ಅನಿಮಲ್ ಬೋರ್ಡ್‌ನಿಂದ ಪ್ರಮಾಣಪತ್ರ ಸಿಕ್ಕಿಲ್ಲ. ಹಾಗಾಗಿ ಸಿನಿಮಾ ತಡವಾಗುತ್ತಿದೆ …ಈ ತರಹದ ಮಾತುಗಳು ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಆಗಾಗ ಕೇಳಿಬರುತ್ತಲೇ ಇರುತ್ತವೆ. ಸಿನಿಮಾದಲ್ಲಿ ಪ್ರಾಣಿಗಳನ್ನು ಬಳಸಿದರೆ ಅನಿಮಲ್ ಬೋರ್ಡ್‌ನಿಂದ ಅದಕ್ಕೆ ಪ್ರಮಾಣ ಪತ್ರ ಪಡೆಯಲು ತುಂಬಾ ಕಷ್ಟಪಡಬೇಕೆಂಬ ಮಾತುಗಳನ್ನು ಸಿನಿಮಾ ತಯಾರಕರು ಹೇಳುತ್ತಲೇ ಇರುತ್ತಾರೆ. ಈ ಬಾರಿ ನಟ ಶಿವರಾಜಕುಮಾರ್ ಅವರು ಅನಿಮಲ್ ಬೋರ್ಡ್ ಬಗ್ಗೆ ಬೇಸರದಿಂದ ಮಾತನಾಡಿದ್ದಾರೆ.
ಅದಕ್ಕೆ ಕಾರಣ “ಸಂತೆಯಲ್ಲಿ ನಿಂತ ಕಬೀರ’ ಚಿತ್ರ. ಚಿತ್ರ ಜುಲೈ 29ಕ್ಕೆ ಬಿಡುಗಡೆಯಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರ ತಿಂಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಆದರೆ, ಅನಿಮಲ್ ಬೋರ್ಡ್ ನ ಸರ್ಟಿಫಿಕೇಟ್‌ಗಾಗಿ ಚಿತ್ರತಂಡ ಒಂದೂವರೆ ತಿಂಗಳು ಓಡಾಡಿದೆ. ಇದು ಶಿವಣ್ಣನಿಗೆ ಬೇಸರವಾಗಿದೆ.
“ಸಿನಿಮಾಗಳಲ್ಲಿ ಪ್ರಾಣಿಗಳನ್ನು ಬಳಸುವುದೇ ಒಂದು ಅಪರಾಧದಂತಾಗಿದೆ. ನಾವೇನು ಪ್ರಾಣಿಗಳಿಗೆ ಹಿಂಸೆ ಕೊಡುವುದಿಲ್ಲ. ಕೆಲವು ಸಿನಿಮಾಗಳಿಗೆ ಪ್ರಾಣಿಗಳನ್ನು ಬಳಸಬೇಕಾಗುತ್ತದೆ. ಈಗ “ಕಬೀರ’ ಕೂಡಾ ಒಂದೂವರೆ ತಿಂಗಳು ತಡವಾಯಿತು. ಇಂತಹ ಸಿನಿಮಾಗಳಿಗಾದರೂ ಅನಿಮಲ್ ಬೋರ್ಡ್ ತನ್ನ ನೀತಿಯನ್ನು ಸಡಿಲಿಸಬೇಕು. ನಾಯಿ ಹೋಗಬಾರದು, ಕಾಗೆ ಹಾರಬಾರದು ಎಂದರೆ ಹೇಗೆ? ಯಾರೊಬ್ಬರು ಪ್ರಾಣಿಗಳಿಗೆ ಉದ್ದೇಶಪೂರ್ವಕವಾಗಿ ತೊಂದರೆ ಕೊಡುವುದಿಲ್ಲ. ಹಾಗಂತ ತಮಗೆ ಹಾನಿಯಾಗುತ್ತದೆ ಎಂದಾಗ ಮಾತ್ರ ತಮ್ಮ ರಕ್ಷಣೆಯನ್ನು ನೋಡಿಕೊಳ್ಳುತ್ತಾರಷ್ಟೇ. ಭಾರತದಲ್ಲಿ ಪ್ರಾಣಿಗಳನ್ನು ಬಳಸಿ ಚಿತ್ರೀಕರಿಸಬಾರದಂತೆ. ಆದರೆ, ವಿದೇಶದಲ್ಲಿ ಮಾಡಬಹುದೆಂಬ ನಿಯಮವಿದೆ.
ಹಾಗಾದರೆ ವಿದೇಶದಲ್ಲಿರೋದು ಪ್ರಾಣಿಗಳಲ್ವಾ? ಇದು ಯಾವ ನ್ಯಾಯ ಎಂದು ನನಗೆ ಗೊತ್ತಾಗುವುದಿಲ್ಲ’ ಎಂದು ಶಿವರಾಜಕುಮಾರ್ ಅನಿಮಲ್ ಬೋರ್ಡ್‌ನ ನಿಯಮಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.
-ಉದಯವಾಣಿ
Comments are closed.