ಬೆಂಗಳೂರು, ಜು. ೨೬- ಸಾರಿಗೆ ನೌಕರರ ಮುಷ್ಕರದಿಂದ ಜನಸಾಮಾನ್ಯರು ತೊಂದರೆಗೆ ಸಿಲುಕಿದ್ದು, ಸರ್ಕಾರ ಪ್ರತಿಷ್ಠೆ ಬಿಟ್ಟು ಮಾತುಕತೆ ಮೂಲಕ ಮುಷ್ಕರಕ್ಕೆ ಕೊನೆ ಹಾಡಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರಕ್ಕೆ ಸರ್ಕಾರವೇ ಹೊಣೆ. ನೌಕರರು ಮೊದಲೇ ಮುಷ್ಕರದ ಬಗ್ಗೆ ನೊಟೀಸ್ ನೀಡಿದ್ದರೂ ಸರ್ಕಾರ ಸಮಸ್ಯೆ ಪರಿಹಾರಕ್ಕೆ ಮುಂದಾಗಲಿಲ್ಲ ಎಂದವರು ದೂರಿದರು.
ಸರ್ಕಾರ ಈಗಲಾದರೂ ಹಠ ಬಿಟ್ಟು ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಕಾರ್ಮಿಕ ಸಂಘಟನೆಗಳು ಸಹ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಚರ್ಚೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
ಕೂಡಲೇ ಅಧಿವೇಶನ ಕರೆಯಿರಿ
ವಿಧಾನ ಮಂಡಲದ ಅಧಿವೇಶನ ಮೊಟಕಾಗಲು ವಿರೋಧ ಪಕ್ಷಗಳ ಮೂರ್ಖತನದ ಪರಮಾವಧಿಯೇ ಕಾರಣ ಎಂಬ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ಕಿಡಿ ಕಾರಿದ ಅವರು ಕಾಗೋಡು ತಿಮ್ಮಪ್ಪನವರು ಸಚಿವರಾದ ಮೇಲೆ ಅವರ ಧೋರಣೆಯೇ ಬದಲಾಗಿದೆ. ಈ ರೀತಿ ವಿಪಕ್ಷಗಳನ್ನು ಟೀಕೆ ಮಾಡುವುದು ಸರಿಯಲ್ಲ. ಸರ್ಕಾರಕ್ಕೆ ಜನಪರ ಸಮಸ್ಯೆಗಳ ಬಗ್ಗೆ ಕಾಳಜಿ ಇದ್ದರೆ ಈ ಕೂಡಲೇ ವಿಧಾನಸಭೆಯ ಅಧಿವೇಶನವನ್ನು ಕರೆಯಲಿ ಎಂದು ಒತ್ತಾಯಿಸಿದರು.
ಅಧಿವೇಶನದಲ್ಲಿ ಚರ್ಚೆ ಮಾಡಲು ಸಾಕಷ್ಟು ವಿಚಾರಗಳಿದ್ದವು. ಅವುಗಳು ಚರ್ಚೆಯಾಗಿಲ್ಲ. ಹಾಗಾಗಿ ಈಗಲೂ ಕಾಲ ಮಿಂಚಿಲ್ಲ. ಅಧಿವೇಶನ ಕರೆಯಲಿ ಎಂದು ಅವರು ಒತ್ತಾಯಿಸಿದರು.
ಸರ್ಕಾರದ ಮುಟ್ಟಾಳತನದಿಂದ ಅಧಿವೇಶನ ಮೊಟಕಾಯಿತು. ವಿಪಕ್ಷಗಳಿಂದ ಅಲ್ಲ ಎಂದು ಅವರು ತಿರುಗೇಟು ನೀಡಿದರು.
ಸಿಎಂ ರಕ್ಷಣೆ
ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರನ್ನು ನಿಂದಿಸಿದ ಕಾಂಗ್ರೆಸ್ ಮುಖಂಡ ಮರಿಗೌಡ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ರಕ್ಷಣೆ ಮಾಡುತ್ತಿದ್ದಾರೆ ಎಂದು ದೂರಿದರು.
Comments are closed.