ಕರಾವಳಿ

ಮಂಗಳೂರು ವಿ.ವಿಯಲ್ಲಿ ಶೀಘ್ರದಲ್ಲೇ ತುಳು ಸ್ಪೀಕಿಂಗ್ ಕೋರ್ಸ್ ಆರಂಭಕ್ಕೆ ಚಿಂತನೆ : ಪ್ರಾಂಶುಪಾಲ ಡಾ. ಉದಯ ಕುಮಾರ್

Pinterest LinkedIn Tumblr

Open_house_VV_1

ಮಂಗಳೂರು, ಜು.18: ಮಂಗಳೂರು ವಿ.ವಿ. ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ಇರುವ ಶೈಕ್ಷಣಿಕ ಅವಕಾಶ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ‘ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌‌‌‌‌‌‌ ನೋಡ ಬನ್ನಿ’ ಕಾರ್ಯಕ್ರಮದ ಅಂಗವಾಗಿ ಇಂದು ನಗರದ ವಿ.ವಿ ಕಾಲೇಜಿನಲ್ಲಿ `ಓಪನ್ ಹೌಸ್’ ಕಾರ್ಯಕ್ರಮ ನಡೆಯಿತು.

`ಓಪನ್ ಹೌಸ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಬ್ಯಾಂಕ್ ಮಹಾಪ್ರಬಂಧಕ ಚಂದ್ರಶೇಖರ್‌‌‌ ರಾವ್ ಅವರು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಫುಲ ಉದ್ಯೋಗ ಅವಕಾಶವಿದೆ. ವರ್ಷಕ್ಕೆ 30 ಸಾವಿರ ಉದ್ಯೋಗ ಸೃಷ್ಟಿಯಾಗುತ್ತದೆ. ಯುವಜನತೆ ಈ ದಿಸೆಯಲ್ಲಿ ಆಸಕ್ತಿ ವಹಿಸಬೇಕು ಎಂದು ಹೇಳಿದರು.

Open_house_VV_2 Open_house_VV_3 Open_house_VV_4 Open_house_VV_5 Open_house_VV_6

ಕಾರ್ಯಕ್ರಮದಲ್ಲಿ ವಿ.ವಿ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಬಾರ್ಕೂರು ಮಾತನಾಡಿ, ತುಳುವೇತರರಿಗೆ ಅನುಕೂಲವಾಗುವಂತೆ ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸಂಜೆಯ ವೇಳೆಗೆ ತುಳು ಸ್ಪೀಕಿಂಗ್ ಕೋರ್ಸ್ ಆರಂಭಿಸುವ ಆಲೋಚನೆ ಇದೆ.ನಗರದ ಪೊಲೀಸ್ ಇಲಾಖೆಯಲ್ಲಿರುವ ಹೊರ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಾಗಿ ನಡೆಸಲಾದ ತುಳು ಸ್ಪೀಕಿಂಗ್ ಕೋರ್ಸ್ ಗೆ ಉತ್ತಮ ಸ್ಪಂದನೆ ದೊರೆತಿರುವ ಹಿನ್ನೆಲೆಯಲ್ಲಿ ಈ ಕೋರ್ಸನ್ನು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮುಂದುವರಿಸುವ ಪ್ರಸ್ತಾಪವಿದೆ ಎಂದು ಹೇಳಿದರು.

ವಿಶ್ವವಿದ್ಯಾನಿಲಯ ಪರೀಕ್ಷಾಂಗ ಕುಲಸಚಿವ ಎ.ಎಂ. ಖಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕೌಶಲ್ಯ ಅಭಿವೃಧ್ಧಿ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪದವಿವೂರ್ವ, ಪದವಿ, ಸ್ನಾತಕೋತ್ತರ ವಿವಿಧ ಹಂತಗಳಲ್ಲಿ ಉದ್ಯೋಗಕ್ಕೆ ಪೂರಕ ಕೌಶಲಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲು ಈ ಕೇಂದ್ರ ನೆರವಾಗಲಿದೆ ಎಂದು ಎ.ಎಂ. ಖಾನ್ ತಿಳಿಸಿದರು.

ಸಿಂಡಿಕೇಟ್ ಸದಸ್ಯ ಪ್ರಸನ್ನ ಕುಮಾರ್, ಸಿಂಡಿಕೇಟ್ ಸದಸ್ಯರಾದ ಮೋಹನ್‌ಚಂದ್ರ ನಂಬಿಯಾರ್, ಹರೀಶ್ ಆಚಾರ್ ಮುಂತಾದವರು ಉಪಸ್ಥಿತರಿದ್ದರು. ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಸುಭಾಷಿಣಿ ಶ್ರೀವತ್ಸ ವಂದಿಸಿದರು.

Comments are closed.