*ಯೋಗೀಶ್ ಕುಂಭಾಸಿ
ಕುಂದಾಪುರ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದ ಹಲವು ಮಹಾನ್ ನಾಯಕರ ತ್ಯಾಗ ಹಾಗೂ ಬಲಿದಾನಗಳನ್ನು ಸ್ಮರಿಸುವ ಮೂಲಕ ಅವರು ಹಾಕಿಕೊಟ್ಟ ಉತ್ತಮ ಹೆಜ್ಜೆಯಲ್ಲಿ ನಾವು ಸಾಗಬೇಕು ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ಎಸ್. ಅಶ್ವಥಿ ಹೇಳಿದರು.
ಅವರು ಇಲ್ಲಿನ ಗಾಂಧಿ ಮೈದಾನದಲ್ಲಿ ಸೋಮವಾರ ನಡೆದ 70ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಇಡೀ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಷ್ಟರ ಮಟ್ಟಿಗೆ ದೇಶ ಅಭಿವೃದ್ದಿಯಲ್ಲಿ ದಾಪುಗಾಲಿಡುತ್ತಿದೆ. ದೇಶವಾಸಿಗಳ ಅಭಿವೃದ್ದಿಯ ಚಿಂತನೆಯಲ್ಲಿ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳು ನಮ್ಮ ಸಮಾಜದ ಕಟ್ಟಕಡೆಯ ಜನರಿಗೂ ತಲುಪಬೇಕು ಎನ್ನುವುದೆ ಸ್ವಾತಂತ್ರ್ಯದ ಪರಮ ಗುರಿಯಾಗಿದ್ದು ಸರ್ಕಾರದ ಪರಿಣಾಮಕಾರಿ ಜನಪರ ಯೋಜನೆಗಳನ್ನು ಜನರು ಸದುಪಯೋಗ ಪಡಿಸಿಕೊಂಡಾಗ ಮಾತ್ರ ಯೋಜನೆಯ ಜಾರಿಯ ಉದ್ದೇಶಗಳು ಸಾರ್ಥಕತೆ ಪಡೆಯಲು ಸಾಧ್ಯ. ಗ್ರಾಮಮಟ್ಟದಲ್ಲಿ ಪಹಣಿ ಪತ್ರ ವಿತರಣೆ ಸೇರಿದಂತೆ ವಿವಿಧ 39 ಸೇವೆಗಳನ್ನು ಗ್ರಾಮಪಂಚಾಯತಿಯಲ್ಲಿಯೇ ಪಡೆಯುವ ಸಲುವಾಗಿ ಬಾಪೂಜಿ ಸೇವಾಕೇಂದ್ರ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು ಇದೊಂದು ಮಹತ್ವದ ಅಧಿಕಾರ ವಿಕೇಂಧ್ರೀಕರಣ ಎಂದು ಬಣ್ಣಿಸಬಹುದಾಗಿದೆ. ಜನರು ಕೇವಲ ಸರಕಾರದ ಕಾರ್ಯಕ್ರಮಗಳನ್ನು ಮಾತ್ರವೇ ಅವಲಂಭಿಸದೇ ನಾವೇ ಪ್ರಗತಿಯ ರುವಾರಿಗಳಾಗಬೇಕಿದೆ. ಪ್ರತಿಯೊಬ್ಬ ನಾಗರೀಕನು ತಮ್ಮತಮ್ಮ ಕಾರ್ಯಕ್ಷೇತ್ರದಲ್ಲಿ ಸೇವಾಮನೋಭಾವನೆಯಿಂದ ಕೆಲಸ ಮಾಡಿದರೇ ದೇಶವು ವಿಶ್ವದಲ್ಲಿಯೇ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಕರೆಕೊಟ್ಟರು.
ಕುಂದಾಪುರ ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗವೀರ, ಪುರಸಭೆ ಅಧ್ಯಕ್ಷೆ ವಸಂತಿ ಸಾರಂಗ್, ಕುಂದಾಪುರ ಡಿವೈಎಸ್ಪಿ ಪ್ರವೀಣ್ ಹೆಚ್. ನಾಯಕ್, ತಹಶಿಲ್ದಾರ್ ಕಿರಣ್ ಗೌರಯ್ಯ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸರ್ವ ಸದಸ್ಯರು, ತಾ.ಪಂ. ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

ಬಿಗಿ ಭದ್ರತೆ: ಕುಂದಾಪುರದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಧ್ವಜಾರೋಹಣ ಕಾರ್ಯಕ್ರಮ ನಡೆದ ಗಾಂಧೀಮೈದಾನ ಪ್ರವೇಶಿಸುವ ಮುಖ್ವದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿತ್ತು. ಅಲ್ಲದೇ ಮೈದಾನವನ್ನು ಕೇಂದ್ರೀಕರಿಸಿಕೊಂಡು ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿತ್ತು.
Comments are closed.