ರಾಷ್ಟ್ರೀಯ

ಅತ್ಯಾಚಾರ ಪ್ರಕರಣ, ಸಚಿವ ಅಜಂ ಖಾನ್ ಅತಿರೇಕದ ಹೇಳಿಕೆ

Pinterest LinkedIn Tumblr

Azam-Kahn_webಲಖನೌ: ತಾಯಿ ಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ರಾಜಕೀಯ ಬಣ್ಣ ಬಳಿದಿರುವ ಉತ್ತರ ಪ್ರದೇಶ ಆಡಳಿತಾರೂಢ ಸಮಾಜವಾದಿ ಪಕ್ಷದ ಸಚಿವ ಅಜಂ ಖಾನ್ ಈ ಪ್ರಕರಣ ಮುಂಬರುವ ವಿಧಾನಸಭೆ ಚುನಾವಣೆಗೆ ಕೆಲ ಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳಬಹುದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಮುಖಂಡರು ಅತ್ಯಾಚಾರಕ್ಕೊಳಗಾದ ಕುಟುಂಬದ ಭೇಟಿಗೆ ಗಾಜಿಯಾಬಾದ್ನತ್ತ ಪ್ರಯಾಣ ಬೆಳೆಸಿದ್ದು, ಅತ್ಯಾಚಾರ ಪ್ರಕರಣ ವಿರೋಧ ಪಕ್ಷಗಳ ರಾಜಕೀಯ ಪಿತೂರಿ ಎಂಬ ಖಾನ್ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

‘ಪಕ್ಷದ ವರ್ಚಸ್ಸಿಗೆ ಮಸಿ ಬಳಿಯಲು ವಿರೋಧ ಪಕ್ಷದ ಕೈವಾಡವಿದೆಯೆ?’ ಎಂದು ತನಿಖೆ ಮೂಲಕ ಕಂಡುಕೊಳ್ಳಬೇಕಿದೆ ಎಂಬ ಉದ್ಧಟತನದ ಹೇಳಿಕೆ ಖಾನ್ ನೀಡಿದ್ದಾರೆ. ಓಟಿಗಾಗಿ ಜನ ಯಾವ ಹಂತಕ್ಕೆ ಬೇಕಾದರು ಇಳಿಯಬಹುದಾಗಿದೆ, ಮುಜಾಫರ್ನಗರದ ಶಾಮ್ಲಿ ಮತ್ತು ಕೈರಾನಾ ಪ್ರಕರಣದಲ್ಲಿ ಏಕೆ ಇಷ್ಟೊಂದು ಕಾಳಜಿ ವಹಿಸಿಲ್ಲ? ದಂಗೆಕೋರರನ್ನು ಪತ್ತೆ ಹಚ್ಚಿ ಶಿಕ್ಷಿಸುವುದು ಎಲ್ಲ ಪ್ರಕರಣಗಳಲ್ಲಿ ನಡೆಯಬೇಕು ಎಂದಿರುವ ಖಾನ್, ಮತಬ್ಯಾಂಕ್ ಆಗಿರುವ ಉತ್ತರ ಪ್ರದೇಶದಲ್ಲಿ ನೆಲೆಯೂರಲು ವಿಪಕ್ಷಗಳ ಪಿತೂರಿಯಾಗಿರಬಹುದು ಎಂದಿದ್ದಾರೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಮಾನವೀಯತೆ ಎಂಬುದು ಉತ್ತರ ಪ್ರದೇಶ ಸರ್ಕಾರಕ್ಕಿದ್ದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದಿದೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ದೌರ್ಜನ್ಯಕ್ಕೊಳಗಾದ ಕುಟುಂಬದ ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ.

39 ವರ್ಷದ ಟ್ಯಾಕ್ಸಿ ಚಾಲಕನ ಕುಟುಂಬ ಶುಕ್ರವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಕೋರರ ತಂಡದಿಂದ ಲೂಟಿಗೊಳಗಾಗಿ ಆತನ ಹೆಂಡತಿ ಮತ್ತು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗಿದ್ದರು. 3 ತಿಂಗಳೊಳಗೆ ಆರೋಪಿಗಳ ಪತ್ತೆ ಹಚ್ಚದಿದ್ದಲ್ಲಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿರುವ ಕುಟುಂಬದ ಮುಖ್ಯಸ್ಥ ಈ ವಿಷಯಕ್ಕೆ ರಾಜಕೀಯ ಬಣ್ಣ ಬಳಿಯದಿರಿ ಎಂದು ಬೇಸರದಿಂದ ವಿನಂತಿಸಿದ್ದಾನೆ.

ಹೇಳಿಕೆಯಿಂದ ಎಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಗ ಬದಲಿಸಿರುವ ಅಜಂ ಖಾನ್ ನಾನು ಅತ್ಯಾಚಾರ ಪ್ರಕರಣಕ್ಕೆ ವಿರೋಧ ಪಕ್ಷದ ಕೈವಾಡವಿರಬಹುದು ಎಂಬ ಹೇಳಿಕೆ ನೀಡಿಲ್ಲ, ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ಪ್ರಕರಣಗಳ ತನಿಖೆ ಅಗತ್ಯ ಎಂದಿರುವುದಾಗಿ ಉಲ್ಟಾ ಹೊಡೆದಿದ್ದಾರೆ.

Comments are closed.