ನವದೆಹಲಿ: ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ರಾಜೀನಾಮೆ ನಂತರ ತೆರವಾಗಿರುವ ಸ್ಥಾನಕ್ಕೆ ಗುಜರಾತ್ ಕ್ಯಾಬಿನೆಟ್ ಸಚಿವ ನಿತಿನ್ಭಾಯ್ ಪಟೇಲ್ ನಿಯೋಜನೆಗೊಳ್ಳುತ್ತಾರೆ ಎನ್ನುವ ಸುದ್ದಿ ರಾಜ್ಯಾದ್ಯಂತ ಹರಿದಾಡುತ್ತಿದೆ.
ನಿತಿನ್ ಸದ್ಯ ನಗರಾಭಿವೃದ್ಧಿ ಮತ್ತು ಜಲ ಸಂಪನ್ಮೂಲ ಖಾತೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದು, 2012 ರ ವಿಧಾನಸಭೆ ಚುನಾವಣೆಯಲ್ಲಿ ಮೆಹಸನಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಆನಂದಿ ಬೆನ್ ನಂತರ ಗುಜರಾತ್ ಸರ್ಕಾರದ ಎರಡನೇ ದಂಡಾಧಿಕಾರಿಯಾಗಿ ಹುದ್ದೆ ನಿಭಾಯಿಸುತ್ತಿದ್ದ ನಿತಿನ್ ಅವರಿಗೆ ಬಿಜೆಪಿ ಮುಖ್ಯಮಂತ್ರಿಯಾಗಿ ಮಣೆ ಹಾಕುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳುತ್ತಿವೆ.
ಗುಜರಾತ್ ಚುನಾವಣೆಗೆ ಒಂದು ವರ್ಷ ಬಾಕಿ ಇರುವಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆನಂದಿ ಬೆನ್ ಪಟೇಲ್ ನವಂಬರ್ ತಿಂಗಳಲ್ಲಿ 75 ನೇ ವಸಂತಕ್ಕೆ ಕಾಲಿಡುತ್ತಿರುವುದರಿಂದ ಹಾಗೂ ಇತ್ತೀಚೆಗೆ ರಾಜ್ಯದಲ್ಲಿ ದಲಿತರ ಮೇಲೆ ನಡೆದ ಪ್ರಕರಣ ಮತ್ತು ಮೀಸಲಾತಿ ಹೋರಾಟ ನಡೆಸಿದ ಪಟೇಲ್ ಸಮುದಾಯದ ವಿಫಲ ಹೋರಾಟ ರಾಜೀನಾಮೆಗೆ ಕಾರಣಗಳು ಎಂದು ಬಿಂಬಿಸಲಾಗಿದೆ.
ಆದರೆ ಆನಂದಿ ಬೆನ್ ಪ್ರಕಾರ ಬಿಜೆಪಿಯ ಶ್ಲಾಘನೀಯ ಸಂಪ್ರದಾಯ ಪ್ರಕಾರ ಹೊಸಬರಿಗೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಉಕ್ಕಿನ ಮಹಿಳೆ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
ನಿತಿನ್ ಪಟೇಲ್ ಜತೆಗೆ ಸೌರಭ್ ಪಟೇಲ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯ್ಭಾಯ್ ಪಟೇಲ್ ಮತ್ತು ಕೇಂದ್ರ ಸಚಿವ ಪುರುಷೋತ್ತಮ ರೂಪಾಲ ಹೆಸರು ಕೂಡ ಕೇಳಿ ಬರುತ್ತಿದೆ.
Comments are closed.