ಲಾಹೋರ್ (ಪಿಟಿಐ): ಪಾಕಿಸ್ತಾನದ ನಟಿ, ರೂಪದರ್ಶಿ, ಸಾಮಾಜಿಕ ಜಾಲತಾಣಗಳ ಸೆಲೆಬ್ರೆಟಿ ಕಂಡೀಲ್ ಬಲೂಚ್ ಅವರನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.
ಪಂಜಾಬ್ ಪ್ರಾಂತ್ಯದ ಮುಲ್ತಾನ್‌ನಲ್ಲಿ ಕಂಡೀಲ್ ಬಲೂಚ್‌ನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಸಹೋದರ ವಾಸೀಂನನ್ನು ದೇರಾ ಘಾಜಿ ಖಾನ್‌ನಲ್ಲಿ ಶನಿವಾರ ರಾತ್ರಿ ಬಂಧಿಸಲಾಗಿದ್ದು, ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಕಂಡೀಲ್ ನೀಡಿದ್ದ ಹೇಳಿಕೆಗಳು ಹಾಗೂ ಆಕೆ ಸಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ವಿವಾದಾತ್ಮಕ ಚಿತ್ರಗಳಿಂದ ಅವಮಾನವಾಗಿತ್ತು ಎಂದು ವಾಸೀಂ ಹೇಳಿಕೆ ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಅಲ್ಲದೆ ಫೇಸ್‌ಬುಕ್ ಪೋಸ್ಟ್ ಮತ್ತು ವಿಡಿಯೊ ಬಗ್ಗೆ ಸಹೋದರ ವಾಸೀಂ ಬಲೂಚ್‌ಗೆ ಬೆದರಿಕೆ ಹಾಕಿದ್ದ ಎಂದು ಗೊತ್ತಾಗಿದೆ.
ಘಟನೆ ವಿವರ: ಕಂಡೀಲ್ ಅವರ ಮೂಲ ಹೆಸರು ಫೌಜಿಯಾ ಅಜೀಮ್. ರೂಪದರ್ಶಿಯಾದ ನಂತರ ಅವರು ಹೆಸರನ್ನು ಬದಲಾಯಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕವಾಗಿ ಕಾಣಿಸಿಕೊಳ್ಳುವುದರಿಂದ ಹಾಗೂ ಮಾಡೆಲಿಂಗ್ ಕ್ಷೇತ್ರದಿಂದ ದೂರ ಇರುವಂತೆ ಕುಟುಂಬದವರು ಬಲೂಚ್‌ಗೆ ಸಲಹೆ ನೀಡಿದ್ದರು.
ಕುಟುಂಬ ಬೆದರಿಕೆ ಹಾಕಿರುವ ಬಗ್ಗೆ ಬಲೂಚ್ ಅವರು, ಪಾಕ್ ಸರ್ಕಾರ ಆಂತರಿಕ ಸಚಿವಾಲಯ, ಫೆಡರಲ್ ತನಿಖಾ ಸಂಸ್ಥೆ (ಎಫ್‌ಐಎ) ಮತ್ತು ಇಸ್ಲಾಮಾಬಾದ್ ಹಿರಿಯ ಸೂಪರಿಟೆಂಡೆಂಟ್ ಅವರಿಗೆ ದೂರು ನೀಡಿ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದರು ಎಂದು ‘ಡಾನ್’ ಪತ್ರಿಕೆ ವರದಿ ಮಾಡಿತ್ತು.
‘ನನ್ನ ಜೀವ ಅಪಾಯದಲ್ಲಿದೆ ಹಾಗೂ ದೂರವಾಣಿ ಕರೆಮೂಲಕ ನನಗೆ ಬೆದರಿಕೆ ಹಾಕುತ್ತಿದ್ದಾರೆ. ಮನೆಗೆ ಯಾವುದೆ ಭದ್ರತಾ ವ್ಯವಸ್ಥೆ ಇಲ್ಲ’ ಎಂದು ಅವರು ತಿಳಿಸಿದ್ದರು ಎಂದು ಪತ್ರಿಕೆ ತಿಳಿಸಿದೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ವಿವಾದಾತ್ಮಕ ಚಿತ್ರಗಳಿಂದಾಗಿ ಬಲೂಚ್ ಅವರನ್ನು ರುಯೇತ್–ಎ–ಹಿಲಾಲ್ ಸಮಿತಿ ಸದಸ್ಯತ್ವದಿಂದ ಅಮಾನತು ಮಾಡಲಾಗಿತ್ತು.
ಇಮ್ರಾನ್ ಮದುವೆಯಾಗುವ ಬಯಕೆ
ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ವಿರೋಧ ಪಕ್ಷದ ನಾಯಕ ಇಮ್ರಾನ್ ಖಾನ್ ಅವರನ್ನು ವಿವಾಹವಾಗುವ ಬಯಕೆಯನ್ನು ಕಂಡೀಲ್ ವ್ಯಕ್ತಪಡಿಸಿದ್ದರು.
ಕಂಡೀಲ್ ಬಲೂಚ್‌ನನ್ನು ‘ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಮೇಲ್ನೋಟಕ್ಕೆ ಇದು ಮರ್ಯಾದೆಗೇಡು ಹತ್ಯೆಯಂತೆ ಕಾಣುತ್ತಿದೆ. ಈ ಕೃತ್ಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಜರ್ ಅಕ್ರಮ್ ಶನಿವಾರ ತಿಳಿಸಿದ್ದರು.
Comments are closed.