
ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಜನರಿಗೆ ಕುಡಿಯುವ ನೀರಿನ ದಾಹ ನೀಗಿಸುವ ನಿಟ್ಟಿನಲ್ಲಿ 7.5 ಟಿಎಂಸಿ ನೀರು ನೀಡುವಂತೆ ಮಧ್ಯಂತರ ಆದೇಶ ನೀಡಬೇಕೆಂದು ಮಹದಾಯಿ ನ್ಯಾಯಾಧೀಕರಣಕ್ಕೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ತಿರಸ್ಕಾರಗೊಂಡಿದೆ. ಇಂದು ನ್ಯಾಯಾಧೀಕರಣದ ತೀರ್ಪು ಪ್ರಕಟವಾಗಿದ್ದು, ರಾಜ್ಯದ ಅರ್ಜಿಯನ್ನು ವಜಾ ಮಾಡಲಾಗಿದೆ. ಇದರಿಂದಾಗಿ ರಾಜ್ಯಕ್ಕೆ ಭಾರೀ ಹಿನ್ನಡೆಯಾಗಿದೆ. ತೀರ್ಪು ಬರುತ್ತಿದ್ದಂತೆಯೇ ಉತ್ತರ ಕರ್ನಾಟಕದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.
ನ್ಯಾಯಾಧೀಶರಾದ ಜೆ.ಎಂ.ಪಾಂಚಾಲ ಅವರ ಪೀಠ ಕರ್ನಾಟಕ ರಾಜ್ಯದ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಇಂತಿಷ್ಟೆ ನೀರು ಬಿಡುಗಡೆ ಮಾಡಬೇಕೆಂದು ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
ಮಹದಾಯಿ ನದಿ ನೀರು ಹಂಚಿಕೆ ಕುರಿತ ಮಧ್ಯಂತರ ಅರ್ಜಿಯ ತೀರ್ಪು ಹೊರಬೀಳುತ್ತಿದ್ದಂತೆಯೇ ಕಳಸಾ ಬಂಡೂರಿ ಹೋರಾಟ ಸಮಿತಿ ತೀರ್ಪನ್ನು ವಿರೋಧಿಸಿ ದಿಢೀರ್ ಪ್ರತಿಭಟನೆ ಆರಂಭಿಸಿದೆ. ಹುಬ್ಬಳ್ಳಿಯ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ರಸ್ತೆ ತಡೆ ಪ್ರತಿಭಟನೆ ಶುರುವಾಗಿದ್ದು, ರೈತರು ರಸ್ತೆ ಮೇಲೆ ಕುಳಿತು ಪ್ರತಿಭಟನೆ ಆರಂಬಿಸಿದ್ದಾರೆ.
ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪಿನ ವಿರುದ್ಧದ ಪ್ರತಿಭಟನೆಗೆ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಪ್ರತಿಭಟನಕಾರರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಬಂದ್ ಮಾಡಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ತೀರ್ಪಿನ ಹಿನ್ನೆಲೆಯಲ್ಲಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳು ಸೇರಿದಂತೆ 9 ತಾಲೂಕುಗಳಿಗೆ ಕೃಷಿ ಚಟುವಟಿಕೆಗೆ ಹಾಗೂ ಕುಡಿಯುವ ನೀರು ಯೋಜನೆಗೆ ಅತ್ಯಾವಶ್ಯಕವಾಗಿ ನಮಗೆ 7.65 ಟಿಎಂಸಿ ನೀರು ಬೇಕಾಗಿದೆ ಎಂದು ರಾಜ್ಯದ ಪರವಾಗಿ ನ್ಯಾಯವಾದಿ ಅನಿಲ್ ದಿವಾನ್ ಹಾಗೂ ಸಂತೋಷ್ ವಾದ ಮಂಡಿಸಿದ್ದರು.
ಈ ಕುರಿತಂತೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ,ಕಳೆದ ಒಂದು ವರ್ಷದಿಂದ ನಡೆಸುತ್ತಿರುವ ಹೋರಾಟದಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ನ್ಯಾಯಾಧೀಕರಣದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದೆವು. ಆದರೆ ಅದು ಹುಸಿಯಾಗಿದೆ. ಆದರೂ ತೀರ್ಪನ್ನು ನೋಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ನಮ್ಮ ಹೋರಾಟ ಮುಂದುವರೆಯಲಿದೆ. ರೈತರು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ನಮ್ಮ ವಕೀಲರು ಕೂಡ ಉತ್ತಮವಾಗಿ ವಾದ ಮಂಡಿಸಿದ್ದಾರೆ. ಆದರೆ ಎಲ್ಲಿ ಏನಾಯಿತು ಎಂಬುದು ತಿಳಿದುಬಂದಿಲ್ಲ. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಪ್ರತಿಕ್ರಿಯಿಸಿ, ಕರ್ನಾಟಕದ ವಿರುದ್ಧ ತೀರ್ಪು ಬರುತ್ತದೆ ಎಂದು ಭಾವಿಸಿರಲಿಲ್ಲ. ಈ ತೀರ್ಪಿನಿಂದ ಬೇಸರವಾಗಿದೆ ಎಂದಿದ್ದಾರೆ. ಮಹದಾಯಿಯಿಂದ ಮಲಪ್ರಭಾಗೆ 7.56 ಟಿಎಂಸಿ ನೀರು ನೀಡಬೇಕೆಂದು ಕಳೆದ ಒಂದು ವರ್ಷದಿಂದ ರೈತರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಚಿತ್ರೋದ್ಯಮದವರು ಹೋರಾಟ ನಡೆಸಿದ್ದರು. ಈಗ ಈ ತೀರ್ಪಿನಿಂದ ಉತ್ತರಕರ್ನಾಟಕದ ಜನತೆಯ ಆಸೆಗೆ ತಣ್ಣೀರೆರಚಿದಂತಾಗಿದೆ ಎಂದು ರೈತರು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Comments are closed.