ಬೆಂಗಳೂರು, ಜು.೨೬: ಖಾದಿ ಮಂಡಳಿಯ ಪುನಶ್ಚೇತನ ಮತ್ತು ಮೂಲಸೌಕರ್ಯ ಒದಗಿಸಲು ಮುಂದಿನ ಬಜೆಟ್‌ನಲ್ಲಿ ಕನಿಷ್ಠ 2೦೦ ಕೋಟಿ ರೂ. ಅನುದಾನ ನೀಡಬೇಕು ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಲಕ್ಷ್ಮಣರಾವ್ ಅ.ಚಿಂಗಳೆ ಒತ್ತಾಯಿಸಿದ್ದಾರೆ.
ಖಾದಿ ಭವನದಲ್ಲಿಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ೧೨೫ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿರುವ ನಿಗಮಕ್ಕೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹೊಸ ಕಾಯಕಲ್ಪ ದೊರೆತಿದೆ. ಒಂದು ಸಾವಿರ ಮೀಟರ್ ಬಟ್ಟೆ (ಲಡಿಗೆ)ಗೆ ಈ ಹಿಂದೆ ೫೦ ಪೈಸೆ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಆದರೆ ಈಗ ೩ ರೂ. ನೀಡಲಾಗುತ್ತಿದೆ. ಖಾದಿ ಭಂಡಾರಗಳ ನವೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಮೆಟ್ರೋ ನಗರಗಳಲ್ಲಿ ಭಂಡಾರಗಳ ನವೀಕರಣಕ್ಕೆ ೨೫ ಲಕ್ಷ ರೂ. ಜಿಲ್ಲಾಮಟ್ಟದಲ್ಲಿ ೨೦ ಲಕ್ಷ ರೂ. ಹಾಗೂ ಹೋಬಳಿ ಮಟ್ಟದ ಭಂಡಾರ ನವೀಕರಣಕ್ಕೆ ೧೦ ಲಕ್ಷ ರೂ. ಅನುದಾನ ನೀಡುತ್ತಿದೆ ಎಂದರು.
ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಸಮೂಹದಲ್ಲಿ ಖಾದಿಯ ಬಗ್ಗೆ ಆಸಕ್ತಿ ಮೂಡಿಸಲು ನಿಗಮ ಮುಂದಾಗಿದ್ದು, ಇದಕ್ಕಾಗಿ ಅವರಿಗೆ ಬೇಕಾದ ವಿನ್ಯಾಸಗಳಲ್ಲಿ ಬಟ್ಟೆ ತಯಾರಿಸಲು ಯೋಜನೆ ರೂಪಿಸಲಾಗಿದೆ. ರಾಷ್ಟ್ರೀಯ ಪ್ಯಾಷನ್ ಟೆಕ್ನಾಲಜಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ೧೦೦೦ ಮಂದಿ ಮಾಸ್ಟರ್ ಟ್ರೈನರ್‌ಗಳನ್ನು ತಯಾರಿಸಲಿದೆ. ಒಟ್ಟು ಮೂರು ಹಂತಗಳಲ್ಲಿ ತರಬೇತಿ ಪಡೆದು ಹೊರಬಂದಿದ್ದು, ಸಹಕಾರ ಸಂಘಗಳಡಿ ಕೆಲಸ ಮಾಡುತ್ತಿರುವ ಜನರಿಗೆ ಇವರು ಕಿಟ್‌ಗಳನ್ನು ನೀಡಿ ೧೦ ದಿನ ತರಬೇತಿ ನೀಡಲಿದ್ದಾರೆ. ಕಳೆದ ವರ್ಷ ೪೬೫ ಹೊಸ ವಿನ್ಯಾಸ ಸೃಷ್ಟಿ ಮಾಡಿದ್ದು, ಮುಂದಿನ ದಿನಗಳಲ್ಲಿ ೧೦೦೦ ಹೊಸ ವಿನ್ಯಾಸ ಸೃಷ್ಟಿಸಲಾಗುವುದು. ಇದಕ್ಕೆ ಸಚಿವ ರಮೇಶ್ ಜಾರಕಿಹೊಳಿ ಶೀಘ್ರವೇ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಜಗತ್ತಿನ ಉದ್ದಗಲಕ್ಕೂ ರಾಜ್ಯದ ಖಾದಿ ಉತ್ಪನ್ನಗಳನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಅವರು, ಖಾದಿ ಮಂಡಳಿಯ ನೌಕರರಿಗೆ ಸರ್ಕಾರದ ವಸತಿಯೋಜನೆಯಡಿ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.
ಕಾರ್ಯಕ್ರಮವನ್ನು ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ ಉದ್ಘಾಟಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್. ಹನುಮಂತಯ್ಯ , ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಸಿ. ಬಸವರಾಜು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕ ಎಚ್.ವಿ. ರಘುರಾಮ್, ಮಂಡಳಿಯ ಸಿಇಒ ಡಾ.ಮಹಾಂತೇಶ, ಆರ್ಥಿಕ ಸಲಹೆಗಾರ ಬಿ.ಎಸ್. ಸಿದ್ದರಾಜಪ್ಪ, ಮುಖಂಡರಾದ ನರಸಿಂಹಮೂರ್ತಿ, ಎಚ್.ಎಸ್.ಗೀತಾ, ಸುಖನ್ಯಾ, ನರೇಂದ್ರಬಾಬು ಮತ್ತಿತರರು ಉಪಸ್ಥಿತರಿದ್ದರು.
Comments are closed.