ಕರಾವಳಿ

ಮಂಗಳೂರು : ಗಾಂಜಾ ಸೇವನೆ, ಕೊಲೆ, ದರೋಡೆಗೆ ಸಂಚು ಸೇರಿದಂತೆ ವಿವಿಧ ಪ್ರಕರಣಗಳ ವರದಿ

Pinterest LinkedIn Tumblr

arrest_crime_news

ಮಂಗಳೂರು, ಜು. 26: ಮಾರಕಾಯುಧದೊಂದಿಗೆ ವ್ಯಕ್ತಿಯೊಬ್ಬರ ದರೋಡೆಗೆ ಸಂಚು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಕುಳೂರು ಸಮೀಪ ಬಂಧಿಸಿರುವ ಸಿಸಿಬಿ ಪೊಲೀಸರು ಬಂಧಿತರಿಂದ ಮಾರಕಾಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಕಡಂದಲೆ ಕಾರ್ಕಳದ ಫೈಝಲ್ ಯಾನೆ ಟೊಪ್ಪಿ ಫೈಝಲ್ (33) ಮತ್ತು ಎಮ್ಮೆಕೆರೆ ಮಂಗಳೂರು ಅಬ್ದುಲ್ ನಾಸೀರ್ ಯಾನೆ ಡಾನ್ ನಾಸಿರ್ (33) ಎಂದು ಗುರುತಿಸಲಾಗಿದ್ದು, ದಾಳಿ ವೇಳೆ ನಾಲ್ಕು ಮಂದಿ ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಸೋಮವಾರ ಸಂಜೆ 4:30ರ ವೇಳೆಗೆ ಕೂಳೂರು ಪೆಟ್ರೋಲ್ ಬಂಕ್ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಬಂಧಿತರಿಂದ ಎರಡು ತಲವಾರು, ಕತ್ತಿ, ಮೆಣಸಿನ ಪುಡಿ, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಕಾವೂರು ಠಾಣೆಗೆ ಹಸ್ತಾಂತರಿಸಲಾಗಿದೆ.

ತಂಡದಿಂದ ದುಷ್ಕೃತ್ಯಕ್ಕೆ ಸಂಚು : ಓರ್ವ ಸೆರೆ – ಇಬ್ಬರು ಪರಾರಿ

ಮಂಗಳೂರು: ದುಷ್ಕೃತ್ಯವೆಸಗಲು ತಂಡದೊಂದಿಗೆ ಸಂಚು ರೂಪಿಸುತ್ತಿದ್ದ ಬೋಳೂರಿನ ರಾಜೇಶ್ ಯಾನೆ ಅಚ್ಚು (20)ನನ್ನು ಬರ್ಕೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ನಗರದ ಸುಲ್ತಾನ್ಬತ್ತೇರಿ ಬಳಿ ಬೋಳೂರಿನ ರಾಜೇಶ್ ಯಾನೆ ಅಚ್ಚು , ಮೋಕ್ಷಿತ್ (26) ಹಾಗೂ ಜಗದೀಶ್ ಯಾನೆ ಜಗ್ಗ (47) ಸೇರಿಕೊಂಡು ಸಂಚು ರೂಪಿಸುತ್ತಿದ್ದ ವೇಳೆ ಬರ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮೋಕ್ಷಿತ್ ಹಾಗೂ ಜಗದೀಶ ಪರಾರಿಯಾಗಿದ್ದಾರೆ. ಮೋಕ್ಷಿತ್ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಲಾಕ್ ಮಾಡಿದ್ದ ಬೈಕ್ ಕಳವು

ಮಂಗಳೂರು:ಪದವಿನಂಗಡಿ ಜಂಕ್ಷನ್ ಬಳಿ ಲಾಕ್ ಮಾಡಿ ನಿಲ್ಲಿಸಿದ ಯಮಹಾ ಎಫ್‌ಜಿ ಬೈಕ್ ಕಳವು ನಡೆದಿರುವ ಬಗ್ಗೆ ಮಂಗಳೂರು ಗ್ರಾಮಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಹಾಲ್ರಾಜ್ ಎಂಬವರು ಜು.22ರಂದು 8 ಗಂಟೆಗೆ ಲಾಕ್ ಮಾಡಿ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ಜು.23 ರಂದು ಸಂಜೆ ಬಂದು ನೋಡಿದಾಗ ಬೈಕ್ ಕಳವು ಆಗಿರುವುದು ಬೆಳಕಿಗೆ ಬಂದಿದೆ.

ಗಾಂಜಾ ಸೇವಿಸಿದ್ದ ಯುವಕನ ವಿರುದ್ಧ ಪ್ರಕರಣ

ಮಂಗಳೂರು: ನಗರದ ಪದವು ಗ್ರಾಮದ ಶಕ್ತಿನಗರ ಪದವು ಶಾಲೆಯ ಬಳಿ ಗಾಂಜಾ ಸೇವಿಸಿದ್ದ ಕಾರ್ತಿಕ್ (20) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಗಾಂಜಾ ಸೇವಿಸಿರುವ ಬಗ್ಗೆ ಖಚಿತ ಮಾಹಿತಿಯಂತೆ ಕಾರ್ತಿಕ್ನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈತನ ವಿರುದ್ದ ಎನ್ಡಿಪಿಎಸ್ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಉಳ್ಳಾಲ ಬೈಕ್ ಅಪಘಾತ ಪ್ರಕರಣ : ಆಸ್ಪತ್ರೆಯಲ್ಲಿದ್ದ ಇಬ್ಬರು ಗಾಯಾಳುಗಳು ಮೃತ್ಯು

ಉಳ್ಳಾಲ: ಕುಂಪಲದಲ್ಲಿ ಎರಡು ದಿನಗಳ ಹಿಂದೆ ಬೈಕ್ಗೆ ಕಾರ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಡಿದ್ದ ಸವಾರ ಮುಹಮ್ಮದ್ ಆರಿಫ್ (20) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.

ಕುಂಪಲ ನಿವಾಸಿ ಮುಹಮ್ಮದ್ ಆರಿಫ್ ತೊಕ್ಕೊಟ್ಟುನಿಂದ ಮನೆ ಕಡೆ ಹೋಗುತ್ತಿದ್ದ ಸಂದರ್ಭ ಕುಂಪಲದಲ್ಲಿ ಬೈಕ್ ತಿರುಗಿಸುತ್ತಿದ್ದಾಗ ಹಿಂದಿನಿಂದ ಬಂದ ಕಾರ್ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಮುಹಮ್ಮದ್ ಆರಿಫ್ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇನ್ನೊಂದು ಘಟನೆಯಲ್ಲಿ ಪಾನೀರ್ ಬಳಿ ರವಿವಾರ ಬೈಕ್ ಸ್ಕಿಡ್ ಆಗಿ ಲೈಟ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದೇವಿಪ್ರಸಾದ್ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.

ದೇವಿಪ್ರಸಾದ್ ರವಿವಾರ ದೇರಳಕಟ್ಟೆ ಕಡೆಯಿಂದ ಮಾಡೂರಿಗೆ ಬೈಕ್ನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಪಾನೀರ್ ಬಳಿ ಬೈಕ್ ಸ್ಕಿಡ್ ಆಗಿ ಲೈಟ್ ಕಂಬಕ್ಕೆ ಢಿಕ್ಕಿಯಾಗಿತ್ತು. ಇದರಿಂದ ದೇವಿಪ್ರಸಾದ್ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

Comments are closed.