ಮುಂಬೈ: ನಾನೊಬ್ಬ ಶಾಂತಿದೂತ. ನಾನೆಂದಿಗೂ ಉಗ್ರವಾದವನ್ನು ಬೆಂಬಲಿಸುವುದಿಲ್ಲ ಎಂದು ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಹೇಳಿದ್ದಾರೆ.
ಶುಕ್ರವಾರ ಮದಿನಾದಿಂದ ಸ್ಕೈಪ್ ಮೂಲಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಝಾಕಿರ್ ನಾಯ್ಕ್, ತನ್ನ ಭಾಷಣಗಳ ಮೂಲಕ ಉಗ್ರಕೃತ್ಯಗಳಿಗೆ ಪ್ರೇರಣೆ ನೀಡಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ನಾನು ಯಾವತ್ತೂ ಅಮಾಯಕರನ್ನು ಕೊಲ್ಲಲು ಪ್ರೇರಣೆ ನೀಡಿಲ್ಲ. ಒಂದು ವೇಳೆ ಈ ಆರೋಪದ ಬಗ್ಗೆ ತನಿಖೆ ನಡೆಸುವುದಾದರೆ ನಾನು ಯಾವುದೇ ತನಿಖೆಗೆ ಸಹಕರಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.
ಢಾಕಾ ಕೆಫೆ ದಾಳಿ ನಡೆಸಲು ದಾಳಿಕೋರರಿಗೆ ತನ್ನ ಮಾತುಗಳೇ ಪ್ರೇರಣೆ ಎಂಬ ಆರೋಪ ತಳ್ಳಿಹಾಕಿದ ನಾಯ್ಕ್, ನಾನು ಎಲ್ಲಾ ರೀತಿಯ ಉಗ್ರ ಕೃತ್ಯಗಳನ್ನು ಖಂಡಿಸುತ್ತೇನೆ. ನಾನೊಬ್ಬ ಶಾಂತಿದೂತ.
ನಾನು ಯಾವುದೇ ರೀತಿಯ ಉಗ್ರ ಕೃತ್ಯಗಳನ್ನು ಬೆಂಬಲಿಸುವುದಿಲ್ಲ. ಆತ್ಮಾಹುತಿ ದಾಳಿ ಮೂಲಕ ಅಮಾಯಕರನ್ನು ಹತ್ಯೆಗೈಯ್ಯುವುದನ್ನು ನಾನು ಖಂಡಿಸುತ್ತೇನೆ. ಅದೇ ವೇಳೆ ನಾನು ಉಗ್ರವಾದ ಮತ್ತು ಆತ್ಮಾಹುತಿ ದಾಳಿ ಮಾಡಲು ಪ್ರೇರೇಪಿಸುತ್ತಿದ್ದೇನೆ ಎಂದು ಹೇಳುವ ವಿಡಿಯೊಗಳು ನಕಲಿ ಎಂದಿದ್ದಾರೆ.
ಏತನ್ಮಧ್ಯೆ, ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ನ ಪೀಸ್ ಟೀವಿಯ ಪ್ರಸಾರಕ್ಕೆ ಅನುಮತಿ ನೀಡುವಂತೆ ತಾನು ಕೋರಿದ್ದರೂ, ಇಸ್ಲಾಂಗೆ ಸಂಬಂಧಪಟ್ಟದ್ದು ಎಂಬ ಆರೋಪದಲ್ಲಿ ನನಗೆ ಅನುಮತಿ ನೀಡಲಾಗಿಲ್ಲ ಎಂದ ನಾಯ್ಕ್ ,ಉಗ್ರರು ಸಾಮಾನ್ಯ ಮುಸ್ಲಿಮರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
Comments are closed.