
ಕೋಲಾರ: ಅಸ್ಸಾಂ ಬೋಡೋ ಉಗ್ರರು ಕೊಕ್ರಜ್ಹಾರ್ನಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಹುತಾತ್ಮರಾದ ರಾಜ್ಯದ ಯೋಧ ರಾಜೇಶ್ ಹುಟ್ಟೂರು ಕೋಲಾರ ತಾಲೂಕಿನ ಕಿತ್ತಂಡೂರಿನಲ್ಲಿ ಸೂತಕದ ವಾತಾವರಣವಿದ್ದು, ಕುಟುಂಬಸ್ತರು ರಾಜೇಶ್ ಮನೆ ಬಳಿ ಸೇರಿದ್ದಾರೆ.
ಗ್ರಾಮಸ್ಥರಲ್ಲಿ ದುಃಖ ಮಡುಗಟ್ಟಿದ್ದು, ಎಲ್ಲರೂ ರಾಜೇಶ್ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ತಾಯಿ ಮತ್ತು ಸೋದರನ ರೋಧನೆಗೆ ಎಲ್ಲರೂ ಕಣ್ಣೀರಿಡುತ್ತಿದ್ದಾರೆ. ಬಡ ಕುಟುಂಬದ ರಾಜೇಶ್ ಅಕಾಲಿಕ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿಯುತ್ತಿದ್ದಾರೆ.
ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಸೂಚನೆ ಮೇಲೆ ಗ್ರಾಮಕ್ಕೆ ಧಾವಿಸಿದ ಜಿಲ್ಲಾಧಿಕಾರಿ ತ್ರಿಲೋಕಚಂದ್ರ ಮತ್ತು ಜಿಲ್ಲಾ ರಕ್ಷಣಾಧಿಕಾರಿ ದಿವ್ಯ ಗೋಪಿನಾಥ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದೆ. ಮಧ್ಯಾಹ್ನ ವೇಳೆ ಉಸ್ತುವಾರಿ ಸಚಿವ ರಮೇಶ್ ಕುಮಾರ್ ಅವರು ಗ್ರಾಮಕ್ಕೆ ಆಗಮಿಸಲಿದ್ದಾರೆ. ಮೃತ ರಾಜೇಶ್ ಶರೀರ ಸಂಜೆ ವೇಳೆಗೆ ಆಗಮಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
Comments are closed.