ಬೆಂಗಳೂರು, ಜು. ೨೫- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮುಂದಿನ ತಿಂಗಳಿಂದ ಪಡಿತರ ಧಾನ್ಯಗಳನ್ನು ಕೂಪನ್ ವ್ಯವಸ್ಥೆಯಡಿ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ. ಖಾದರ್ ಅವರು ಇಂದಿಲ್ಲಿ ತಿಳಿಸಿದರು.
ಪ್ರಾಯೋಗಿಕವಾಗಿ ಮುಂದಿನ ತಿಂಗಳಿಂದ ಕೂಪನ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಯಶಸ್ವಿಯಾದಲ್ಲಿ ರಾಜ್ಯದ ಇತರೆ ಕಡೆಗಳಿಗೆ ವಿಸ್ತರಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಕೂಪನ್ ಇದ್ದವರು ನಿರ್ದಿಷ್ಟ ನ್ಯಾಯಬೆಲೆ ಅಂಗಡಿಗೆ ಹೋಗಬೇಕಾಗಿಲ್ಲ. ಯಾವುದೇ ಅಂಗಡಿಯಿಂದಲೂ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗುವುದು.ಈ ಉದ್ದೇಶಕ್ಕಾಗಿ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಸುವಂತಹ ಪಡಿತರ ಧಾನ್ಯಗಳ ( ಬಫರ್ ಸ್ಟಾಕ್) ಪ್ರಮಾಣವನ್ನು ಶೇ. 10 ರಷ್ಟು ಹೆಚ್ಚಿಸಲಾಗುವುದು ಎಂದರು.
ಈ ಮೊದಲು ಸೀಮೆಎಣ್ಣೆಯನ್ನು ಪಡಿತರ ಕಾರ್ಡುದಾರರಿಗೆ ಕೂಪನ್ ವ್ಯವಸ್ಥೆಯಡಿ ವಿತರಿಸಲಾಗುತ್ತಿತ್ತು. ಅದು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಪಡಿತರ ಧಾನ್ಯಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಬೋಗಸ್ ಕಾರ್ಡ್‌ಗಳಿಗೆ ಕಡಿವಾಣ ಹಾಗೂ ಸೋರಿಕೆಯನ್ನು ತಡೆಗಟ್ಟಲು ಮತ್ತು ಫಲಾನುಭವಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಸುವುದು ಇದರ ಉದ್ದೇಶ ಎಂದರು.
ಈ ವ್ಯವಸ್ಥೆ ಯಶಸ್ವಿಗೆ ಪಾಲಿಕೆ ವ್ಯಾಪ್ತಿಯ ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ಅವರು ಹೇಳಿದರು.
ಕೂಪನ್ ಪದ್ಧತಿ ಜತೆಗೆ ಇನ್ನು ಮುಂದೆ ಎಸ್ಎಂಎಸ್ ಮೂಲಕ ಪಡಿತರ ಧಾನ್ಯ ಪಡೆಯುವಂತಹ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ ಚಿಂತನೆ ಇದೆ. ಈ ಕುರಿತು ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಖಾಸಗಿಯವರಿಗೆ ಅವಕಾಶ
ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರ ಮನೆಗಳಿದ್ದು, ಪಡಿತರ ಕಾರ್ಡುದಾರರಿಗೆ ಕೂಪನ್ ಮುಖಾಂತರ ಪಡಿತರ ವಿತರಿಸಲು ಖಾಸಗಿಯವರು ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ ಕೊಡಲಾಗುವುದು. ಖಾಸಗಿಯವರು ಮುಂದೆ ಬಂದರೆ ಪ್ರೋತ್ಸಾಹ ನೀಡಲಾಗುವುದು. ಈ ಸಂಬಂಧ ಈಗಾಗಲೇ ಟೆಂಡರ್ ಕರೆಯಲಾಗಿದೆ. ಕೂಪನ್ ಪದ್ದತಿಯಡಿ ಪಡಿತರ ವಿತರಿಸಿದರೆ 1 ಕೂಪನ್‌ಗೆ ಇಂತಿಷ್ಟು ಪ್ರೋತ್ಸಾಹ ಧನ ನೀಡಲಾಗುವುದು ಎಂದರು.
ಸೀಮೆಎಣ್ಣೆಗೂ ಪ್ರೋತ್ಸಾಹ ಧನ
ನ್ಯಾಯಬೆಲೆ ಅಂಗಡಿಗಳ ಮಾಲೀಕರು ಒಂದು ಕ್ವಿಟಾಲ್ ಅಕ್ಕಿ ಮಾರಾಟ ಮಾಡಿದರೆ ಈ ಮೊದಲು ನೀಡುತ್ತಿದ್ದ ಪ್ರೋತ್ಸಾಹ ಧನ 36 ರೂ.ಗಳ ಬದಲಾಗಿ 100 ರೂ.ಗಳಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ಸೀಮೆಎಣ್ಣೆ ಗೆ ಪ್ರತಿ ಲೀಟರ್‌ಗೆ ನೀಡುತ್ತಿದ್ದ 70 ಪೈಸೆಗೆ ಬದಲಾಗಿ ಇನ್ನು ಮುಂದೆ 2 ರೂ. ಪ್ರೋತ್ಸಾಹ ಧನ ನೀಡಲು ಉದ್ದೇಶಿಸಲಾಗಿದೆ. ನ್ಯಾಯ ಬೆಲೆ ಅಂಗಡಿ ಮಾಲೀಕರು ಕೇವಲ ಪಡಿತರ ಮಾತ್ರ ಪೂರೈಸುವುದಕ್ಕೆ ಸೀಮಿತವಾಗದೆ ಇತರೆ ವಹಿವಾಟು ನಡೆಸಲು ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು. ಕೆಎಸ್ಆರ್‌ಟಿಸಿ, ವಿಮಾನ ಟಿಕೆಟ್ ಮಾರಾಟ, ಪಿಗ್ಮಿ ಸಂಗ್ರಹ ಮುಂತಾದ ವಹಿವಾಟುಗಳನ್ನು ನಡೆಸಲಾಗುವುದು. ಆದಾಯ ಹೆಚ್ಚಿಗೆ ಮಾಡುವುದು ಇದರ ಉದ್ದೇಶ ಎಂದರು.
ಇನ್ನು ಮುಂದೆ ಗ್ರಾಮೀಣ ಪ್ರದೇಶದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿನ ಹೆಚ್ಚುವರಿ 500-600 ಬಿಪಿಎಲ್ ಕಾರ್ಡ್‌ಗಳಿಗೆ ಒಂದರಂತೆ ನ್ಯಾಯಬೆಲೆ ಅಂಗಡಿಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ನಗರ ಪ್ರದೇಶಗಳಲ್ಲಿ 800 ಕಾರ್ಡ್‌ಗಳಿಗೆ ಒಂದರಂತೆ ಅಂಗಡಿ ತೆರೆಯಲಾಗುವುದು. ಈಗಿರುವ ವ್ಯವಸ್ಥೆಯನ್ನು ಪುನರ್ ರಚಿಸಿ ಹೊಸ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಹೆಚ್ಚುವರಿ ಅಂಗಡಿಗಳನ್ನು ಪ್ರಾರಂಭಿಸಲು ಸ್ಥಳೀಯ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಶಿಫಾರಸ್ಸಿನಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೊಸದಾಗಿ ಅಂಗಡಿಗಳನ್ನು ವ್ಯಕ್ತಿಗಳಿಗೆ ನೀಡುವುದಿಲ್ಲ. ಬದಲಿಗೆ ಸ್ವ ಸಹಾಯ ಗುಂಪು, ಗ್ರಾಮ ಪಂಚಾಯ್ತಿಗಳು, ಸೊಸೈಟಿಗಳಿಗೆ ಮಾತ್ರವೇ ನೀಡಲಾಗುವುದು. ಅರಣ್ಯ ಪ್ರದೇಶದ ಆಡಿಗಳಲ್ಲಿ 100 ಮನೆಗಳಿಗೆ ಒಂದರಂತೆ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗುವುದು ಇನ್ನು ಮುಂದೆ ಎಲ್ಲ ನ್ಯಾಯಬೆಲೆ ಅಂಗಡಿಗಳ ಮುಖಾಂತರ ಉತ್ತಮ ಗುಣಮಟ್ಟದ ಉಪ್ಪು 1 ಕೆ.ಜಿ. 2 ರೂ.ಗಳಂತೆ ವಿತರಿಸಲು ಚಿಂತನೆ ನಡೆದಿದ್ದು, ಸಂಪುಟದ ಒಪ್ಪಿಗೆ ಪಡೆದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
Comments are closed.