
ಚಂಡೀಗಢ:ಖ್ಯಾತ ಕ್ರಿಕೆಟಿಗ ನವ ಜೋತ್ ಸಿಂಗ್ ಸಿಧು ಅವರು ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ಒಂದು ಪಕ್ಷ ಅವರು ಈ ಸ್ಪರ್ಧೆಯನ್ನು ಒಪ್ಪದಿದ್ದರೆ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ತಾರಾ ಮೆರುಗು ನೀಡಲಿದ್ದಾರೆ ಎನ್ನಲಾಗಿದೆ.
ಪಕ್ಷದ ವಲಯದಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದರೂ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಸಿಧು ಅವರು ಪಕ್ಷದ ಸ್ಟಾರ್ ಪ್ರಚಾರಕರು ಆಗುವ ಸಾಧ್ಯತೆಗಳಿವೆ ಎಂಬುದನ್ನು ಪಕ್ಷದ ಮುಖಂಡ, ಮುಖ್ಯಮಂತ್ರಿ ಕೇಜ್ರೀವಾಲ್ ಸಹ ಹೇಳಿರುವುದು ಈ ವದಂತಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಸಿಧು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮುನ್ನ ಅವರಿಗೆ ಯಾವ ಒಪ್ಪಂದ, ಭರವಸೆಗಳನ್ನೂ ನೀಡುವುದಿಲ್ಲ, ಪಕ್ಷದ ನೇತಾರರು ಮುಂಬರುವ ದಿನದಲ್ಲಿ ಹೇಗೆ ನಿರ್ಧಾರ ಕೈಗೊಳ್ಳುತ್ತಾರೋ ಹಾಗೆ ಆಗಲಿದೆ ಎಂದು ಮುಖಂಡರೊಬ್ಬರು ಹೇಳಿದ್ದಾರೆ.
ಸಿಧು ಅಥವಾ ಅವರ ಪತ್ನಿ ಡಾ. ನವಜೋತ್ ಕೌರ್ ಅವರನ್ನು 2017ರ ಚುನಾವಣೆಯಲ್ಲಿ ಪಕ್ಷದಿಂದ ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಇಬ್ಬರೂ ಕಣಕ್ಕೆ ಇಳಿಯಲು ಪಕ್ಷದ ಸಂವಿಧಾನದ ಪ್ರಕಾರ ಅವಕಾಶವಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ.
Comments are closed.