
‘ಮಡಮಕ್ಕಿ’
ನಿರ್ಮಾಪಕ: ಶಿವಣ್ಣ ದಾಸನಪುರ
ನಿರ್ದೇಶಕ: ವಿನಯ್ ಪ್ರೀತಂ
ತಾರಾಗಣ: ತನುಷ್, ನಿಖಿತಾ ನಾರಾಯಣ್, ಸಾಯಿಕುಮಾರ್, ತಾರಾ
ಬಂದೂಕು ಹಿಡಿದು ಗುಂಡು ಹಾರಿಸಲು ಸಿದ್ಧನಾದವನ ಮನಸ್ಥಿತಿಗೂ ಅದು ಎದೆಗೆ ಚುಚ್ಚಿದಾಗ ಅನುಭವಿಸುವ ನಡುಕಕ್ಕೂ ಇರುವ ವ್ಯತ್ಯಾಸವೇನು? ಎರಡರ ಅಂತಿಮ ಪರಿಣಾಮ ಸಾವು ಎಂಬುದೇ ಆಗಿದ್ದರೂ ಸಾಯಲು ಸಿದ್ಧನಾದ ವ್ಯಕ್ತಿ ಯಾರೆಂಬುದರ ಮೇಲೆ ಆ ‘ಕೊಲೆ’ಗೊಂದು ಬೆಲೆ ಬರುತ್ತದೆ! ಹತ್ತಾರು ಜನರನ್ನು ಹತ್ಯೆ ಮಾಡಿದ ಭೂಗತ ಲೋಕದ ಡಾನ್ ಪೊಲೀಸರ ಕೈಗೆ ಸಿಕ್ಕುಬಿದ್ದಾಗ ಆತನ ಹತ್ಯೆಯನ್ನು (ಪೊಲೀಸ್ ಭಾಷೆಯಲ್ಲಿ ಎನ್‌ಕೌಂಟರ್) ಹೇಗೆ ವಿಶ್ಲೇಷಿಸಬಹುದು? ಪೊಲೀಸ್ ಲೋಕದ ಮಟ್ಟಿಗೆ ಅದು ಅನಿವಾರ್ಯ; ಆದರೆ ಆತನ ಹೃದಯದ ಮಾತಿಗೆ ಬೆಲೆ ಕೊಡಬಾರದೇ?
ವಿನಯ್ ಪ್ರೀತಂ ನಿರ್ದೇಶನದ ‘ಮಡಮಕ್ಕಿ’ ಚಿತ್ರದಲ್ಲಿ ಆರಂಭದಿಂದ ಅಂತ್ಯದವರೆಗೂ ಈ ಪ್ರಶ್ನೆ ಪದೇ ಪದೇ ತಾಕುತ್ತಲೇ ಸಾಗುತ್ತದೆ. ಮುಂಬೈನ ಭೂಗತಲೋಕ ಇಲ್ಲಿ ನೆಪಕ್ಕಷ್ಟೇ. ಅದರ ನೆಪದಲ್ಲಿ ಸುಪಾರಿ ಕೊಲೆಗಾರರು ಹಾಗೂ ಪೊಲೀಸರ ಕಣ್ಣಾಮುಚ್ಚಾಲೆಯನ್ನು ಕಳೆಗಟ್ಟುವಂತೆ ಪ್ರೀತಂ ಕಟ್ಟಿಕೊಟ್ಟಿದ್ದಾರೆ. ಭೂಗತ ಜಗತ್ತನ್ನು ವೈಭವೀಕರಿಸುವ ಪ್ರಯತ್ನವನ್ನೇನೂ ಮಾಡದೇ, ಅದರಿಂದ ಒಂದೇ ಒಂದು ಎಳೆಯನ್ನು ಹಿಡಿದು ನಿರ್ದೇಶಕರು ಕಥೆ ಹೆಣೆದಿದ್ದಾರೆ. ಚೌಕಟ್ಟಿನಿಂದ ಎಲ್ಲೂ ಅತ್ತಿತ್ತ ಸರಿದಾಡದಂತೆ ಬಿಗಿಯಾಗಿರುವ ನಿರೂಪಣೆಯೇ ಸಿನಿಮಾದ ಹೆಗ್ಗಳಿಕೆ.
ಸುಪಾರಿ ಕಿಲ್ಲರ್ ಸಾಧು ಹಾಗೂ ಆತನನ್ನು ಬೆನ್ನಟ್ಟುವ ಈ ರೋಚಕ ಕಥಾನಕದಲ್ಲಿ ಆ್ಯಕ್ಷನ್ ಇದೆ; ಭಾವನೆಗಳ ಪ್ರವಾಹ ಕೂಡ ಬೆರೆತಿದೆ. ಎರಡನ್ನೂ ಪ್ರತ್ಯೇಕವಾಗಿ ತೋರಿಸದೇ ಅಲ್ಲಲ್ಲಿ ಕೊಲಾಜ್‌ನಂತೆ ಚಿತ್ರಿಸಿರುವ ಪರಿ ಗಮನ ಸೆಳೆಯುತ್ತದೆ. ಬಾಲ್ಯದಲ್ಲಿ ಮಾಡದ ತಪ್ಪಿನಿಂದಾಗಿ ಊರಿನಿಂದ ಪರಾರಿಯಾಗುವ ಆತ ಭೂಗತ ಲೋಕದ ಡಾನ್ ಸುಲ್ತಾನ್ ಗುಂಪಿಗೆ ಸೇರುತ್ತಾನೆ. ಕೈಯಲ್ಲಿ ಪಿಸ್ತೂಲು ತಿರುಗಿಸುತ್ತ ಸುಲ್ತಾನ್ ಹೇಳಿದವರನ್ನು ಮೇಲಕ್ಕೆ ಕಳಿಸುವುದಷ್ಟೇ ಆತನ ಕೆಲಸ. ಸುಲ್ತಾನನನ್ನು ಪೊಲೀಸರು ಹತ್ಯೆ ಮಾಡಿದಾಗ ಆತನ ತಾಯಿ ರೋದಿಸುವುದನ್ನು ಕಂಡು ಸಾಧುಗೆ ತನ್ನ ತಾಯಿಯ ನೆನಪಾಗುತ್ತದೆ. ಆಕೆಯನ್ನು ಭೇಟಿಯಾಗಲು ಮಂಗಳೂರು ಬಳಿಯ ಮಡಮಕ್ಕಿಗೆ ಬರುವವನನ್ನು ಬೇಟೆಯಾಡಲು ಪೊಲೀಸ್ ಅಧಿಕಾರಿ ಶಿವಶಂಕರ್ ಹಿಂದೆಯೇ ಬರುತ್ತಾನೆ. ಇಬ್ಬರ ಹೋರಾಟದಲ್ಲಿ ಗೆಲ್ಲುವವರು ಯಾರು?
ಹೆಸರಿಗಷ್ಟೇ ನಾಯಕ–ನಾಯಕಿ ಇರುವ ‘ಮಡಮಕ್ಕಿ’ ಸಂಪೂರ್ಣವಾಗಿ ನಿರ್ದೇಶಕನ ಸಿನಿಮಾ. ಸೊಳ್ಳೆ ಹೊಸಕಿ ಹಾಕುವಷ್ಟು ಸುಲಭವಾಗಿ ಎನ್‌ಕೌಂಟರ್ ಮಾಡುವ ಶಿವಶಂಕರ್ ಹಾಗೂ ಅಮ್ಮನ ಪ್ರೇಮದ ಪ್ರತೀಕವಾದ ರತ್ನಮ್ಮ ಪಾತ್ರಗಳ ಮೂಲಕ ಸಾಯಿಕುಮಾರ್ ಹಾಗೂ ತಾರಾ ಇಡೀ ಚಿತ್ರವನ್ನು ‘ಹೈಜಾಕ್’ ಮಾಡಿಬಿಡುತ್ತಾರೆ!
ಪ್ರೇಕ್ಷಕರಲ್ಲಿ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ ಕ್ಲೈಮ್ಯಾಕ್ಸ್ ಭೇಷ್ ಎನ್ನುವಂತಿದೆ. ನಾಲ್ಕು ಹಾಡುಗಳು (ಸಂಗೀತ: ಅನೂಪ್ ಸೀಳಿನ್) ಹೊರೆ ಅನಿಸದೇ, ಕಥೆಯ ಓಟಕ್ಕೆ ಪೂರಕವಾಗಿ ಸಾಗುತ್ತವೆ. ಮಲೆನಾಡನ್ನೂ ಮುಂಬೈ ನೋಟವನ್ನೂ ಕಿರಣ್ ಹಂಪಾಪುರ ಕ್ಯಾಮೆರಾ ಚೆನ್ನಾಗಿ ಸೆರೆಹಿಡಿದಿದೆ. ನಾಯಕ ತನುಷ್‌ಗಿಂತ ನಾಯಕಿ ನಿಖಿತಾ ಅಭಿನಯವೇ ಚೆಂದ.
ಕೊಂಚಕೊಂಚವೇ ನಿಗೂಢತೆಯನ್ನು ಬಿಟ್ಟುಕೊಡುತ್ತ ಮುಂದೆ ಚಲಿಸುವ ಚಿತ್ರದಲ್ಲಿ ಫ್ಲ್ಯಾಶ್‌ಬ್ಯಾಕ್ ತಂತ್ರವನ್ನು ಹಿತಮಿತ ಎಂಬಷ್ಟು ಬಳಸಲಾಗಿದೆ. ಕಥೆಯ ಮಟ್ಟಿಗೆ ಇದರಲ್ಲೇನೂ ತೀರಾ ವಿಶೇಷ ಅಥವಾ ಹೊಸತನವಿಲ್ಲ. ಭೂಗತ ಲೋಕ ಬಿಟ್ಟು ತಾಯಿ ನೋಡಲು ಊರಿಗೆ ಬರುವ ಯುವಕನನ್ನು ಒಂದೇ ಒಂದು ಗುಂಡು ಮುಗಿಸಿಹಾಕುತ್ತದೆ. ಆದರೆ, ಆ ಗುಂಡು ಯಾರ ಬಂದೂಕಿನಿಂದ ಸಿಡಿದಿದ್ದು ಎಂಬುದನ್ನು ಹೇಳುವ ಬಗೆಯಲ್ಲಿ ನಿರ್ದೇಶಕ ಪ್ರೀತಂ ಕೌಶಲವಂತೂ ಎದ್ದು ಕಾಣುವಂತಿದೆ.
Comments are closed.