
ಚಿತ್ರ: ಕಬಾಲಿ
ಭಾಷೆ: ತಮಿಳು
ತಾರಾಗಣ: ರಜನಿಕಾಂತ್, ರಾಧಿಕಾ ಆಪ್ಟೆ, ಕಿಶೋರ್, ನಾಝರ್, ಧನ್ಸಿಕಾ, ದಿನೇಶ್ ರವಿ, ಜಾನ್ ವಿಜಯ್, ವಿನ್ಸ್ಟನ್ ಚಾವೋ
ನಿರ್ದೇಶನ: ಪಾ ರಂಜಿತ್
ನಿರ್ಮಾಣ: ಕಲೈಪುಲಿ ಎಸ್ ತನು
ಛಾಯಾಗ್ರಾಹಣ: ಜಿ ಮುರಳಿ
ಸಂಗೀತ: ಸಂತೋಷ್ ನಾರಾಯಣನ್
ಈ ಸಿನಿಮಾ ನೋಡಿ ಬಂದವರು ಮೊದಲು ಹೊಗಳುವುದು ನಂತರ ಬಯ್ದುಕೊಳ್ಳುವುದು ಒಬ್ಬರನ್ನೇ. ಅದು ಚಿತ್ರದ ಟ್ರೈಲರ್ ಕಟ್ ಮಾಡಿದವರನ್ನು. ಹೊಗಳುವುದಕ್ಕೆ ಕಾರಣ, ಇಂಥ ಬೋರಿಂಗ್ ಚಿತ್ರಕ್ಕೂ ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡುವಂತೆ ಟ್ರೈಲರ್ ಮಾಡಿದ್ದಕ್ಕೆ. ನಂತರ ಬಯ್ಯುವುದಕ್ಕೂ ಕಾರಣ, ಅದೇ ಟ್ರೈಲರ್ ಮೂಲಕ ಕುತೂಹಲ ಹುಟ್ಟಿಸಿ ಚಿತ್ರಮಂದಿರಕ್ಕೆ ಹೋಗುವಂತೆ ಮಾಡಿದ್ದಕ್ಕೆ. ಅಲ್ಲಿಗೆ ‘ಕಬಾಲಿ’ ಹೇಗಿದೆ ಎನ್ನುವ ಎರಡ್ಮೂರು ವಾರಗಳ ಯಕ್ಷಪ್ರಶ್ನೆಗೆ ಖಚಿತ ಉತ್ತರ ಸಿಕ್ಕಿದೆ ಅಂದುಕೊಳ್ಳುತ್ತೇವೆ. ಹಾಗಾದರೆ ಇಷ್ಟು ಹೈಪ್ ಕ್ರಿಯೇಟ್ ಆದ ಸಿನಿಮಾ ಎಡವಿದ್ದು ಎಲ್ಲಿ? ಪ್ರಶ್ನೆಯೂ ಹುಟ್ಟುತ್ತದೆ. ಸ್ಪೈಡರ್ಮ್ಯಾನ್, ಶಕ್ತಿಮಾನ್, ಚೋಟಾ ಭೀಮ್… ಇತ್ಯಾದಿ ಅತಿಮಾನುಷ ಶಕ್ತಿಗಳ ರೂಪಗಳನ್ನು ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಅಂಥದ್ದೇ ಒಂದು ಅತಿಮಾನುಷನಂತೆ ರೂಪುಗೊಂಡಿರುವ ರಜನಿಕಾಂತ್, ಜೋರಾಗಿ ಚಲಿಸುತ್ತಿರುವ ಟ್ರೈನ್ಗೆ ಅಡ್ಡ ನಿಲ್ಲುವುದು ಅಥವಾ ಅದನ್ನು ಹಿಂದಿಕ್ಕಿ ಓಡುವುದು, ಬುಲೆಟ್ಗಳನ್ನು ಅಗೆದು ಉಗಿಯುವುದು, ನೂರಾರು ಜನರನ್ನು ಒಂದೇ ಏಟಿಗೆ ಸಾಯಿಸುವುದು ಇಂಥ ಲಾಜಿಕ್ ಇಲ್ಲದ, ಮ್ಯಾಜಿಕ್ ಅನಿಸದ ಕಾಮಿಡಿ ಸೀನ್ಗಳಲ್ಲಿ ಕಾಣಿಸಿಕೊಂಡಿರುವುದೇ ಹೆಚ್ಚು. ಅಭಿಮಾನಿಗಳು ರಜನಿಕಾಂತ್ರಿಂದ ಇಂಥ ಸಾಹಸಗಳನ್ನೇ ಹೆಚ್ಚು ನಿರೀಕ್ಷಿಸುತ್ತಾರೆ.
ಆದರೆ, ಇಂಥ ಯಾವ ಅದ್ಭುತಗಳು ಇಲ್ಲದೆ ರಜನಿ ಅವರಿಂದ ಕಣ್ಣೀರು ಹಾಕಿಸುವ ‘ಕಬಾಲಿ’ಯನ್ನು ನೋಡಿದ ತಲೈವಾ ಅಭಿಮಾನಿಗಳ ತಲೆ ಚಚ್ಚಿಕೊಳ್ಳುತ್ತಾರೆ. ಆದರೂ ಚಿತ್ರದ ಕೊನೆ ತನಕ ‘ತಲೈವಾ…’ ಎನ್ನುತ್ತ ಶಿಳ್ಳೆ ಹೊಡೆಯುತ್ತಾರೆ, ಚೀಯರ್ಸ್ ಹೇಳುತ್ತಾರೆ. ಪಾಪ ರಜನಿಕಾಂತ್ ಮಾತ್ರ ಎದ್ದೇಳುವುದೇ ಇಲ್ಲ. ‘ಹ್ಹ ಹ್ಹ ಹ್ಹ…’ ಅಂತ ನಗುತ್ತ ಸೈಲೆಂಟ್ ಆಗಿ ಸೋಫಾ ಮೇಲೆ ಕೂರುತ್ತಾರೆ. ಪ್ರೇಕ್ಷಕರೂ ಎಷ್ಟು ಸಲ ಅಂತ ಶಿಳ್ಳೆ ಹೊಡೆದು ರಜನಿಗೆ ಉತ್ಸಾಹ ತುಂಬಲು ಸಾಧ್ಯ!? ಸಿನಿಮಾ ಮುಗಿದ ಮೇಲೆ ‘ಎನ್ನ ತಲೈವಾ ಇಂದ ಮಾರಿ ಆಚಿ?’ ಎಂದು ಗೊಣಗುತ್ತ ಚಿತ್ರಮಂದಿರದಿಂದ ಹೊರಡುತ್ತಾರೆ. ಅಲ್ಲಿಗೆ ರಜನಿಕಾಂತ್ ಸಿನಿಮಾ ಎಂದುಕೊಂಡು ಹೋದ ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ನಿರಾಸೆ ಕಟ್ಟಿಟ್ಟಬುತ್ತಿ. ಹೋಗ್ಲಿ ಕತೆ ಏನು? ತೆಲುಗಿನಿಂದ ರಿಮೇಕ್ ಆದ ‘ವೀರ ಕನ್ನಡಿಗ’ ಸಿನಿಮಾ ನೋಡಿದ್ದರೆ ‘ಕಬಾಲಿ’ಯ ಸೋಲ್ ಪಾಯಿಂಟ್ ಗೊತ್ತಾಗುತ್ತದೆ. ಮುಂಬೈನಲ್ಲಿರುವ ಕನ್ನಡದ ಕೂಲಿಗಳ ಮೇಲಾಗುವ ದೌರ್ಜನ್ಯವನ್ನು ಖಂಡಿಸಿ ಎದ್ದು ನಿಲ್ಲುವ ‘ವೀರ ಕನ್ನಡಿಗ’ನಂತೆ ಮಲೇಷ್ಯಾದ ಎಸ್ಟೇಟ್ಗಳಲ್ಲಿ ಕೆಲಸ ಮಾಡುವ ತಮಿಳರ ಮೇಲಾಗುತ್ತಿರುವ ಅನ್ಯಾಯವನ್ನು ಖಂಡಿಸುವ ವ್ಯಕ್ತಿಯೇ ಕಬಾಲಿ. ಆ ಶೋಷಣೆ ಹೆಚ್ಚಾದ ಮೇಲೆ ಕಾಮನ್ ಕಬಾಲಿ ಕೈಗೆ ಗನ್ನು ಬರುತ್ತದೆ. ಆ ಮೇಲಿನದ್ದು ಹೆಚ್ಚು ಹೇಳಬೇಕಿಲ್ಲ.
ತಮಿಳುನಾಡಿನ ಕಪಾಲೇಶ್ವರ ದೇವಾಲಯದ ಈಶ್ವರನ ಹೆಸರೋ ಅಥವಾ ಅದೇ ಊರಿನ ಕಬಾಲಿ ಎನ್ನುವ ರಿಯಲ್ ರೌಡಿಯ ಕತೆಯೋ ಗೊತ್ತಿಲ್ಲ. ಅತ್ತ ರಿಯಲ್ಲು ಅಲ್ಲದೆ, ಇತ್ತ ಕಾಲ್ಪನಿಕವೂ ಆಗದ ಇಡೀ ಚಿತ್ರವನ್ನು ಪಾ ರಜಿಂತ್, ಗೊಂದಲದಲ್ಲೇ ಮುಗಿಸಿದ್ದಾರೆ. ಒಮ್ಮೆ ತಮ್ಮ ಕತೆಯನ್ನು ರಜನಿ ಮ್ಯಾನರಿಸಂಗೆ ಶರಣಾಗಿಸುತ್ತಾರೆ. ಇದ್ದಕ್ಕಿದ್ದಂತೆ ಎಚ್ಚೆತ್ತುಕೊಂಡು ಕತೆ ಹೇಳುವುದಕ್ಕೆ ಹೋಗುತ್ತಾರೆ. ಆಗ ಮತ್ತಷ್ಟು ನಿಧಾನವೇ ಪ್ರಧಾನ ಎನ್ನುವ ಸೂತ್ರಕ್ಕೆ ಕಟ್ಟುಬಿದ್ದು ‘ಕಬಾಲಿ’ಯನ್ನು ಆ ಕಪಾಲೇಶ್ವರ ಕೂಡ ಕಾಪಾಡಲು ಆಗದಂತೆ ನಿರೂಪಿಸುತ್ತಾರೆ. ರಜನಿಕಾಂತ್ ಮಾತ್ರವಲ್ಲ, ಯಾವ ಪಾತ್ರಗಳನ್ನೂ ಸರಿಯಾಗಿ ದುಡಿಸಿಕೊಂಡಿಲ್ಲ. ಇಲ್ಲಿ ರಜನಿಕಾಂತ್ ಮ್ಯಾನರಿಸಂ ಇಲ್ಲ, ಡೈಲಾಗ್ಸ್ ಇಲ್ಲ. ಹೀಗಾಗಿ ‘ಕಬಾಲಿ’ ನೋಡಿ ಬೇಸರ ಮಾಡಿಕೊಳ್ಳುವ ಬದಲು ಮತ್ತೊಮ್ಮೆ ‘ಬಾಷಾ’ ನೋಡಿ ಖುಷಿ ಪಡುವುದೇ ಒಳ್ಳೆಯದು. ಆದರೆ, ಇದರ ನಡುವೆ ಇಷ್ಟವಾಗುವುದು ಯಾವುದೇ ಅಬ್ಬರವಿಲ್ಲದ ರಾಧಿಕಾ ಆಪ್ಟೆಯ ಸಹಜ ನಗು, ಕಿಶೋರ್ ಅವರ ಕಿಲ್ಲಿಂಗ್ ನಟನೆ. ಜತೆಗೆ ತಮ್ಮ ಮ್ಯಾನರಿಸಂ ಇಲ್ಲದ ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿರುವ ರಜನಿಕಾಂತ್ ಧೈರ್ಯ. ಆಗಾಗ ಗಮನ ಸೆಳೆಯುವ ಜಿ ಮುರಳಿ ಅವರ ಕ್ಯಾಮೆರಾ ಬೆಳಕನ್ನು ಸಹ. ಇನ್ನು ಸಂತೋಷ್ ನಾರಾಯಣನ್ ಅವರ ಮ್ಯೂಸಿಕ್ ಕಮಾಲ್, ಕೇವಲ ಟೈಟಲ್ ಟ್ರ್ಯಾಕ್ ರೀರೆಕಾರ್ಡಿಂಗ್ಗೆ ಮಾತ್ರ ಸೀಮಿತಗೊಂಡಿದೆ.
(ವಿಮರ್ಶೆ: ಆರ್.ಕೇಶವಮೂರ್ತಿ)
Comments are closed.