ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಜೂ.1ರಿಂದ ಜು. 30ರವರೆಗಿನ ಸರಾಸರಿ ಹೋಲಿಸಿದರೆ ವಾಡಿಕೆ ಮಳೆಯಾಗಿದೆ. ಆದರೆ, ಜುಲೈನಲ್ಲಿ ಮುಂಗಾರು ತನ್ನ ಅಬ್ಬರ ತೋರುತ್ತದೆ ಎನ್ನುವ ಪ್ರತೀತಿ ಸುಳ್ಳಾಗಿದೆ. ಈ ತಿಂಗಳಲ್ಲಿನ ಸರಾಸರಿ ಮಳೆಯಲ್ಲಿ ಶೇ.12 ಕೊರತೆಯಾಗಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಮುಂಗಾರು ಮುನಿಸಿಕೊಂಡಂತಿದೆ. ಕಳೆದ ಮುಂಗಾರಿನಲ್ಲಿ ಜು.30ರವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆ ಕರಾವಳಿ ಭಾಗದಲ್ಲಿ ದಾಖಲಾಗಿತ್ತು. ಆದರೆ, ಈ ವರ್ಷ ಜು.30ರವರೆಗೆ ವಾಡಿಕೆಗಿಂತ ಶೇ.15 ಕಡಿಮೆ ಮಳೆ ಕರಾವಳಿ ಪ್ರದೇಶದಲ್ಲಿ ದಾಖಲಾಗಿದೆ. ಜುಲೈನಲ್ಲಂತೂ ಶೇ.34 ಮಳೆ ಕೊರತೆ ಕರಾವಳಿ ಜಿಲ್ಲೆಯಲ್ಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸರಾಸರಿ ಶೇ.9 ವಾಡಿಕೆ ಮಳೆಯಾಗಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಿಗಂತೂ ಈ ಮುಂಗಾರು ವಾಡಿಕೆಗಿಂತ ಹೆಚ್ಚಿನ ಮಳೆ ಅಂದರೆ ಸರಾಸರಿ ಶೇ.22 ಹೆಚ್ಚಿನ ಮಳೆಯಾಗಿದೆ.
ಇಂದಿನಿಂದ ಭಾರಿ ಮಳೆ ಸಾಧ್ಯತೆ
ಜು.31ರಂದು ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಆ. 1 ರಂದು ಉತ್ತರ ಕರ್ನಾಟಕದ ಒಳನಾಡ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಶನಿವಾರ ಕಾರವಾರದಲ್ಲಿ 5 ಸೆಂ.ಮೀ., ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಮುಲ್ಕಿ, ಹೊನ್ನಾವರದಲ್ಲಿ ತಲಾ 4 ಸೆಂ.ಮೀ., ಶಿರಾಳಿ, ಸಿದ್ದಾಪುರ, ರಾಯಚೂರು ಜಿಲ್ಲೆಗಳಲ್ಲಿ ತಲಾ 3 ಸೆಂ.ಮೀ., ಕಾರ್ಕಳ, ಗೇರುಸೊಪ್ಪ, ಕುಮಟಾ ಹಾಗೂ ಆಗುಂಬೆಯಲ್ಲಿ ತಲಾ 2 ಸೆಂ.ಮೀ. ಮಳೆ ದಾಖಲಾಗಿದೆ.
ಚಿಕ್ಕಮಗಳೂರು, ಕೊಡಗಿನಲ್ಲಿ ಮಳೆ ಕೊರತೆ
ಪ್ರಸಕ್ತ ಮುಂಗಾರಿನಲ್ಲಿ ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ಮಳೆ ಕೊರತೆಯಾಗಿದೆ. ಜುಲೈ ತಿಂಗಳಲ್ಲೇ ಈ 2 ಜಿಲ್ಲೆಗಳಲ್ಲಿ ಶೇ.40 ಕಡಿಮೆಯಾಗಿದೆ. ಜೂ.1ರಿಂದ ಜು.30ರವರೆಗೆ ಚಿಕ್ಕಮಗಳೂರಿನಲ್ಲಿ ವಾಡಿಕೆಯಂತೆ 1038.5 ಮಿ.ಮೀ. ಆಗಬೇಕಿತ್ತು. ಆದರೆ, 697.2 ಮಿ.ಮೀ. ಆಗಿದೆ. ಕೊಡಗಿನಲ್ಲೂ ಇದೇ ರೀತಿ ಪರಿಸ್ಥಿತಿ ಇದ್ದು, 1403.2 ಮಿ.ಮೀ. ಮಳೆಗೆ 1077.9 ಮಿ.ಮೀ. ಮಾತ್ರ ಮಳೆಯಾಗಿದೆ.
ಭರ್ಜರಿ ಮಳೆ
ಬೆಂಗಳೂರಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಭಾರಿ ಮಳೆ ದಾಖಲಾಗಿದೆ. ಜೂ.1ರಿಂದ ಜು.30ರವರೆಗೆ ನಗರದಲ್ಲಿ 333.1 ಮಿ.ಮೀ. ಮಳೆಯಾಗಿದ್ದು ವಾಡಿಕೆಗಿಂತ ಸರಾಸರಿ ಶೇ.106 ಹೆಚ್ಚಾಗಿದೆ. ಗ್ರಾಮಾಂತರ ದಲ್ಲೂ ಸರಾಸರಿ ಶೇ. 144 ಮಳೆ ಹೆಚ್ಚಾಗಿದೆ. ಮಳೆ ಇನ್ನೂ ಹೆಚ್ಚಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Comments are closed.