಕಾಲಾಜಾದುವಿನ ರಾಜಧಾನಿ ಎಂದೂ ಕರೆಯುತ್ತಾರೆ.

ಈ ಗ್ರಾಮದಲ್ಲಿ ದಂತಕಥೆಗಳೂ, ವಿಚಿತ್ರ ಆಚರಣೆಗಳೂ ಅಪಾರ ಪ್ರಮಾಣದಲ್ಲಿ ಚಲಾವಣೆಯಲ್ಲಿದ್ದು ಪ್ರತಿದಿನವೂ ಕಾಲಾಜಾದೂವಿನ ಚಟುವಟಿಕೆ ನಡೆಯುತ್ತಲೇ ಇರುತ್ತದೆ. ಅಮವಾಸ್ಯೆ ಹುಣ್ಣಿಮೆಗಳಲ್ಲಿ ಮತ್ತು ಕೆಲವು ವಿಶೇಷ ದಿನಗಳಲ್ಲಿ ಈ ಚಟುವಟಿಕೆಗಳು ತಾರಕಕ್ಕೇರುತ್ತವೆ. ಅಷ್ಟಕ್ಕೂ ಈ ಗ್ರಾಮ ಯಾವುದು ಎಂದು ಇದುವರೆಗೆ ನೆನಪಿಗೆ ಬರಲಿಲ್ಲವೇ? ಅದೇ ಅಸ್ಸಾಂ ರಾಜ್ಯದಲ್ಲಿರುವ ‘ಮಾಯೋಂಗ್’ ಗ್ರಾಮ. ಬನ್ನಿ, ಈ ಗ್ರಾಮದ ಬಗ್ಗೆ ಕೊಂಚ ತಿಳಿದುಕೊಳ್ಳೋಣ…..

‘ಮಾಯೋಂಗ್’ ಎಂಬ ಹೆಸರು ಮಾಯಾ ಅಥವಾ ಮಾಯೆಯಿಂದ ಬಂದಿದೆ. ಇಲ್ಲಿ ನಡೆಸುವ ಚಟುವಟಿಕೆಗಳೆಲ್ಲಾ ಒಂದು ರೀತಿಯ ಮಾಯೆಯೇ ಆಗಿರುವುದರಿಂದ ಸ್ಥಳೀಯವಾಗಿ ಮಾಯೆಯ ಗ್ರಾಮ ಎಂಬ ಹೆಸರೇ ಉಳಿದುಬಂದಿದೆ.

Mayong_Central_Museum1

ನಮ್ಮಲ್ಲಿ ದೀಪಾವಳಿ ಇದ್ದಂತೆ ಈ ಗ್ರಾಮದಲ್ಲಿ ವರ್ಷದಲ್ಲೊಂದು ಅವಧಿಯಲ್ಲಿ ಮೂರು ದಿನಗಳ ಮಾಯಾ ಉತ್ಸವ .ಅಷ್ಟು ಮಾತ್ರವಲ್ಲ, ಈ ಮೂರೂ ದಿನಗಳಲ್ಲಿ ಇಡಿಯ ಗ್ರಾಮದಲ್ಲಿ ಈ ವಿದ್ಯೆಯನ್ನು ಅಭ್ಯಸಿಸುವ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡು ಈ ಗ್ರಾಮ ಏಕಾಗಿ ಪ್ರಸಿದ್ಧಿಗೊಂಡಿದೆ ಎಂಬ ಪ್ರಶ್ನೆಗೆ ಉತ್ತರ ನೀಡುತ್ತಾರೆ.

ತಂತ್ರವಿದ್ಯೆ ಎಂದರೆ ಒಳ್ಳೆಯ ವಿದ್ಯೆಯಲ್ಲ, ಇದನ್ನು ಕೇವಲ ಸೈತಾನನ ಆರಾಧಕರು ಮಾತ್ರ ಅಭ್ಯಸಿಸುತ್ತಾರೆ ಎಂಬ ಅಭಿಪ್ರಾಯ ನೀವು ಹೊಂದಿದ್ದರೆ ಬದಲಿಸಿಕೊಳ್ಳುವುದು ಒಳಿತು. ಏಕೆಂದರೆ ಈ ವಿದ್ಯೆಯನ್ನು ಕಲಿಯಲೆಂದೇ ದೇಶ ವಿದೇಶಗಳಿಂದ ಆಸಕ್ತರು ವಿದ್ಯಾರ್ಥಿಗಳಾಗಿ ಇಲ್ಲಿ ಬರುತ್ತಾರೆ. ಹೀಗೆ ಬಂದು ಅಭ್ಯಸಿಸುತ್ತಿರುವವರ ಸಂಖ್ಯೆ ನೋಡಿದರೆ ಅಚ್ಚರಿಯಾಗುವುದು ಸಹಜ.

2002 ರಲ್ಲಿ ಈ ಗ್ರಾಮದಲ್ಲೊಂದು ಮ್ಯೂಸಿಯಂ ಒಂದನ್ನು ಸ್ಥಾಪಿಸಲಾಗಿದ್ದು ಇದರಲ್ಲಿ ತಂತ್ರವಿದ್ಯೆಗೆ ಸಂಬಂಧಿಸಿದ ಹಲವಾರು ಪುಸ್ತಕಗಳು, ಮಹಾಗ್ರಂಥಗಳು, ಬಹಳ ವರ್ಷ ಹಿಂದಿನ ತಂತ್ರವಿದ್ಯೆಗೆ ಸಂಬಂಧಿಸಿದ ತಾಳೆಗರಿ ಮತ್ತಿತರ ಮಾಹಿತಿಗಳನ್ನು ಸಂಗ್ರಹಿಸಲಾಗಿದ್ದು ಕಾಲಾಜಾದೂ ಕಲಿಯುವವರಿಗೆ ಹೆಚ್ಚಿನ ಪ್ರೇರಣೆ ನೀಡುತ್ತದೆ.

Mayong_Central_Museum2

Mayong Central Museum ಎಂಬ ಈ ಮ್ಯೂಸಿಯಂನಲ್ಲಿ ತಂತ್ರವಿದ್ಯೆಗೆ ಬಳಸಲಾಗುವ ನೂರಾರು ವಸ್ತುಗಳು, ಅಸ್ಥಿಪಂಜರ ಮೊದಲಾದವುಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕಿಡಲಾಗಿದೆ.

ಈ ಗ್ರಾಮದಲ್ಲಿ ನೂರಾರು ಜನರು ತಂತ್ರವಿದ್ಯೆಯನ್ನು ಅಭ್ಯಸಿಸಿದರೂ ಒಂದು ಹಂತದಲ್ಲಿ ತಾಂತ್ರಿಕನಾಗಿ ಬೆಳದುನಿಂತರೂ ಯಾವುದೇ ಪದವಿಪತ್ರ ದೊರಕುವುದಿಲ್ಲ. ತಾಂತ್ರಿಕ ಕೇವಲ ತನ್ನ ಸಾಮರ್ಥ್ಯದಿಂದಲೇ ಹಲವಾರು ಪಟ್ಟುಗಳನ್ನು ಸಾಧಿಸಿ ತೋರಿಸಿದ ಬಳಿಕವೇ ಈತನಿಗೆ ‘ಬೇಝ್’ ಅಥವಾ ‘ಓಝಾ’ ಎಂಬ ಪಟ್ಟ ದೊರಕುತ್ತದೆ.

ಈ ಪಟ್ಟ ಪಡೆಯುವವರು ತಮ್ಮ ಸಾಮರ್ಥ್ಯದಿಂದ ಕೆಲವು ಭೂತ ಪಿಶಾಚಿಗಳನ್ನು ತಮ್ಮ ಗುಲಾಮರನ್ನಾಗಿಸಿಕೊಂಡು ತಮ್ಮ ಕೆಲಸ ಸಾಧಿಸಿಕೊಳ್ಳುತ್ತಾರೆ ಎಂದು ನಂಬಲಾಗಿದೆ. ಈ ಲೇಖನ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯಲು ಒಂದು ಪಿಶಾಚಿಯನ್ನು ಪಳಗಿಸಿದರೆ ಹೇಗೆ ಎಂದು ಖಂಡಿತಾ ಯೋಚಿಸಬಾರದಾಗಿ ವಿನಂತಿ.

Comments are closed.